×
Ad

ದೇಶಾದ್ಯಂತ ಆದೇಶ ಪಾಲನೆಗೆ ಸಂಬಂಧಿಸಿದ 8.8 ಲಕ್ಷ ಅರ್ಜಿಗಳು ಬಾಕಿ : ಕಳವಳ ವ್ಯಕ್ತಪಡಿಸಿದ ಸುಪ್ರೀಂ ಕೋರ್ಟ್

Update: 2025-10-18 16:53 IST

ಸುಪ್ರೀಂ ಕೋರ್ಟ್ | Photo Credit : PTI 

ಹೊಸದಿಲ್ಲಿ,ಅ.18: ದೇಶಾದ್ಯಂತ ನ್ಯಾಯಾಲಯಗಳ ಆದೇಶ ಜಾರಿಗೆ ಸಂಬಂಧಿಸಿದ ಅರ್ಜಿಗಳು(ಎಕ್ಸಿಕ್ಯೂಷನ್ ಪಿಟಿಷನ್) ಆತಂಕಕಾರಿ ಪ್ರಮಾಣದಲ್ಲಿ ಬಾಕಿಯಿರುವ ಬಗ್ಗೆ ಸರ್ವೋಚ್ಚ ನ್ಯಾಯಾಲಯವು ಗಂಭೀರ ಕಳವಳವನ್ನು ವ್ಯಕ್ತಪಡಿಸಿದೆ. ಆರು ತಿಂಗಳುಗಳಲ್ಲಿ ವಿಲೇವಾರಿ ಮಾಡುವಂತೆ ಉಚ್ಚ ನ್ಯಾಯಾಲಯಗಳಿಗೆ ಈ ಹಿಂದೆ ನಿರ್ದೇಶನಗಳನ್ನು ನೀಡಲಾಗಿದ್ದರೂ ದೇಶಾದ್ಯಂತ ಜಿಲ್ಲಾ ನ್ಯಾಯಾಲಯಗಳಲ್ಲಿ 8,82,578 ಅರ್ಜಿಗಳು ಬಾಕಿಯಿವೆ ಎಂದು ಅದು ಬಹಿರಂಗಗೊಳಿಸಿದೆ.

ನ್ಯಾಯಮೂರ್ತಿಗಳಾದ ಜೆ.ಬಿ.ಪರ್ದಿವಾಲಾ ಮತ್ತು ಪಂಕಜ ಮಿತ್ತಲ್ ಅವರ ಪೀಠವು ನ್ಯಾಯಾಲಯಗಳ ಆದೇಶ ಜಾರಿ ಕೋರಿರುವ ಅರ್ಜಿಗಳ ವಿಲೇವಾರಿಗೆ ಆರು ತಿಂಗಳ ಗಡುವು ವಿಧಿಸಿ 2025, ಮಾ.6ರಂದು ಪ್ರಕರಣವೊಂದರಲ್ಲಿ ತಾನು ಹೊರಡಿಸಿದ್ದ ಆದೇಶದ ಪಾಲನೆಯ ಮೇಲ್ವಿಚಾರಣೆಯನ್ನು ಕೈಗೆತ್ತಿಕೊಂಡಿತ್ತು.

ಉಚ್ಚ ನ್ಯಾಯಾಲಯಗಳಿಂದ ಸ್ವೀಕರಿಸಲಾಗಿರುವ ಅಂಕಿಅಂಶಗಳನ್ನು ಅತ್ಯಂತ ನಿರಾಶಾದಾಯಕ ಮತ್ತು ಆತಂಕಕಾರಿ ಎಂದು ಸರ್ವೋಚ್ಚ ನ್ಯಾಯಾಲಯವು ಬಣ್ಣಿಸಿತು.

ಎಲ್ಲ ಉಚ್ಚ ನ್ಯಾಯಾಲಯಗಳಿಂದ ಸಂಗ್ರಹಿಸಲಾಗಿರುವ ಅಂಕಿಅಂಶಗಳ ಪ್ರಕಾರ ಬಾಂಬೆ(3.41 ಲಕ್ಷ), ಮದ್ರಾಸ್(86,148),ಕೇರಳ(82,997) ಮತ್ತು ಆಂಧ್ರಪ್ರದೇಶ(68,137)ಗಳಲ್ಲಿ ಅತ್ಯಂತ ಹೆಚ್ಚಿನ ಎಕ್ಸಿಕ್ಯೂಷನ್ ಪಿಟಿಷನ್‌ಗಳು ಬಾಕಿಯುಳಿದಿವೆ. ಕಳೆದ ಆರು ತಿಂಗಳುಗಳಲ್ಲಿ 3,38,685 ಅರ್ಜಿಗಳು ವಿಲೇವಾರಿಗೊಂಡಿದ್ದರೂ ಬೃಹತ್ ಪ್ರಮಾಣದ ಅರ್ಜಿಗಳು ಬಾಕಿಯುಳಿದಿವೆ ಎಂದು ಪೀಠವು ಬೆಟ್ಟು ಮಾಡಿತು.

ಸ್ಪಷ್ಟ ನಿರ್ದೇಶನಗಳಿದ್ದರೂ ಅಗತ್ಯ ದತ್ತಾಂಶಗಳನ್ನು ಒದಗಿಸುವಲ್ಲಿ ಕರ್ನಾಟಕ ಉಚ್ಚ ನ್ಯಾಯಾಲಯದ ವೈಫಲ್ಯಕ್ಕಾಗಿ ಅಸಮಾಧಾನವನ್ನು ವ್ಯಕ್ತಪಡಿಸಿದ ಪೀಠವು, ಎರಡು ವಾರಗಳಲ್ಲಿ ವಿವರಣೆಯನ್ನು ಸಲ್ಲಿಸುವಂತೆ ಮತ್ತು ಬಾಕಿಯಿರುವ ಹಾಗೂ ವಿಲೇವಾರಿಗೊಳಿಸಿರುವ ಪ್ರಕರಣಗಳ ಕುರಿತು ಇತ್ತೀಚಿನ ಅಂಕಿಅಂಶಗಳನ್ನು ತಕ್ಷಣ ಸಲ್ಲಿಸುವಂತೆ ಕರ್ನಾಟಕ ಹೈಕೋರ್ಟ್‌ನ ರಿಜಿಸ್ಟ್ರಾರ್ ಜನರಲ್‌ಗೆ ಆದೇಶಿಸಿತು.

ತನ್ನ ಹಿಂದಿನ ನಿರ್ದೇಶನಗಳನ್ನು ಪುನರುಚ್ಚರಿಸಿದ ಸರ್ವೋಚ್ಚ ನ್ಯಾಯಾಲಯವು, ಬಾಕಿಯುಳಿದಿರುವ ಎಕ್ಸಿಕ್ಯೂಷನ್ ಪಿಟಿಷನ್‌ಗಳ ವಿಲೇವಾರಿಗಾಗಿ ತಮ್ಮ ಜಿಲ್ಲಾ ನ್ಯಾಯಾಂಗದೊಂದಿಗೆ ಪರಿಣಾಮಕಾರಿ ಅನುಸರಣೆಯನ್ನು ಖಚಿತಪಡಿಸಿಕೊಳ್ಳುವಂತೆ ಉಚ್ಚ ನ್ಯಾಯಾಲಯಗಳಿಗೆ ಸೂಚಿಸಿತು.

‘ನಮ್ಮ ಮುಖ್ಯ ತೀರ್ಪಿನಲ್ಲಿ ಗಮನಿಸಿರುವಂತೆ ತೀರ್ಪು ಹೊರಬಿದ್ದ ಬಳಿಕ ಅದನ್ನು ಕಾರ್ಯಗತಗೊಳಿಸಲು ವರ್ಷಗಳೇ ಬೇಕಾದರೆ ಅದು ಅರ್ಥಹೀನ ಮತ್ತು ನ್ಯಾಯದ ಅಣಕವಲ್ಲದೆ ಬೇರೇನೂ ಅಲ್ಲ’ ಎಂದು ಪೀಠವು ಟೀಕಿಸಿತು.

ಪರಿಣಾಮಕಾರಿ ಕಾರ್ಯವಿಧಾನಗಳು ಮತ್ತು ಮೇಲ್ವಿಚಾರಣಾ ವ್ಯವಸ್ಥೆಗಳನ್ನು ರೂಪಿಸುವಂತೆ ಉಚ್ಚ ನ್ಯಾಯಾಲಯಗಳಿಗೆ ಕರೆ ನೀಡಿದ ಸರ್ವೋಚ್ಚ ನ್ಯಾಯಾಲಯವು, ತನ್ನ ಆದೇಶ ಪಾಲನೆಯ ಮುಂದಿನ ಪುನರ್‌ಪರಿಶೀಲನೆಯನ್ನು ಎ.10,2026ಕ್ಕೆ ನಿಗದಿಗೊಳಿಸಿತು. ಮುಂದಿನ ವಿಚಾರಣೆಗೆ ಮುನ್ನ ಎಲ್ಲ ಅಂಕಿಅಂಶಗಳನ್ನು ಸಲ್ಲಿಸುವಂತೆ ಉಚ್ಚ ನ್ಯಾಯಾಲಯಗಳಿಗೆ ಅದು ತಾಕೀತು ಮಾಡಿತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News