×
Ad

ಪತ್ರಕರ್ತ ಲಾಂಗಾ ವಿರುದ್ಧದ ಅಕ್ರಮ ಹಣ ವರ್ಗಾವಣೆ ಪ್ರಕರಣ: ಈಡಿಗೆ ಸುಪ್ರೀಂ ಕೋರ್ಟ್ ನೋಟಿಸ್

Update: 2025-09-08 16:32 IST

Photo credit: PTI

ಹೊಸದಿಲ್ಲಿ: ವಂಚನೆ ಅಪರಾಧ ಸೇರಿದಂತೆ ಎರಡು ಎಫ್‌ಐಆರ್‌ಗಳಿಗೆ ಸಂಬಂಧಿಸಿದಂತೆ ದಾಖಲಾಗಿರುವ ಅಕ್ರಮ ಹಣ ಪ್ರಕರಣದಲ್ಲಿ ಆರೋಪಿಯಾಗಿರುವ ಗುಜರಾತಿನ ಪತ್ರಕರ್ತ ಮಹೇಶ್ ಲಾಂಗಾ ಸಲ್ಲಿಸಿರುವ ಮೇಲ್ಮನವಿಯನ್ನು ಆಲಿಸಿದ ಬಳಿಕ ಸರ್ವೋಚ್ಚ ನ್ಯಾಯಾಲಯವು ಜಾರಿ ನಿರ್ದೇಶನಾಲಯ(ಈಡಿ) ಮತ್ತು ಇತರರಿಗೆ ನೋಟಿಸ್ ಹೊರಡಿಸಿದೆ.

ರಾಷ್ಟ್ರೀಯ ಪತ್ರಿಕೆಯೊಂದರ ಹಿರಿಯ ಪತ್ರಕರ್ತರಾಗಿರುವ ಲಾಂಗಾ ಆ.1ರಂದು ಗುಜರಾತ್ ಉಚ್ಚ ನ್ಯಾಯಾಲಯವು ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ತನ್ನ ನಿಯಮಿತ ಜಾಮೀನು ಅರ್ಜಿಯನ್ನು ವಜಾಗೊಳಿಸಿದ ಬಳಿಕ ಸರ್ವೋಚ್ಚ ನ್ಯಾಯಾಲಯದ ಮೆಟ್ಟಿಲನ್ನೇರಿದ್ದಾರೆ.

ಮೊದಲ ಎರಡು ಎಫ್‌ಐಆರ್‌ಗಳಲ್ಲಿ ತನ್ನ ಕಕ್ಷಿದಾರರು ನಿರೀಕ್ಷಣಾ ಜಾಮೀನು ಪಡೆದುಕೊಂಡಿದ್ದಾರೆ. ಆದರೆ ಮೂರನೇ ಎಫ್‌ಐಆರ್‌ನಲ್ಲಿ ಅವರ ವಿರುದ್ಧ ಆದಾಯ ತೆರಿಗೆ ವಂಚನೆ ಆರೋಪವನ್ನು ಹೊರಿಸಲಾಗಿದೆ ಎಂದು ಲಾಂಗಾ ಪರ ಹಿರಿಯ ವಕೀಲ ಕಪಿಲ್ ಸಿಬಲ್ ಅವರು ಸೋಮವಾರ ವಿಚಾರಣೆ ಸಂದರ್ಭದಲ್ಲಿ ವಾದಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ನ್ಯಾ.ಸೂರ್ಯಕಾಂತ ಅವರು,ಹಲವಾರು ನಿಜವಾದ ಪತ್ರಕರ್ತರಿದ್ದಾರೆ,ಆದರೆ ತಮ್ಮ ಸ್ಕೂಟರ್‌ನಲ್ಲಿ ಪತ್ರಕರ್ತರು ಎಂದು ಬರೆದುಕೊಂಡಿರುವ ಜನರೂ ಇದ್ದಾರೆ ಮತ್ತು ಅವರು ಏನು ಮಾಡುತ್ತಾರೆ ಎನ್ನುವುದು ಎಲ್ಲರಿಗೂ ತಿಳಿದಿದೆ ಎಂದು ಹೇಳಿದರು.

ಆದಾಗ್ಯೂ,ಸಿಬಲ್ ಇವೆಲ್ಲ ಆರೋಪಗಳು ಎಂದು ಉತ್ತರಿಸಿದರು.

ಲಾಂಗಾ ವಿರುದ್ಧದ ಅಕ್ರಮ ಹಣ ವರ್ಗಾವಣೆ ಪ್ರಕರಣವು ವಂಚನೆ,ಕ್ರಿಮಿನಲ್ ದುರುಪಯೋಗ,ಕ್ರಿಮಿನಲ್ ವಿಶ್ವಾಸ ದ್ರೋಹ,ಮೋಸ ಮತ್ತು ಕೆಲವು ಜನರಿಗೆ ಲಕ್ಷಾಂತರ ರೂ.ಹಾನಿಯನ್ನುಂಟು ಮಾಡಿದ ಆರೋಪದಲ್ಲಿ ಅಹ್ಮದಾಬಾದ್ ಪೋಲಿಸರು ದಾಖಲಿಸಿರುವ ಎರಡು ಎಫ್‌ಆರ್‌ಗಳನ್ನು ಆಧರಿಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News