ಮರಣ ದಂಡನೆಗೆ ಮಾರಕ ಚುಚ್ಚುಮದ್ದಿನ ವಿಧಾನ ಅಳವಡಿಸಿಕೊಳ್ಳಲು ಕೇಂದ್ರಕ್ಕೆ ಆಸಕ್ತಿಯಿಲ್ಲ: ಸುಪ್ರೀಂ ಕೋರ್ಟ್
ಸುಪ್ರೀಂ ಕೋರ್ಟ್ | Photo Credit : sci.gov.in
ಹೊಸದಿಲ್ಲಿ,ಅ.15: ಮರಣ ದಂಡನೆಗೆ ಗುರಿಯಾದ ಅಪರಾಧಿಗಳಿಗೆ ಶಿಕ್ಷೆಯ ಜಾರಿ ವಿಧಾನವಾಗಿ ಮಾರಕ ಚುಚ್ಚುಮದ್ದನ್ನು ಆಯ್ಕೆ ಮಾಡಿಕೊಳ್ಳುವ ಪರ್ಯಾಯವನ್ನು ಒದಗಿಸುವುದು ಕಾರ್ಯಸಾಧ್ಯವಲ್ಲ ಎಂದು ಕೇಂದ್ರ ಸರಕಾರವು ಬುಧವಾರ ತಿಳಿಸಿದ ಬಳಿಕ ಸರ್ವೋಚ್ಚ ನ್ಯಾಯಾಲಯವು, ಕೇಂದ್ರವು ಬದಲಾವಣೆಗೆ ಸಿದ್ಧವಿಲ್ಲ ಎನ್ನುವುದು ಸಮಸ್ಯೆ ಎಂದು ಅಭಿಪ್ರಾಯಿಸಿತು.
ಅರ್ಜಿದಾರರಾದ ಹಿರಿಯ ವಕೀಲ ರಿಷಿ ಮಲ್ಹೋತ್ರಾ ಅವರು, ಮರಣದಂಡನೆ ಜಾರಿಯ ವಿಧಾನವಾಗಿ ಗಲ್ಲಿಗೇರಿಸಬೇಕೇ ಅಥವಾ ಮಾರಕ ಚುಚ್ಚುಮದ್ದನ್ನು ನೀಡಬೇಕೇ ಎಂಬ ಬಗ್ಗೆ ಕೈದಿಗೆ ಕನಿಷ್ಠ ಒಂದು ಆಯ್ಕೆಯನ್ನು ನೀಡಬೇಕು ಎಂದು ನ್ಯಾಯಮೂರ್ತಿಗಳಾದ ವಿಕ್ರಮನಾಥ ಮತ್ತು ಸಂದೀಪ ಮೆಹ್ತಾ ಅವರ ಪೀಠಕ್ಕೆ ನಿವೇದಿಸಿಕೊಂಡರು. ಮರಣದಂಡನೆ ಕೈದಿಗೆ ಆಯ್ಕೆಯನ್ನು ಒದಗಿಸುವುದಕ್ಕೆ ಸಂಬಂಧಿಸಿ ಮಲ್ಹೋತ್ರಾರ ಪ್ರಸ್ತಾವದ ಕುರಿತು ಸರಕಾರಕ್ಕೆ ಸಲಹೆ ನೀಡುವಂತೆ ಕೇಂದ್ರದ ಪರ ವಕೀಲರಿಗೆ ಪೀಠವು ಸೂಚಿಸಿತು.
ಅಮೆರಿಕದ 50 ರಾಜ್ಯಗಳ ಪೈಕಿ 49 ರಾಜ್ಯಗಳು ಮರಣ ದಂಡನೆ ಜಾರಿಗೆ ಮಾರಕ ಚುಚ್ಚುಮದ್ದನ್ನು ನೀಡುವ ವಿಧಾನವನ್ನು ಅಳವಡಿಸಿಕೊಂಡಿವೆ. ಹೀಗಾಗಿ ಅದು ಅತ್ಯುತ್ತಮ ಮಾರ್ಗವಾಗಿದೆ ಎಂದು ವಾದಿಸಿದ ಮಲ್ಹೋತ್ರಾ, ಗಲ್ಲಿಗೇರಿಸುವುದು ಕ್ರೂರ ಮತ್ತು ಅನಾಗರಿಕವಾಗಿದೆ. ಏಕೆಂದರೆ ಕೈದಿಯ ದೇಹವು ಹಗ್ಗದಲ್ಲಿ ಸುಮಾರು 40 ನಿಮಿಷಗಳವರೆಗೆ ತೂಗಾಡುತ್ತಿರುತ್ತದೆ. ಇದಕ್ಕೆ ಹೋಲಿಸಿದರೆ ಮಾರಕ ಚುಚ್ಚುಮದ್ದು ತ್ವರಿತ, ಮಾನವೀಯ ಮತ್ತು ಯೋಗ್ಯ ವಿಧಾನವಾಗಿದೆ ಎಂದು ಹೇಳಿದರು.
ವಿಷಯದಲ್ಲಿ ಪ್ರತಿ-ಅಫಿಡವಿಟ್‌ನ್ನು ಉಲ್ಲೇಖಿಸಿದ ಕೇಂದ್ರದ ಪರ ವಕೀಲರು, ಕೈದಿಗೆ ಒಂದು ಆಯ್ಕೆಯನ್ನು ಒದಗಿಸುವುದು ಕಾರ್ಯಸಾಧ್ಯವಲ್ಲದಿರಬಹುದು ಮತ್ತು ಅದು ನೀತಿ ನಿರ್ಧಾರವಾಗಿದೆ. ಸರಕಾರವು ಅದರ ಬಗ್ಗೆ ನಿರ್ಧಾರವೊಂದನ್ನು ತೆಗೆದುಕೊಳ್ಳಬಹುದು ಎಂದು ಹೇಳಿದರು.
ಕಾಲಕ್ಕೆ ತಕ್ಕಂತೆ ಬದಲಾಗಲು ಸರಕಾರವು ಸಿದ್ಧವಿಲ್ಲ ಎನ್ನುವುದು ಸಮಸ್ಯೆ, ಕಾಲಕ್ರಮೇಣ ಹಲವಾರು ವಿಷಯಗಳು ಬದಲಾಗಿವೆ ಎಂದು ಪೀಠವು ಹೇಳಿತು.
ಮುಂದಿನ ವಿಚಾರಣೆಯು ನ.11ಕ್ಕೆ ನಡೆಯಲಿದೆ.