×
Ad

ಎಲ್ಲಿ ನನ್ನ ಅಚ್ಚುಮೆಚ್ಚಿನ ಪತ್ರಕರ್ತ?: ಪತ್ರಿಕಾಗೋಷ್ಠಿಯಲ್ಲಿ ವರದಿಗಾರನನ್ನು ಟ್ರೋಲ್ ಮಾಡಿದ ಶುಭಮನ್ ಗಿಲ್!

Update: 2025-07-07 18:18 IST

ಶುಭಮನ್ ಗಿಲ್ | Screenbrab : x \ @AnkanKar

ಎಜ್ಬಾಸ್ಟನ್: ಆತಿಥೇಯ ಇಂಗ್ಲೆಂಡ್ ತಂಡದ ವಿರುದ್ಧ ನಡೆದ ಎರಡನೆ ಪಂದ್ಯದಲ್ಲಿ ಯಾರೂ ಊಹಿಸಿರದ ರೀತಿಯಲ್ಲಿ ಭಾರತ ತಂಡ ಗೆಲುವು ಸಾಧಿಸುವ ಮೂಲಕ, ಆತಿಥೇಯ ಇಂಗ್ಲೆಂಡ್ ತಂಡವನ್ನು ಇದೇ ಪ್ರಥಮ ಬಾರಿಗೆ ಎಜ್ಬಾಸ್ಟನ್ ಕ್ರೀಡಾಂಗಣದಲ್ಲಿ ಪರಾಭವಗೊಳಿಸಿದ ಸಾಧನೆಗೆ ಭಾಜನವಾಗಿದೆ.

ಈ ಜಯಭೇರಿಯ ನಂತರ ನಡೆದ ಪತ್ರಿಕಾಗೋಷ್ಠಿಯಲ್ಲಿ ಹೆಮ್ಮೆಯಿಂದ ಬೀಗುತ್ತಿದ್ದ ಭಾರತ ತಂಡದ ನಾಯಕ ಶುಭಮನ್ ಗಿಲ್, ಪತ್ರಕರ್ತರಿಂದ ಪ್ರಶ್ನೆಗಳನ್ನು ಎದುರಿಸಲು ಸಿದ್ಧವಾಗುತ್ತಿದ್ದಂತೆಯೇ, “ಎಲ್ಲಿ ನನ್ನ ಅಚ್ಚುಮೆಚ್ಚಿನ ಪತ್ರಕರ್ತ?” ಎಂದು ಪ್ರಶ್ನಿಸುವ ಮೂಲಕ, ವರದಿಗಾರರೊಬ್ಬರನ್ನು ಟ್ರೋಲ್ ಮಾಡಿರುವುದು ಚರ್ಚೆಗೆ ಗ್ರಾಸವಾಗಿದೆ.

ಇದಕ್ಕೂ ಮುನ್ನ, ಇಂಗ್ಲಿಷ್ ಪತ್ರಕರ್ತರೊಬ್ಬರು, “ಭಾರತ ತಂಡಕ್ಕೆ ಎಜ್ಬಾಸ್ಟನ್ ಕ್ರೀಡಾಂಗಣದಲ್ಲಿ ಗೆಲುವು ಸಾಧಿಸಿದ ಇತಿಹಾಸವೇ ಇಲ್ಲವಲ್ಲ?” ಎಂದು ಭಾರತ ತಂಡದ ನಾಯಕ ಶುಭಮನ್ ಗಿಲ್ ರ ಕಾಲೆಳೆದಿದ್ದರು. ಈ ವ್ಯಂಗ್ಯಕ್ಕೆ ಪ್ರತಿಯಾಗಿ ಶುಭಮನ್ ಗಿಲ್ ಕೂಡಾ ಪಂದ್ಯ ಮುಕ್ತಾಯಗೊಂಡ ನಂತರ, ಆ ಪ್ರಶ್ನೆ ಕೇಳಿದ್ದ ಪರ್ತಕರ್ತರನ್ನು ಟ್ರೋಲ್ ಮಾಡಿ, ತಮ್ಮ ಸೇಡು ತೀರಿಸಿಕೊಂಡಿದ್ದಾರೆ.

ಲೀಡ್ಸ್ ನಲ್ಲಿ ನಡೆದಿದ್ದ ಪ್ರಥಮ ಟೆಸ್ಟ್ ಪಂದ್ಯದಲ್ಲಿ ಆರಂಭಿಕ ಮೇಲುಗೈ ಸಾಧಿಸಿದ ನಂತರವೂ, ಭಾರತ ತಂಡ ವೀರೋಚಿರ ಸೋಲು ಅನುಭವಿಸಿ, ಎಜ್ಬಾಸ್ಟನ್ ಗೆ ಬಂದಿಳಿದಿತ್ತು. ಈ ಮೈದಾನದಲ್ಲಿ ಯಾರದೇ ನಾಯಕತ್ವದ ಭಾರತ ತಂಡ ಗೆಲುವು ಸಾಧಿಸಿದ ನಿದರ್ಶನವೇ ಇಲ್ಲಿಯವರೆಗೆ ಇರಲಿಲ್ಲ. ಹೀಗಾಗಿ, ಪಂದ್ಯ ಪ್ರಾರಂಭಕ್ಕೂ ಮುನ್ನ, ಬ್ರಿಟಿಷ್ ಪತ್ರಕರ್ತರೊಬ್ಬರು, “ನಿಮಗಿಲ್ಲ ಗೆಲುವಿನ ಇತಿಹಾಸವೇ ಇಲ್ಲವಲ್ಲ” ಎಂದು ಭಾರತ ತಂಡದ ನಾಯಕ ಶುಭಮನ್ ಗಿಲ್ ರನ್ನು ಛೇಡಿಸಿದ್ದರು.

ಇದಲ್ಲದೆ, ಈ ಪಂದ್ಯದಲ್ಲಿ ಭಾರತ ತಂಡದ ಪ್ರಮುಖ ಬೌಲಿಂಗ್ ಅಸ್ತ್ರ ಜಸ್ಪ್ರೀತ್ ಬುಮ್ರಾಗೆ ವಿಶ್ರಾಂತಿ ನೀಡುವ ನಿರ್ಧಾರಕ್ಕೆ ತಂಡದ ಆಡಳಿತ ಮಂಡಳಿ ಬಂದಿದ್ದರಿಂದ, ಈ ಪಂದ್ಯದಲ್ಲಿ ಭಾರತ ತಂಡ ಗೆಲುವು ಸಾಧಿಸಬಹುದು ಎಂಬ ವಿಶ್ವಾಸವಿರಲಿ, ಒಂದು ಸಣ್ಣ ಅಂದಾಜೂ ಕೂಡಾ ಇರಲಿಲ್ಲ. ಆದರೆ, ಭಾರತ ತಂಡದ ನಾಯಕ ಶುಭಮನ್ ಗಿಲ್ ಎರಡೂ ಇನಿಂಗ್ಸ್ ಗಳಲ್ಲಿ ತೋರಿದ ಅಮೋಘ ಬ್ಯಾಟಿಂಗ್ ಪ್ರದರ್ಶನ, ಆರಂಭಿಕ ಬ್ಯಾಟರ್ ಗಳಾದ ಯಶಸ್ವಿ ಜೈಸ್ವಾಲ್ ಹಾಗೂ ಕೆ.ಎಲ್.ರಾಹುಲ್ ರ ಉಪಯುಕ್ತ ಕೊಡುಗೆ, ಮಧ್ಯಮ ಕ್ರಮಾಂಕದಲ್ಲಿ ಅಬ್ಬರಿಸಿದ ಉಪ ನಾಯಕ ರಿಷಭ್ ಪಂತ್ ಹಾಗೂ ಆಲ್ ರೌಂಡರ್ ರವೀಂದ್ರ ಜಡೇಜಾರಲ್ಲದೆ, ಬೌಲಿಂಗ್ ವಿಭಾಗದಲ್ಲಿ ಅಸಾಧಾರಣ ಪ್ರದರ್ಶನ ನೀಡಿದ ಮುಹಮ್ಮದ್ ಸಿರಾಜ್ ಮತ್ತು ಆಕಾಶ್ ದೀಪ್ ರಿಂದಾಗಿ ಭಾರತ ತಂಡ ಎರಡನೆ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ತಂಡವನ್ನು 336 ರನ್ ಗಳಿಂದ ಮಣಿಸುವ ಮೂಲಕ, ಪ್ರಥಮ ಪಂದ್ಯದ ಸೋಲಿನ ಬಾಕಿಯನ್ನು ಚುಕ್ತಾ ಮಾಡಿತು.

“ನಾನು ನಿಜಕ್ಕೂ ಇತಿಹಾಸ ಹಾಗೂ ಅಂಕಿ-ಸಂಖ್ಯೆಯಲ್ಲಿ ನಂಬಿಕೆ ಹೊಂದಿಲ್ಲವೆಂದು ಟೆಸ್ಟ್ ಪಂದ್ಯಕ್ಕೂ ಮುನ್ನವೇ ಹೇಳಿದ್ದೆ. ಕಳೆದ 56 ವರ್ಷಗಳಲ್ಲಿ ನಾವಿಲ್ಲಿ ಒಂಭತ್ತು ಪಂದ್ಯಗಳನ್ನು ಆಡಿದ್ದೇವೆ. ವಿಭಿನ್ನ ತಂಡಗಳು ಇಲ್ಲಿಗೆ ಆಗಮಿಸಿವೆ. ಇಂಗ್ಲೆಂಡ್ ಗೆ ನಾವು ಒಂದು ಉತ್ತಮ ತಂಡವಾಗಿ ಬಂದಿದ್ದೇವೆ. ನಮಗೆ ಅವರನ್ನು ಮಣಿಸುವ ಸಾಮರ್ಥ್ಯವಿದೆ. ನಾವು ಇಲ್ಲಿಂದ ಸರಣಿ ಗೆಲುವು ಸಾಧಿಸಿ ತವರಿಗೆ ಮರಳುತ್ತೇವೆ ಎಂಬ ವಿಶ್ವಾಸ ನನಗಿದೆ. ನಾವು ನಿರಂತರವಾಗಿ ಸಮರ್ಪಕ ನಿರ್ಧಾರಗಳನ್ನು ಕೈಗೊಳ್ಳುತ್ತಾ, ಹೋರಾಟ ನಡೆಸುವುದನ್ನು ಮುಂದುವರಿಸಿದರೆ, ಬಹುಶಃ ಈ ಸರಣಿ ಸ್ಮರಣೀಯವಾಗಲಿದೆ ಎಂಬುದು ನನ್ನ ಭಾವನೆಯಾಗಿದೆ” ಎಂದೂ ಅವರು ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News