ಬಿಸಿಸಿಐಗೆ ದಂಡ ಭರಿಸಲು ನಿರ್ದೇಶನ ನೀಡುವಂತೆ ಲಲಿತ್ ಮೋದಿ ಮನವಿ: ಅರ್ಜಿ ವಜಾಗೊಳಿಸಿದ ಸುಪ್ರೀಂ ಕೋರ್ಟ್
ಲಲಿತ್ ಮೋದಿ (Photo: Instagram/ @lalitkmodi)
ಹೊಸದಿಲ್ಲಿ: 2020ರ ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆಯ ನಿಯಮಗಳನ್ನು ಉಲ್ಲಂಘಿಸಿದ ಆರೋಪಕ್ಕಾಗಿ ಜಾರಿ ನಿರ್ದೇಶನಾಲಯ (ED) ತಮಗೆ ವಿಧಿಸಿರುವ 10.65 ಕೋಟಿ ರೂ. ದಂಡವನ್ನು ಪಾವತಿಸುವಂತೆ ಬಿಸಿಸಿಐಗೆ ನಿರ್ದೇಶನ ನೀಡಬೇಕು ಎಂದು ಕೋರಿ ಇಂಡಿಯನ್ ಪ್ರೀಮಿಯರ್ ಲೀಗ್ (IPL) ಸಂಸ್ಥಾಪಕ ಲಲಿತ್ ಮೋದಿ ಸಲ್ಲಿಸಿದ್ದ ಅರ್ಜಿಯನ್ನು ಸೋಮವಾರ ಸುಪ್ರೀಂ ಕೋರ್ಟ್ ವಜಾಗೊಳಿಸಿದೆ. ಆದರೂ, ಕಾನೂನಿನ ಪ್ರಕಾರ ಲಭ್ಯವಿರುವ ನಾಗರಿಕ ಪರಿಹಾರಗಳನ್ನು ಪಡೆಯಲು ಲಲಿತ್ ಮೋದಿ ಅರ್ಹರು ಎಂದು ನ್ಯಾ. ಪಿ.ಎಸ್.ನರಸಿಂಹ ಹಾಗೂ ನ್ಯಾ. ಆರ್.ಮಹಾದೇವನ್ ಅವರನ್ನೊಳಗೊಂಡ ನ್ಯಾಯಪೀಠ ಅಭಿಪ್ರಾಯ ಪಟ್ಟಿದೆ.
ಜಾರಿ ನಿರ್ದೇಶನಾಲಯ ತನಗೆ ವಿಧಿಸಿರುವ 10.65 ಕೋಟಿ ರೂ. ದಂಡವನ್ನು ಪಾವತಿಸುವಂತೆ ಬಿಸಿಸಿಐಗೆ ನಿರ್ದೇಶನ ನೀಡಬೇಕು ಎಂದು ಕೋರಿ ಲಲಿತ್ ಮೋದಿ ಸಲ್ಲಿಸಿದ್ದ ಅರ್ಜಿಯನ್ನು ಡಿಸೆಂಬರ್ 19, 2024ರಂದು ವಜಾಗೊಳಿಸಿದ್ದ ಬಾಂಬೆ ಹೈಕೋರ್ಟ್, ಲಲಿತ್ ಮೋದಿಗೆ ಒಂದು ಲಕ್ಷ ರೂ. ದಂಡವನ್ನೂ ವಿಧಿಸಿತ್ತು.
ಈ ಅರ್ಜಿಯ ವಿಚಾರಣೆ ನಡೆಸಿದ್ದ ಬಾಂಬೆ ಹೈಕೋರ್ಟ್, ಸುಪ್ರೀಂ ಕೋರ್ಟ್ ನ ಸ್ಪಷ್ಟ ಆದೇಶಗಳ ಹೊರತಾಗಿಯೂ, ಲಲಿತ್ ಮೋದಿ ಕ್ಷುಲ್ಲಕ ಮತ್ತು ಸಂಪೂರ್ಣ ಅಪಕಲ್ಪನೆಯಿಂದ ಅರ್ಜಿ ಸಲ್ಲಿಸಿದ್ದಾರೆ ಎಂದು ತನ್ನ ಆದೇಶದಲ್ಲಿ ಹೇಳಿತ್ತು. ಬಳಿಕ, ಬಾಂಬೆ ಹೈಕೋರ್ಟ್ ನ ಆದೇಶವನ್ನು ಪ್ರಶ್ನಿಸಿ ಲಲಿತ್ ಮೋದಿ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದರು.
ಐಪಿಲ್ ಮುಖ್ಯಸ್ಥರಾಗಿದ್ದ ವೇಳೆ ಕೋಟ್ಯಂತರ ರೂಪಾಯಿ ವಂಚನೆ ನಡೆಸಿದ ಆರೋಪವನ್ನು ಎದುರಿಸುತ್ತಿರುವ ಲಲಿತ್ ಮೋದಿ, ಸದ್ಯ ಲಂಡನ್ ನಲ್ಲಿ ನೆಲೆಸಿದ್ದಾರೆ ಎಂದು ಹೇಳಲಾಗಿದೆ. ತಮ್ಮ ವಿರುದ್ಧ ಮ್ಯಾಚ್ ಫಿಕ್ಸಿಂಗ್ ಹಾಗೂ ಸ್ಪಾಟ್ ಫಿಕ್ಸಿಂಗ್ ಆರೋಪಗಳು ಕೇಳಿ ಬಂದ ಬೆನ್ನಿಗೇ, 2010ರಲ್ಲಿ ಅವರು ಭಾರತದಿಂದ ಪಲಾಯನಗೈದಿದ್ದರು.