2,929 ಕೋಟಿ ರೂ.ವಂಚನೆ ಪ್ರಕರಣ : ಅನಿಲ್ ಅಂಬಾನಿ ವಿರುದ್ಧ ಮತ್ತೊಂದು ಪ್ರಕರಣ ದಾಖಲಿಸಿದ ಜಾರಿ ನಿರ್ದೇಶನಾಲಯ
Photo | NDTV
ಹೊಸ ದಿಲ್ಲಿ: 2,929 ಕೋಟಿ ರೂ. ಬ್ಯಾಂಕ್ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅನಿಲ್ ಅಂಬಾನಿ ಹಾಗೂ ರಿಲಯನ್ಸ್ ಕಮ್ಯುನಿಕೇಶನ್ಸ್ ವಿರುದ್ಧ ಈ ವಾರ ಜಾರಿ ನಿರ್ದೇಶನಾಲಯ ಹೊಸ ಪ್ರಕರಣ ದಾಖಲಿಸಿದೆ. ಇತ್ತೀಚೆಗೆ ದಿವಾಳಿಯಾಗಿರುವ ಅನಿಲ್ ಅಂಬಾನಿ ವಿರುದ್ಧ ಸಿಬಿಐ ದಾಳಿ ನಡೆಸಿದ ಬೆನ್ನಿಗೆ ಈ ಬೆಳವಣಿಗೆ ನಡೆದಿದೆ.
ಅನಿಲ್ ಅಂಬಾನಿ ವಿರುದ್ಧ ಜಾರಿ ನಿರ್ದೇಶನಾಲಯ ಈವರೆಗೆ ಮೂರು ಅಕ್ರಮ ಹಣ ವರ್ಗಾವಣೆ ಪ್ರಕರಣ ದಾಖಲಿಸಿಕೊಂಡಿದೆ. ಬ್ಯಾಂಕ್ ವಂಚನೆಯ ಪ್ರಮಾಣ 17,000 ಕೋಟಿ ರೂ. ದಾಟಿದೆ ಎಂದು ಆರೋಪಿಸಿದೆ. ಆದರೆ, ಈ ಆರೋಪಗಳನ್ನು ಪದೇ ಪದೇ ನಿರಾಕರಿಸಿರುವ ಅನಿಲ್ ಅಂಬಾನಿ, ನನ್ನನ್ನು ಈ ದಂಡನಾರ್ಹ ಕ್ರಮಕ್ಕೆ ಏಕಾಂಗಿಯಾಗಿ ಗುರಿಯಾಗಿಸಿಕೊಳ್ಳಲಾಗಿದೆ ಎಂದು ಪ್ರತ್ಯಾರೋಪ ಮಾಡಿದ್ದಾರೆ.
ವರದಿಗಳ ಪ್ರಕಾರ, ಕಳೆದ ತಿಂಗಳು ಸಿಬಿಐ ದಾಖಲಿಸಿಕೊಂಡ ಎಫ್ಐಆರ್ ಅನ್ನು ಆಧರಿಸಿ ಜಾರಿ ನಿರ್ದೇಶನಾಲಯ ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದೆ. ಅನಿಲ್ ಅಂಬಾನಿ ಹಾಗೂ ರಿಲಯನ್ಸ್ ಕಮ್ಯುನಿಕೇಶನ್ಸ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾಗೆ ವಂಚಿಸುವ ಮೂಲಕ 2,929.05 ಕೋಟಿ ರೂ. ನಷ್ಟ ಉಂಟು ಮಾಡಿವೆ ಎಂದು ಆರೋಪಿಸಲಾಗಿದೆ.
ಸಿಬಿಐ ಕೂಡಾ ಕಳೆದ ತಿಂಗಳು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಅನಿಲ್ ಅಂಬಾನಿ ನಿವಾಸ ಹಾಗೂ ರಿಲಯನ್ಸ್ ಕಮ್ಯುನಿಕೇಶನ್ಸ್ ಕಚೇರಿಯ ಮೇಲೆ ದಾಳಿ ನಡೆಸಿತ್ತು.