ಮಕ್ಕಳಿಗೆ ಚಿಕ್ಕ ವಯಸ್ಸಿನಿಂದಲೇ ಲೈಂಗಿಕ ಶಿಕ್ಷಣ ನೀಡಬೇಕು : ಸುಪ್ರೀಂ ಕೋರ್ಟ್
ಸುಪ್ರೀಂ ಕೋರ್ಟ್ | Photo Credit : PTI
ಹೊಸದಿಲ್ಲಿ,ಅ.9: ಮಕ್ಕಳಿಗೆ ಚಿಕ್ಕ ವಯಸ್ಸಿನಿಂದಲೇ ಲೈಂಗಿಕ ಶಿಕ್ಷಣವನ್ನು ನೀಡಬೇಕು ಹೊರತು 9ನೇ ತರಗತಿಯಿಂದಲ್ಲ ಎಂದು ಸರ್ವೋಚ್ಚ ನ್ಯಾಯಾಲಯ ಹೇಳಿದೆ.
ಪ್ರೌಢಾವಸ್ಥೆಗೆ ತಲುಪುವುದರೊಂದಿಗೆ ಉಂಟಾಗುವ ಹಾರ್ಮೋನ್ ಬದಲಾವಣೆಗಳ ಬಗ್ಗೆ ಹದಿಹರೆಯದವರಲ್ಲಿ ಅರಿವು ಮೂಡಿಸಲು ಲೈಂಗಿಕ ಶಿಕ್ಷಣವು ಪ್ರೌಢಶಾಲೆಗಳಲ್ಲಿ ಪಠ್ಯಕ್ರಮದ ಭಾಗವಾಗಿರಬೇಕು ಎಂದು ನ್ಯಾಯಮೂರ್ತಿಗಳಾದ ಸಂಜಯ್ ಕುಮಾರ್ ಮತ್ತು ಅಲೋಕ ಆರಾಧೆ ಅವರ ಪೀಠವು ಹೇಳಿತು.
‘ಮಕ್ಕಳಿಗೆ ಚಿಕ್ಕ ವಯಸ್ಸಿನಿಂದಲೇ ಲೈಂಗಿಕ ಶಿಕ್ಷಣವನ್ನು ನೀಡಬೇಕು, 9ನೇ ತರಗತಿಯಿಂದಲ್ಲ ಎನ್ನುವುದು ನಮ್ಮ ಅಭಿಪ್ರಾಯ. ಪ್ರೌಢಾವಸ್ಥೆಯನ್ನು ತಲುಪಿದ ಬಳಿಕ ಉಂಟಾಗುವ ಬದಲಾವಣೆಗಳು ಮತ್ತು ಅದಕ್ಕೆ ಸಂಬಂಧಿಸಿದಂತೆ ವಹಿಸಬೇಕಾದ ಕಾಳಜಿ ಮತ್ತು ಎಚ್ಚರಿಕೆಗಳ ಬಗ್ಗೆ ಮಕ್ಕಳಿಗೆ ತಿಳಿದಿರುವಂತೆ ಮಾಡಲು ಸಂಬಂಧಿಸಿದ ಅಧಿಕಾರಿಗಳು ಗಮನ ಹರಿಸಬೇಕು ಮತ್ತು ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಬೇಕುʼ ಎಂದು ಪೀಠವು ತಿಳಿಸಿತು.
ಐಪಿಸಿ ಮತ್ತು ಪೊಕ್ಸೊ ಕಾಯ್ದೆಯಡಿ ಅತ್ಯಾಚಾರ ಮತ್ತು ಲೈಂಗಿಕ ದೌರ್ಜನ್ಯದ ಆರೋಪವನ್ನು ಹೊತ್ತಿರುವ 15ರ ಹರೆಯದ ಬಾಲಕನಿಗೆ ಜಾಮೀನು ಮಂಜೂರು ಮಾಡಿದ ಸಂದರ್ಭದಲ್ಲಿ ಸವೋಚ್ಚ ನ್ಯಾಯಾಲಯವು ಈ ಅಭಿಪ್ರಾಯಗಳನ್ನು ವ್ಯಕ್ತಪಡಿಸಿತು.
ಬಾಲಕ ಅಪ್ರಾಪ್ತ ವಯಸ್ಕ ಎನ್ನುವುದನ್ನು ಗಮನಿಸಿದ್ದ ಸರ್ವೋಚ್ಚ ನ್ಯಾಯಾಲಯ, ಬಾಲ ನ್ಯಾಯ ಮಂಡಳಿಯು ನಿಗದಿಗೊಳಿಸುವ ನಿಬಂಧನೆಗಳು ಮತ್ತು ಷರತ್ತುಗಳಿಗೆ ಒಳಪಟ್ಟು ಆತನನ್ನು ಜಾಮೀನಿನಲ್ಲಿ ಬಿಡುಗಡೆಗೊಳಿಸುವಂತೆ ಹಿಂದೆ ಆದೇಶಿಸಿತ್ತು.