ತೃತೀಯಲಿಂಗಿಗಳನ್ನು ಮುಖ್ಯವಾಹಿನಿಗೆ ತರುವಲ್ಲಿ ಕೇಂದ್ರ, ರಾಜ್ಯಗಳ ನಿರಾಸಕ್ತಿ: ಸುಪ್ರೀಂ ಕೋರ್ಟ್ ಕಳವಳ
ಸುಪ್ರೀಂ ಕೋರ್ಟ್ | Photo Credit : PTI
ಹೊಸದಿಲ್ಲಿ,ಅ.18: ತೃತೀಯಲಿಂಗಿಗಳನ್ನು ಮುಖ್ಯವಾಹಿನಿಗೆ ತರುವ ನಿಟ್ಟಿನಲ್ಲಿ ಕೇಂದ್ರ ಮತ್ತು ರಾಜ್ಯ ಸರಕಾರಗಳು ತೋರಿಸಿರುವ ತೀವ್ರ ನಿರಾಸಕ್ತಿಯ ಬಗ್ಗೆ ಕಳವಳವನ್ನು ವ್ಯಕ್ತಪಡಿಸಿರುವ ಸರ್ವೋಚ್ಚ ನ್ಯಾಯಾಲಯವು, ರಾಷ್ಟ್ರೀಯ ಸಮಾನ ಅವಕಾಶ ನೀತಿಯನ್ನು ರೂಪಿಸಲು ಸಮಿತಿಯೊಂದನ್ನು ರಚಿಸಿದೆ.
ತನ್ನ ಲಿಂಗ ಗುರುತಿನಿಂದಾಗಿ ಡಿ.2022ರಲ್ಲಿ ಉತ್ತರ ಪ್ರದೇಶದ ಒಂದು ಶಾಲೆಯಲ್ಲಿ ಮತ್ತು ಜು.2023ರಲ್ಲಿ ಗುಜರಾತಿನ ಇನ್ನೊಂದು ಶಾಲೆಯಲ್ಲಿ ತಾನು ತಾರತಮ್ಯವನ್ನು ಅನುಭವಿಸಿದ್ದು,ತನ್ನನ್ನು ಸೇವೆಯಿಂದ ವಜಾಗೊಳಿಸಲಾಗಿದೆ ಎಂದು ಆರೋಪಿಸಿ ತೃತೀಯಲಿಂಗಿ ಮಹಿಳೆಯೋರ್ವರು ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿಗಳಾದ ಜೆ.ಬಿ.ಪರ್ದಿವಾಲಾ ಮತ್ತು ಆರ್.ಮಹಾದೇವನ್ ಅವರ ಪೀಠವು ಶುಕ್ರವಾರ ಕೈಗೆತ್ತಿಕೊಂಡಿತ್ತು.
ಅರ್ಜಿದಾರರ ವಿರುದ್ಧ ತಾರತಮ್ಯಕ್ಕಾಗಿ ಅವರಿಗೆ ತಲಾ 50,000 ರೂ.ಗಳನ್ನು ಪಾವತಿಸುವಂತೆ ಕೇಂದ್ರ ಸರಕಾರ, ಉತ್ತರ ಪ್ರದೇಶ ಮತ್ತು ಗುಜರಾತ್ ಸರಕಾರಗಳು ಹಾಗೂ ಗುಜರಾತಿನ ಶಾಲೆಗೆ ನ್ಯಾಯಾಲಯವು ಆದೇಶಿಸಿತು.
2019ರ ತೃತೀಯಲಿಂಗಿ ವ್ಯಕ್ತಿಗಳ ಹಕ್ಕುಗಳ ಸಂರಕ್ಷಣಾ ಕಾಯ್ದೆ ಮತ್ತು 2020ರ ತೃತೀಯಲಿಂಗಿ ವ್ಯಕ್ತಿಗಳ ಹಕ್ಕುಗಳ ಸಂರಕ್ಷಣಾ ನಿಯಮಗಳು ಕೇವಲ ಕಾಗದದ ಮೇಲಷ್ಟೇ ಉಳಿದುಕೊಂಡಿವೆ ಎಂದು ಬೆಟ್ಟು ಮಾಡಿದ ಪೀಠವು, ತೃತೀಯಲಿಂಗಿ ಸಮುದಾಯವು ತಾರತಮ್ಯ ಮತ್ತು ಕಡೆಗಣನೆಯನ್ನು ಎದುರಿಸುವುದು ಮುಂದುವರಿದಿದೆ. ಆರೋಗ್ಯ ರಕ್ಷಣೆ ಮತ್ತು ಆರ್ಥಿಕ ಅವಕಾಶಗಳ ಕೊರತೆಗಳು ಹಾಗೂ ಸಮಗ್ರವಲ್ಲದ ಶೈಕ್ಷಣಿಕ ನೀತಿಗಳು ಅವರನ್ನು ಇನ್ನಷ್ಟು ಸಂಕಷ್ಟಕ್ಕೆ ತಳ್ಳಿವೆ ಎಂದು ಹೇಳಿತು.
ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರ ಪ್ರಕರಣದಲ್ಲಿ 2014ರ ತನ್ನ ತೀರ್ಪನ್ನೂ ನ್ಯಾಯಾಲಯವು ಉಲ್ಲೇಖಿಸಿತು. ಈ ತೀರ್ಪು ಲಿಂಗ ಪರಿವರ್ತಿತರಿಗಾಗಿ ‘ತೃತೀಯ ಲಿಂಗ’ ವರ್ಗವನ್ನು ಔಪಚಾರಿಕವಾಗಿ ರಚಿಸಿತ್ತು,ಇದು ಅವರನ್ನು ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಹಿಂದುಳಿದ ಗುಂಪು ಎಂದು ಗುರುತಿಸಿತ್ತು.
ತೃತೀಯ ಲಿಂಗಿ ಸಮುದಾಯಕ್ಕೆ ಉದ್ಯೋಗ ಮೀಸಲಾತಿ, ಶಿಕ್ಷಣ ಸಂಸ್ಥೆಗಳಲ್ಲಿ ಪ್ರವೇಶ, ಆರೋಗ್ಯ ಸೌಲಭ್ಯಗಳು,ಪ್ರತ್ಯೇಕ ಸಾರ್ವಜನಿಕ ಶೌಚಾಲಯಗಳು ಮತ್ತು ತಾರತಮ್ಯದ ವಿರುದ್ಧ ಹಲವಾರು ಸುರಕ್ಷತಾ ಕ್ರಮಗಳನ್ನು ಖಚಿತಪಡಿಸಿಕೊಳ್ಳುವಂತೆ ತೀರ್ಪು ಸರಕಾರಕ್ಕೆ ನಿರ್ದೇಶನಗಳನ್ನು ನೀಡಿತ್ತು.
2014ರ ತೀರ್ಪು ಪ್ರಕಟಗೊಂಡು ಹತ್ತು ವರ್ಷಗಳೇ ಕಳೆದಿವೆ ಮತ್ತು 2019ರಲ್ಲಿ ಕೇಂದ್ರ ಸರಕಾರವು ಶಾಸನವು ತರಲು ಪ್ರೇರಣೆಯಾಗಿತ್ತು ಎಂದು ಶುಕ್ರವಾರ ವಿಚಾರಣೆ ಸಂದರ್ಭದಲ್ಲಿ ಹೇಳಿದ ಸರ್ವೋಚ್ಚ ನ್ಯಾಯಾಲಯವು, ಆದಾಗ್ಯೂ ತೃತೀಯ ಲಿಂಗಿ ಸಮುದಾಯವು ಈಗಲೂ ತಮ್ಮ ಕುಂದುಕೊರತೆಗಳಿಗೆ ನ್ಯಾಯಾಲಯಗಳ ಮೊರೆ ಹೋಗಬೇಕಿದೆ ಎಂದು ಬೆಟ್ಟು ಮಾಡಿತು.
2019ರ ಕಾಯ್ದೆ ಮತ್ತು ನಂತರ 2020ರಲ್ಲಿ ನಿಯಮಗಳನ್ನು ತಂದಿದ್ದರೂ ತೃತೀಯಲಿಂಗಿ ಸಮುದಾಯವು ಉದ್ಯೋಗ ಮತ್ತು ವೃತ್ತಿಪರ ಕ್ಷೇತ್ರಗಳಲ್ಲಿ ಪ್ರವೇಶಕ್ಕೆ ಅಡೆತಡೆಗಳನ್ನು ಎದುರಿಸುತ್ತಿದೆ ಎಂದೂ ಸರ್ವೋಚ್ಚ ನ್ಯಾಯಾಲಯವು ಹೇಳಿತು.
ಸಮುದಾಯದ ಕಳವಳಗಳನ್ನು ಪರಿಹರಿಸಲು ನ್ಯಾಯಾಲಯವು ದಿಲ್ಲಿ ಹೈಕೋರ್ಟ್ನ ಮಾಜಿ ನ್ಯಾಯಾಧೀಶೆ ಆಶಾ ಮೆನನ್ ನೇತೃತ್ವದಲ್ಲಿ ಸಲಹಾ ಸಮಿತಿಯನ್ನು ರಚಿಸಿತು ಮತ್ತು ಆರು ವಾರಗಳಲ್ಲಿ ಕರಡು ನೀತಿಯೊಂದಿಗೆ ವರದಿಯನ್ನು ಸಲ್ಲಿಸುವಂತೆ ಅದಕ್ಕೆ ಸೂಚಿಸಿತು.