×
Ad

ಐಎಸ್ಎಸ್ ನಿಂದ ಸುನಿತಾ, ಬುಚ್ ಕರೆತರುವ ಮಿಷನ್ ಮತ್ತೆ ಮುಂದಕ್ಕೆ

Update: 2025-03-13 08:15 IST

PC: NASA

ವಾಷಿಂಗ್ಟನ್: ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರದಲ್ಲಿ ಸಿಲುಕಿಕೊಂಡಿರುವ ಸುನಿತಾ ವಿಲಿಯಮ್ಸ್ ಮತ್ತು ಬುಚ್ ವಿಲ್ಮೋರ್ ಅವರನ್ನು ವಾಪಾಸು ಭೂಮಿಗೆ ಕರೆತರುವ ಉದ್ದೇಶದಿಂದ ಸ್ಪೇಸ್ಎಕ್ಸ್ ಸಹಯೋಗದಲ್ಲಿ ನಾಸಾ ಆರಂಭಿಸಲು ಉದ್ದೇಶಿಸಿದ್ದ 10 ಮಂದಿ ತಂತ್ರಜ್ಞರನ್ನು ಒಳಗೊಂಡ ಮಿಷನ್ ಮತ್ತಷ್ಟು ವಿಳಂಬವಾಗಲಿದೆ ಎಂದು ನಾಸಾ ಬುಧವಾರ ಪ್ರಕಟಿಸಿದೆ.

ಒಂಬತ್ತು ತಿಂಗಳಿನಿಂದ ಭೂಕಕ್ಷೆಯಲ್ಲಿರುವ ವಿಲ್ಮೋರ್ ಮತ್ತು ವಿಲಿಯಮ್ಸ್ ಅವರನ್ನು ಭೂಮಿಗೆ ಕರೆ ತರುವ ಮುನ್ನ ಐಎಸ್ಎಸ್ಗೆ ಬದಲಿ ಸಿಬ್ಬಂದಿ ತಲುಪಬೇಕಾಗುತ್ತದೆ ಎಂದು ನಾಸಾ ಹೇಳಿದೆ. ನಾಸಾದ ಕೆನಡಿ ಬಾಹ್ಯಾಕಾಶ ಕೇಂದ್ರದಿಂದ ಫಾಲ್ಕನ್ ರಾಕೆಟ್ ಉಡಾಯಿಸುವ ನಾಲ್ಕು ಗಂಟೆಗೆ ಮುನ್ನ ಪ್ರಮುಖ ಹೈಡ್ರಾಲಿಕ್ ಸಿಸ್ಟಮ್ ಸಮಸ್ಯೆಯನ್ನು ಎಂಜಿನಿಯರ್ಗಳು ಪತ್ತೆ ಮಾಡಿದ್ದಾರೆ. ಕ್ಷಣಗಣನೆ ವೇಳೆ ಹೈಡ್ರಾಲಿಕ್ಸ್ ಸಮಸ್ಯೆ ಬೆಳಕಿಗೆ ಬಂದಿದೆ. ಮೇಲಕ್ಕೆ ಚಿಮ್ಮುವ ಮುನ್ನ ರಾಕೆಟ್ ಬೆಂಬಲ ವ್ಯವಸ್ಥೆಯನ್ನು ಖಾತರಿಪಡಿಸಲು ಇದು ಅಗತ್ಯವಾಗಿತ್ತು.

"ನೆಲಮಟ್ಟದಲ್ಲಿ ಹೈಡ್ರಾಲಿಕ್ ಸಿಸ್ಟಂ ಸಮಸ್ಯೆ ಇರುವುದು ಗೊತ್ತಾಗಿದೆ" ಎಂದು ನಾಸಾ ಉಡಾವಣಾ ವೀಕ್ಷಕ ವಿವರಣೆಕಾರ ಡೆರೊಲ್ ನೀಲ್ ಹೇಳಿದ್ದಾರೆ. ಉಳಿದಂತೆ ರಾಕೆಟ್ ಮತ್ತು ಬಾಹ್ಯಾಕಾಶ ನೌಕೆಗೆ ಸಂಬಂಧಿಸಿದಂತೆ ಎಲ್ಲವೂ ಸರಿಯಾಗಿದೆ ಎಂದು ಹೇಳಿದ್ದಾಗಿ ಎಎಫ್ಪಿ ವರದಿ ಮಾಡಿದೆ.

ನಾಲ್ವರು ಬಾಹ್ಯಾಕಾಶ ಯಾನಿಗಳು ಈಗಾಗಲೇ ಕ್ಯಾಪ್ಸೂಲ್ನಲ್ಲಿ ಸುರಕ್ಷಿತವಾಗಿ ಅಂತಿಮ ಒಪ್ಪಿಗೆಗೆ ಕಾಯುತ್ತಿದ್ದಾರೆ. ಕ್ಷಣಗಣನೆಗೆ ಒಂದು ಗಂಟೆ ಬಾಕಿ ಇರುವಾಗ ಬಾಹ್ಯಾಕಾಶನೌಕೆ ಆಗಮಿಸಿದೆ. ದಿನದ ಮಟ್ಟಿಗೆ ಉಡಾವಣೆಯನ್ನು ಸ್ಪೇಸ್ಎಕ್ಸ್ ಸ್ಥಗಿತಗೊಳಿಸಿದೆ. ತಕ್ಷಣಕ್ಕೆ ಉಡಾವಣೆಯ ಹೊಸ ದಿನಾಂಕವನ್ನು ಪ್ರಕಟಿಸಿಲ್ಲವಾದರೂ, ಗುರುವಾರ ರಾತ್ರಿ ವೇಳೆಗೆ ಮತ್ತೊಂದು ಪ್ರಯತ್ನ ನಡೆಯಲಿದೆ ಎಂಬ ಸುಳಿವನ್ನು ನೀಡಿದೆ.

ಅಮೆರಿಕ, ಜಪಾನ್ ಮತ್ತು ರಷ್ಯಾ ಸದಸ್ಯರನ್ನು ಒಳಗೊಂಡ ಬಹುರಾಷ್ಟ್ರೀಯ ಸಿಬ್ಬಂದಿ ಬಾಹ್ಯಾಕಾಶ ಕೇಂದ್ರ ತಲುಪಿದ ಬಳಿಕ, ಜೂನ್ನಲ್ಲಿ ಆಗಮಿಸಿದ ಬಾಹ್ಯಾಕಾಶಯಾನಿಗಳಿಂದ ಹೊಣೆಗಾರಿಕೆ ವಹಿಸಿಕೊಳ್ಳುವರು. ಬೋಯಿಂಗ್ನ ಹೊಸ ಸ್ಟಾರ್ಲೈನರ್ ಕ್ಯಾಪ್ಸೂಲ್ನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಇಬ್ಬರು ಪೈಲಟ್ಗಳು ಐಎಸ್ಎಸ್ನಲ್ಲಿ ಹೆಚ್ಚು ಕಾಲ ಉಳಿದುಕೊಳ್ಳುವುದು ಅನಿವಾರ್ಯವಾಗಿತ್ತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News