130 ವರ್ಷ ಹಳೆಯ ಮುಲ್ಲಪೆರಿಯಾರ್ ಅಣೆಕಟ್ಟಿನ ಸುರಕ್ಷತೆ ಪರಿಶೀಲಿಸಿ; ಕೇಂದ್ರ, ತಮಿಳುನಾಡು, ಕೇರಳ ಸರಕಾರಕ್ಕೆ ಸುಪ್ರೀಂ ಸೂಚನೆ
ಸುಪ್ರೀಂ ಕೋರ್ಟ್ (PTI), ಮುಲ್ಲಪೆರಿಯಾರ್ ಅಣೆಕಟ್ಟು
ಹೊಸದಿಲ್ಲಿ, ಅ. 9: 130 ವರ್ಷ ಹಳೆಯ ಮುಲ್ಲಪೆರಿಯಾರ್ ಅಣೆಕಟ್ಟಿನ ಸುರಕ್ಷೆ ಹಾಗೂ ರಚನಾತ್ಮಕ ಸ್ಥಿರತೆ ಕುರಿತ ಕಳವಳದ ಹಿನ್ನೆಲೆಯಲ್ಲಿ ಅದರ ಸ್ಥಾನದಲ್ಲಿ ಹೊಸ ಅಣೆಕಟ್ಟು ನಿರ್ಮಾಣ ಮಾಡುವಂತೆ ಕೋರಿ ಸಲ್ಲಿಸಲಾದ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್) ಕುರಿತಂತೆ ಸುಪ್ರೀಂ ಕೋರ್ಟ್ ಸೋಮವಾರ ಕೇಂದ್ರ, ತಮಿಳುನಾಡು, ಕೇರಳ ಸರಕಾರ ಹಾಗೂ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ (ಎನ್‌ಡಿಎಂಎ)ಕ್ಕೆ ನೋಟಿಸು ಜಾರಿ ಮಾಡಿದೆ.
ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ಹಾಗೂ ನ್ಯಾಯಮೂರ್ತಿ ಕೆ. ವಿನೋದ್ ಚಂದ್ರನ್ ಅವರನ್ನು ಒಳಗೊಂಡ ಪೀಠ, ಬ್ರಿಟೀಷರ ಕಾಲದ ಅಣೆಕಟ್ಟಿನ ಸುತ್ತಮುತ್ತ 1 ಕೋಟಿಗೂ ಅಧಿಕ ಜನರು ವಾಸಿಸುತ್ತಿದ್ದಾರೆ ಎಂದು ಆರೋಪಿಸಿ ಸೇವಾ ಕೇರಳ ಬ್ರಿಗೇಡ್ ಸಲ್ಲಿಸಿದ ಅರ್ಜಿಯನ್ನು ವಿಚಾರಣೆ ನಡೆಸಿತು.
ಅರ್ಜಿದಾರರ ಪರವಾಗಿ ಹಾಜರಾಗಿದ್ದ ಹಿರಿಯ ವಕೀಲ ವಿ. ಗಿರಿ, ಹಳೆಯದಾಗಿರುವ ಅಣೆಕಟ್ಟು ಕೇರಳದ ನದಿ ಪಾತ್ರದಲ್ಲಿ ವಾಸಿಸುವ ಸುಮಾರು 1 ಕೋಟಿ ಜನರ ಜೀವ ಹಾಗೂ ಸೊತ್ತಿಗೆ ಗಂಭೀರ ಅಪಾಯವಾಗಿದೆ ಎಂದು ಪ್ರತಿಪಾದಿಸಿದರು. ಅಲ್ಲದೆ, ಸಾರ್ವಜನಿಕ ಸುರಕ್ಷೆಯನ್ನು ಖಚಿತಪಡಿಸಿಕೊಳ್ಳಲು ಹೊಸ ಅಣೆಕಟ್ಟು ನಿರ್ಮಾಣಕ್ಕೆ ಆದೇಶಿಸುವಂತೆ ಅರ್ಜಿದಾರರು ನ್ಯಾಯಾಲಯವನ್ನು ಒತ್ತಾಯಿಸಿದರು.
ಸಾರ್ವಜನಿಕ ಹಿತಾಸಕ್ತಿ ಅರ್ಜಿಯಲ್ಲಿ ಕೇಂದ್ರ ಸರಕಾರ, ತಮಿಳುನಾಡು, ಕೇರಳ ಸರಕಾರ ಹಾಗೂ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರವನ್ನು ಪ್ರತಿವಾದಿಯನ್ನಾಗಿ ಮಾಡಲಾಗಿದೆ.