×
Ad

ದಕ್ಷಿಣ ಭಾರತದ ರಾಜ್ಯಗಳು ಇನ್ನು ಮುಂದೆ ಹೊಸ ವೈದ್ಯಕೀಯ ಕಾಲೇಜುಗಳನ್ನು ತೆರೆಯುವಂತಿಲ್ಲ!

Update: 2023-09-29 10:40 IST

ಸಾಂದರ್ಭಿಕ ಚಿತ್ರ (Photo credit:freepik.com)

ಹೊಸದಿಲ್ಲಿ: ಇನ್ನು ಮುಂದೆ ದಕ್ಷಿಣ ಭಾರತದ ಯಾವುದೇ ಐದು ರಾಜ್ಯಗಳೂ ನೂತನ ವೈದ್ಯಕೀಯ ಕಾಲೇಜನ್ನು ತೆರೆಯುವಂತಿಲ್ಲ ಹಾಗೂ ಈಗಾಗಲೇ ಅಸ್ತಿತ್ವದಲ್ಲಿರುವ ವೈದ್ಯಕೀಯ ಕಾಲೇಜುಗಳಲ್ಲಿ ಹೆಚ್ಚುವರಿ ಎಂಬಿಬಿಎಸ್ ಸೀಟುಗಳನ್ನು ಸೇರ್ಪಡೆ ಮಾಡುವಂತಿಲ್ಲ!. ಹೀಗೊಂದು ವಿವಾದಾತ್ಮಕ ಮಾರ್ಗಸೂಚಿಯನ್ನು ರಾಷ್ಟ್ರೀಯ ವೈದ್ಯಕೀಯ ಆಯೋಗ ಹೊರಡಿಸಿದ್ದು, ಈ ಮಾರ್ಗಸೂಚಿಯು ಮುಂದಿನ ವೈದ್ಯಕೀಯ ಪದವಿ ಶೈಕ್ಷಣಿಕ ಅವಧಿಯಲ್ಲಿ ಜಾರಿಯಾಗಲಿದೆ ಎಂದು deccanherald.com ವರದಿ ಮಾಡಿದೆ.

ಆಗಸ್ಟ್ 16, 2023ರಂದು ಈ ಮಾರ್ಗಸೂಚಿಗಳ ಅಧಿಸೂಚನೆಯನ್ನು ಕೇಂದ್ರ ಸರ್ಕಾರ ಹೊರಡಿಸಿದೆ. ಈ ಅಧಿಸೂಚನೆಯನ್ವಯ ರಾಜ್ಯಗಳಲ್ಲಿನ ಎಂಬಿಬಿಎಸ್ ಸೀಟುಗಳ ಸಂಖ್ಯೆಗೆ ಮಿತಿ ಹೇರಲಾಗುತ್ತದೆ ಮಾತ್ರವಲ್ಲ; ರಾಜ್ಯಗಳಲ್ಲಿನ 10 ಲಕ್ಷ ಜನಸಂಖ್ಯೆಗೆ 100 ಎಂಬಿಬಿಎಸ್ ಸೀಟುಗಳನ್ನು ಮಾತ್ರ ನಿಗದಿಗೊಳಿಸಲಿದೆ.

"ವೈದ್ಯಕೀಯ ಪದವಿ ಕಾಲೇಜುಗಳ ಆರಂಭಕ್ಕೆ ಸಲ್ಲಿಕೆಯಾಗುವ ಅರ್ಜಿಗಳು 50, 100, 150 ಸೀಟುಗಳ ಮಿತಿಯನ್ನು ಹೊಂದಿದ್ದರೆ ಮಾತ್ರ ಅನುಮತಿ ನೀಡಲಾಗುತ್ತದೆ ಹಾಗೂ ಪ್ರತಿ ರಾಜ್ಯದಲ್ಲಿನ 10 ಲಕ್ಷ ಜನಸಂಖ್ಯೆಗೆ 100 ಎಂಬಿಬಿಎಸ್ ಸೀಟುಗಳ ಅನುಪಾತದ ಮಿತಿಯನ್ನು ಹೇರಲಾಗುತ್ತದೆ" ಎಂದೂ ಮಾರ್ಗಸೂಚಿಯಲ್ಲಿ ಹೇಳಲಾಗಿದೆ. ಇದರರ್ಥ ದಕ್ಷಿಣ ಭಾರತದ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶವಾದ ಪುದುಚೇರಿಯಲ್ಲಿ ಈಗಾಗಲೇ ರಾಷ್ಟ್ರೀಯ ವೈದ್ಯಕೀಯ ಆಯೋಗ ನಿಗದಿಪಡಿಸಿರುವ ಅನುಪಾತ (10 ಲಕ್ಷ ಜನಸಂಖ್ಯೆಗೆ 100 ವೈದ್ಯಕೀಯ ಸೀಟುಗಳು) ಮೀರಿವೆ.

2021ರಲ್ಲಿ ಸಂಸತ್ತಿಗೆ ಒದಗಿಸಲಾಗಿರುವ ದತ್ತಾಂಶದ ಪ್ರಕಾರ, 7.64 ಕೋಟಿ ಜನಸಂಖ್ಯೆ ಹೊಂದಿರುವ ತಮಿಳುನಾಡಿನಲ್ಲಿ 11,600 ಸೀಟುಗಳಿವೆ. ಕರ್ನಾಟಕ 11,695 (6.68 ಕೋಟಿ), ಆಂಧ್ರಪ್ರದೇಶ 6,435 (5.27 ಕೋಟಿ), ಕೇರಳ 4,655 (3.54 ಕೋಟಿ) ಹಾಗೂ ತೆಲಂಗಾಣ 8,540 (3.77 ಕೋಟಿ) ಸೀಟುಗಳನ್ನು ಈಗಾಗಲೇ ಹೊಂದಿವೆ.

ನೂತನ ಮಾರ್ಗಸೂಚಿಗಳ ಪ್ರಕಾರ, ತಮಿಳುನಾಡು ಸುಮಾರು 7,600, ಕರ್ನಾಟಕ 6,700, ಆಂಧ್ರಪ್ರದೇಶ 5,300, ಕೇರಳ 3,500 ಹಾಗೂ ತೆಲಂಗಾಣ 3,700 ಸೀಟುಗಳನ್ನು ಮಾತ್ರ ಹೊಂದಿರಬೇಕಿದೆ. ಇದಲ್ಲದೆ ವೈದ್ಯ ಜನಸಂಖ್ಯೆಯ ಅನುಪಾತವಾದ 1:1000ಕ್ಕೆ ಹೋಲಿಸಿದರೆ ದಕ್ಷಿಣ ಭಾರತದಲ್ಲಿ ಈ ಅನುಪಾತವು 1:854 ಇದೆ.

ಈ ನೂತನ ಮಾರ್ಗಸೂಚಿಯಿಂದ ಪ್ರತಿ ಜಿಲ್ಲೆಗಳಲ್ಲಿ ಒಂದು ವೈದ್ಯಕೀಯ ಕಾಲೇಜು ಸ್ಥಾಪಿಸಬೇಕು ಎಂಬ ತಮಿಳುನಾಡು ಮತ್ತು ಕರ್ನಾಟಕ ರಾಜ್ಯಗಳ ಯೋಜನೆಗೆ ಹೊಡೆತ ಬೀಳಲಿದೆ ಮಾತ್ರವಲ್ಲ; ರಾಜ್ಯಗಳ ಆರೋಗ್ಯ ಸೇವೆ ಒದಗಿಸುವ ಹಾಗೂ ತಮ್ಮ ನಾಗರಿಕರಿಗೆ ಶಿಕ್ಷಣ ನೀಡುವ ಹಕ್ಕನ್ನು ಮೊಟಕುಗೊಳಿಸಲಿವೆ ಎಂಬ ಆರೋಪಗಳು ಕೇಳಿ ಬಂದಿವೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News