ರಸ್ತೆ ಅಪಘಾತ: ಹಿರಿಯ ನಟ ಪಂಕಜ್ ತ್ರಿಪಾಠಿಯವರ ಭಾವ ಮೃತ್ಯು, ಸಹೋದರಿಗೆ ಗಾಯ
ರಾಕೇಶ್ ತಿವಾರಿ | PC : indiatoday.in
ಧನಬಾದ್ (ಝಾರ್ಖಂಡ್): ಶನಿವಾರ ಸಂಭವಿಸಿದ ರಸ್ತೆ ಅಪಘಾತದಲ್ಲಿ ಹಿರಿಯ ಬಾಲಿವುಡ್ ನಟ ಪಂಕಜ್ ತ್ರಿಪಾಠಿಯವರ ಭಾಮೈದುನ ಮೃತಪಟ್ಟು, ಅವರ ಸಹೋದರಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ಝಾರ್ಖಂಡ್ ನ ಧನಬಾಗ್ ಬಳಿ ನಡೆದಿದೆ. ಈ ಅಪಘಾತದಲ್ಲಿ ಪಂಕಜ್ ತ್ರಿಪಾಠಿ ಅವರ ಭಾವ ರಾಕೇಶ್ ತಿವಾರಿ ಮೃತಪಟ್ಟಿದ್ದು, ಅವರ ಸಹೋದರಿ ಸಬಿತಾ ತಿವಾರಿ ಗಾಯಗೊಂಡಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಾಥಮಿಕ ತನಿಖೆಯ ಪ್ರಕಾರ, ಈ ಅಪಘಾತವು ಶನಿವಾರ ಸಂಜೆ 4.30ರ ವೇಳೆಗೆ ದಿಲ್ಲಿ-ಕೋಲ್ಕತ್ತಾ ರಾಷ್ಟ್ರೀಯ ಹೆದ್ದಾರಿ-2ರಲ್ಲಿ ನಡೆದಿದ್ದು, ದಂಪತಿ ಪ್ರಯಾಣಿಸುತ್ತಿದ್ದ ಕಾರು ರಸ್ತೆ ವಿಭಜಕಕ್ಕೆ ಢಿಕ್ಕಿ ಹೊಡೆದಿದ್ದರಿಂದ ಈ ಅಪಘಾತ ಸಂಭವಿಸಿದೆ ಎಂದು ಹೇಳಲಾಗಿದೆ.
ದಂಪತಿಗಳು ಬಿಹಾರದ ಗೋಪಾಲ್ ಗಂಜ್ ಜಿಲ್ಲೆಯಿಂದ ಪಶ್ಚಿಮ ಬಂಗಾಳಕ್ಕೆ ತೆರಳುತ್ತಿದ್ದರು ಎಂದು ಹೇಳಲಾಗಿದೆ.
ದಂಪತಿಯನ್ನು ಕೂಡಲೇ ಧನಬಾದ್ ನಲ್ಲಿರುವ ಶಾಹಿದ್ ನಿರ್ಮಲ್ ಮಹ್ತೊ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಸಾಗಿಸಲಾಯಿತಾದರೂ, ರಾಕೇಶ್ ತಿವಾರಿ ಮಾರ್ಗಮಧ್ಯದಲ್ಲೇ ಮೃತಪಟ್ಟಿದ್ದಾರೆ ಎಂದು ವೈದ್ಯರು ಘೋಷಿಸಿದರು.
ಈ ನಡುವೆ, ಪಂಕಜ್ ತ್ರಿಪಾಠಿಯವರ ಸಹೋದರಿ ಕಾಲಿಗೆ ಗಂಭೀರ ಗಾಯವಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಶಾಹಿದ್ ನಿರ್ಮಲ್ ಮಹ್ತೊ ವೈದ್ಯಕೀಯ ಕಾಲೇಜು ಆಸ್ಪತ್ರೆಯ ತುರ್ತು ಚಿಕಿತ್ಸಾ ಘಟಕದ ಮುಖ್ಯಸ್ಥ ದಿನೇಶ್ ಕುಮಾರ್ ಗಿಂದೌರಿಯಾ ಹೇಳಿದ್ದಾರೆ ಎಂದು PTI ಸುದ್ದಿ ಸಂಸ್ಥೆ ವರದಿ ಮಾಡಿದೆ.
ಅಪಘಾತ ಸಂಭವಿಸಿದಾಗ ರಾಕೇಶ್ ತಿವಾರಿಯವರೇ ಕಾರನ್ನು ಚಲಾಯಿಸುತ್ತಿದ್ದರು. ಅವರ ನಿಯಂತ್ರಣ ಕಳೆದುಕೊಂಡ ಕಾರು ರಸ್ತೆ ವಿಭಜಕಕ್ಕೆ ಢಿಕ್ಕಿ ಹೊಡೆಯಿತು ಎಂದು ಪೊಲೀಸರು ತಿಳಿಸಿದ್ದಾರೆ. ಅಪಘಾತದ ನಿಖರ ಕಾರಣಗಳನ್ನು ಪತ್ತೆ ಹಚ್ಚಲು ಪೊಲೀಸರು ತನಿಖೆ ಕೈಗೊಂಡಿದ್ದಾರೆ.