×
Ad

'ಹೇರಾ ಫೇರಿ 3' ಚಲನಚಿತ್ರ ನಿರ್ಮಾಣವಾಗದಿದ್ದರೂ ಪರವಾಗಿಲ್ಲ, ಪರೇಶ್ ರಾವಲ್ ಹಾಗೂ ಅಕ್ಷಯ್ ಕುಮಾರ್ ನಡುವೆ ನನಗೆ ವೈರತ್ವ ಬೇಕಿಲ್ಲ: ನಟ ಸುನೀಲ್ ಶೆಟ್ಟಿ

Update: 2025-05-21 20:48 IST

Credit: Prime Video

ಹೊಸದಿಲ್ಲಿ: 'ಹೇರಾ ಫೇರಿ 3' ಚಲನಚಿತ್ರದ ನಿರ್ಮಾಣವಾಗದಿದ್ದರೂ ಪರವಾಗಿಲ್ಲ; ಆದರೆ, ಅಕ್ಷಯ್ ಕುಮಾರ್ ಹಾಗೂ ಪರೇಶ್ ರಾವಲ್ ನಡುವೆ ವೈರತ್ವ ಬೆಳೆಯುವುದು ನನಗೆ ಬೇಕಿಲ್ಲ ಎಂದು 'ಹೇರಾ ಫೇರಿ 3' ತಾರಾಬಳಗದಿಂದ ಪರೇಶ್ ರಾವಲ್ ಹೊರ ನಡೆದ ನಂತರ, ಜನಪ್ರಿಯ 'ಹೇರಾ ಫೇರಿ' ಚಲನಚಿತ್ರ ಸರಣಿಯ ಮೂರನೆ ಭಾಗದಲ್ಲಿ ಅವರಿಬ್ಬರೊಂದಿಗೆ ನಟಿಸುತ್ತಿರುವ ಖ್ಯಾತ ಬಾಲಿವುಡ್ ನಟ ಸುನೀಲ್ ಶೆಟ್ಟಿ ಸ್ಪಷ್ಟಪಡಿಸಿದ್ದಾರೆ.

ಇದಕ್ಕೂ ಮುನ್ನ, 'ಹೇರಾ ಫೇರಿ 3' ಚಲನಚಿತ್ರದ ಘೋಷಣೆಯ ಹಂತದ ಮಧ್ಯದಲ್ಲೇ ಪರೇಶ್ ರಾವಲ್ ಅವರು ಚಿತ್ರದ ತಾರಾಬಳಗದಿಂದ ಹೊರ ನಡೆದಿದ್ದರು.

ಖ್ಯಾತ ಮಲಯಾಳಂ ನಿರ್ದೇಶಕ ಪ್ರಿಯದರ್ಶನ್ ನಿರ್ದೇಶಿಸಬೇಕಿದ್ದ ಬಾಲಿವುಡ್‌ನ ಬ್ಲಾಕ್‌ ಬಸ್ಟರ್ ಕಾಮಿಡಿ ಹಿಟ್ ಸರಣಿಯಾದ 'ಹೇರಾ ಫೇರಿ'ಯ ಮೂರನೆ ಭಾಗದಲ್ಲಿ ಬಾಬು ಭಯ್ಯಾ ಆಗಿ ಪರೇಶ್ ರಾವಲ್, ರಾಜು ಆಗಿ ಅಕ್ಷಯ್ ಕುಮಾರ್ ಹಾಗೂ ಶ್ಯಾಮ್ ಆಗಿ ಸುನೀಲ್ ಶೆಟ್ಟಿಯನ್ನು ವೀಕ್ಷಿಸಲು ಪ್ರೇಕ್ಷಕರು ತುದಿಗಾಲಲ್ಲಿ ನಿಂತಿದ್ದರು. ಆದರೆ, ಚಿತ್ರದ ಘೋಷಣೆ ಹಂತದ ಮಧ್ಯದಲ್ಲೇ ಬಾಬು ಭಯ್ಯಾ ಪಾತ್ರದಲ್ಲಿ ನಟಿಸಬೇಕಿದ್ದ ಪರೇಶ್ ರಾವಲ್ ತಾರಾಬಳಗದಿಂದ ಹೊರ ನಡೆದಿದ್ದರು. ಈ ಚಿತ್ರ ಇನ್ನೂ ಅಧಿಕೃತವಾಗಿ ಘೋಷಣೆಯಾಗಬೇಕಿದೆ.

ಈ ಚಿತ್ರ ನಿರ್ಮಾಣ ಯೋಜನೆಯಿಂದ ಕಳೆದ ವಾರ ಪರೇಶ್ ರಾವಲ್ ದಿಢೀರೆಂದು ನಿರ್ಗಮಿಸಿರುವುದರಿಂದ, ಈ ಚಿತ್ರದ ಭವಿಷ್ಯ ಡೋಲಾಯಮಾನವಾಗಿದೆ. ವರದಿಗಳ ಪ್ರಕಾರ, 'ಹೇರಾ ಫೇರಿ 3' ಚಲನಚಿತ್ರದ ನಿರ್ಮಾಪಕರ ಪೈಕಿ ಒಬ್ಬರಾಗಿರುವ ನಟ ಅಕ್ಷಯ್ ಕುಮಾರ್, ಚಿತ್ರದ ತಾರಾಬಳಗದಿಂದ ದಿಢೀರನೆ ಹೊರ ನಡೆದಿರುವ ಪರೇಶ್ ರಾವಲ್‌ ‌ರ ನಡೆಯ ವಿರುದ್ಧ ಕಾನೂನು ಮೊಕದ್ದಮೆ ಹೂಡಿದ್ದಾರೆ ಎಂದು ಹೇಳಲಾಗಿದೆ.

ಈ ಕುರಿತು ಪ್ರತಿಕ್ರಿಯಿಸಿರುವ ನಟ ಸುನೀಲ್ ಶೆಟ್ಟಿ, ಚಿತ್ರದ ತಾರಾಬಳಗದಿಂದ ಪರೇಶ್ ರಾವಲ್ ಹೊರ ನಡೆದಿರುವುದರಿಂದ ನನಗೆ ಬೇಸರವಾಗಿದ್ದರೂ, ನನ್ನ ಸಹ ನಟರ ನಡುವೆ ಮನಸ್ತಾಪ ಬೆಳೆಯುವುದನ್ನು ನಾನು ಬಯಸುವುದಿಲ್ಲ ಎಂದು ಹೇಳಿದ್ದಾರೆ.

"ನನ್ನ ಹೃದಯ ಒಡೆದಂತಾಗಿದೆ. ಆದರೆ, ಎಲ್ಲವೂ ಸರಿಯಾಗಲಿದೆ ಎಂಬುದು ನನ್ನ ವಿಶ್ವಾಸವಾಗಿದೆ. ಇದೇ ವೇಳೆ, ನಾನು ಈ ಸುದ್ದಿಯನ್ನು ಮಾಧ್ಯಮಗಳಿಂದ ಕೇಳಿ ತಿಳಿದಿದ್ದರಿಂದ, ನನಗೆ ಈ ಕುರಿತು ಯಾವುದೇ ಸುಳಿವಿಲ್ಲ. ಪರಿಸ್ಥಿತಿ ತಿಳಿಯಾಗಬಹುದು ಎಂದು ನಾನು ಭಾವಿಸಿದ್ದೇನೆ. ಒಂದು ವೇಳೆ ಈ ಚಿತ್ರದ ನಿರ್ಮಾಣ ಸಾಧ್ಯವಾಗದಿದ್ದರೂ, ಅಕ್ಷಯ್ ಕುಮಾರ್ ಹಾಗೂ ಪರೇಶ್ ರಾವಲ್ ನಡುವೆ ಯಾವುದೇ ವೈರತ್ವ ಬೆಳೆಯುವುದು ನನಗೆ ಬೇಕಿಲ್ಲ," ಎಂದು PTI ಸುದ್ದಿ ಸಂಸ್ಥೆಗೆ ನೀಡಿರುವ ಸಂದರ್ಶನದಲ್ಲಿ ಸುನೀಲ್ ಶೆಟ್ಟಿ ಅಭಿಪ್ರಾಯ ಪಟ್ಟಿದ್ದಾರೆ.

63 ವರ್ಷದ ನಟ ಸುನೀಲ್ ಶೆಟ್ಟಿ ಅವರು ನಟ ಸೂರಜ್ ಪಾಂಚೋಲಿ ಹಾಗೂ ನಟಿ ಆಕಾಂಕ್ಷಾ ಶರ್ಮರೊಂದಿಗೆ 'ಕೇಸರಿ ವೀರ್' ಎಂಬ ಮುಂಬರುವ ಐತಿಹಾಸಿಕ ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News