ನಿಥಾರಿ ಸರಣಿ ಹತ್ಯೆ ಪ್ರಕರಣ | ಸುರೇಂದ್ರ ಕೋಲಿಯನ್ನು ಖುಲಾಸೆಗೊಳಿಸಿದ ಸುಪ್ರೀಂ ಕೋರ್ಟ್; ತಕ್ಷಣ ಬಿಡುಗಡೆಗೆ ಆದೇಶ
ಸುರೇಂದ್ರ ಕೋಲಿ (File Photo: PTI)
ಹೊಸದಿಲ್ಲಿ: 2006ರ ನಿಥಾರಿ ಸರಣಿ ಹತ್ಯೆ ಪ್ರಕರಣದಲ್ಲಿ ಮರಣದಂಡನೆ ಶಿಕ್ಷೆಗೊಳಗಾಗಿದ್ದ ಸುರೇಂದ್ರ ಕೋಲಿಯನ್ನು ಸುಪ್ರೀಂ ಕೋರ್ಟ್ ಮಂಗಳವಾರ ಖುಲಾಸೆಗೊಳಿಸಿದೆ. ಕೋಲಿಯ ವಿರುದ್ಧದ ಶಿಕ್ಷೆ ಮತ್ತು ತೀರ್ಪುಗಳನ್ನು ರದ್ದುಗೊಳಿಸಿದ ನ್ಯಾಯಾಲಯವು, ಬೇರೆ ಯಾವುದೇ ಪ್ರಕರಣದಲ್ಲಿ ಅಗತ್ಯವಿಲ್ಲದಿದ್ದರೆ, ತಕ್ಷಣ ಬಿಡುಗಡೆ ಮಾಡಲು ಆದೇಶಿಸಿದೆ.
ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ, ನ್ಯಾಯಮೂರ್ತಿಗಳಾದ ಸೂರ್ಯ ಕಾಂತ್ ಮತ್ತು ವಿಕ್ರಮ್ ನಾಥ್ ಅವರಿದ್ದ ಪೀಠವು ಮರಣದಂಡನೆ ಶಿಕ್ಷೆ ಪ್ರಶ್ನಿಸಿ ಸಲ್ಲಿಸಿದ್ದ ಕ್ಯುರೇಟಿವ್ ಅರ್ಜಿಯನ್ನು ಪರಿಶೀಲಿಸಿ ತೀರ್ಪು ನೀಡಿದೆ. ಇದರೊಂದಿಗೆ, ಈಗಾಗಲೇ ನಿಥಾರಿ ಹತ್ಯೆ ಸಂಬಂಧಿಸಿದ ಉಳಿದ ಎಲ್ಲ ಪ್ರಕರಣಗಳಲ್ಲಿ ಖುಲಾಸೆಗೊಂಡಿದ್ದ ಕೋಲಿಯನ್ನು ಇದೀಗ ಸುಪ್ರೀಂ ಕೋರ್ಟ್ ಸಂಪೂರ್ಣವಾಗಿ ಖುಲಾಸೆಗೊಳಿಸಿತು.
2006ರ ಡಿಸೆಂಬರ್ 29ರಂದು ನೋಯ್ಡಾದ ನಿಥಾರಿ ಗ್ರಾಮದಲ್ಲಿ ಉದ್ಯಮಿ ಮೋನಿಂದರ್ ಸಿಂಗ್ ಪಂಧೇರ್ ಅವರ ಮನೆಯ ಹಿಂಭಾಗದ ಚರಂಡಿಯಲ್ಲಿ ಕನಿಷ್ಠ 8 ಮಕ್ಕಳ ಅಸ್ಥಿಪಂಜರಗಳು ಪತ್ತೆಯಾಗಿದ್ದವು. ಈ ಭೀಕರ ಪ್ರಕರಣವು ದೇಶವ್ಯಾಪಿ ಆಕ್ರೋಶ ಹುಟ್ಟುಹಾಕಿತ್ತು.
15 ವರ್ಷದ ಬಾಲಕಿಯ ಮೇಲಿನ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ಕೋಲಿಗೆ ಶಿಕ್ಷೆ ವಿಧಿಸಲಾಗಿತ್ತು. ಫೆಬ್ರವರಿ 2011ರಲ್ಲಿ ಸುಪ್ರೀಂ ಕೋರ್ಟ್ ಮರಣದಂಡನೆ ವಿಧಿಸಿತ್ತು. ಆದರೆ 2015ರಲ್ಲಿ ಅಲಹಾಬಾದ್ ಹೈಕೋರ್ಟ್, ದಯಾ ಅರ್ಜಿಯ ನಿರ್ಧಾರದಲ್ಲಿ ಉಂಟಾದ ವಿಳಂಬವನ್ನು ಉಲ್ಲೇಖಿಸಿ ಮರಣದಂಡನೆಯನ್ನು ಜೀವಾವಧಿ ಶಿಕ್ಷೆಗೆ ಇಳಿಸಿತು.
ಅಕ್ಟೋಬರ್ 2023ರಲ್ಲಿ ಅಲಹಾಬಾದ್ ಹೈಕೋರ್ಟ್ ಹಲವು ಇತರ ನಿಥಾರಿ ಪ್ರಕರಣಗಳಲ್ಲಿ ಕೋಲಿ ಹಾಗೂ ಪಂಧೇರ್ ಇಬ್ಬರನ್ನೂ ಖುಲಾಸೆಗೊಳಿಸಿತು. ವಿಚಾರಣಾ ನ್ಯಾಯಾಲಯ ನೀಡಿದ್ದ ಮರಣದಂಡನೆ ತೀರ್ಪುಗಳನ್ನು ರದ್ದುಗೊಳಿಸಿ, ಕೋಲಿಯನ್ನು 12 ಪ್ರಕರಣಗಳಲ್ಲಿ ಹಾಗೂ ಪಂಧೇರ್ ನನ್ನು 2 ಪ್ರಕರಣಗಳಲ್ಲಿ ಖುಲಾಸೆಗೊಳಿಸಿತು.
ಸಿಬಿಐ ಮತ್ತು ಸಂತ್ರಸ್ತರ ಕುಟುಂಬಗಳು ಆ ತೀರ್ಪುಗಳನ್ನು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಿದರೂ, ಸುಪ್ರೀಂ ಕೋರ್ಟ್ 2024ರ ಜುಲೈ 30ರಂದು ಎಲ್ಲ ಮೇಲ್ಮನವಿಗಳನ್ನು ವಜಾಗೊಳಿಸಿತ್ತು.
ಮಂಗಳವಾರದ ಈ ತೀರ್ಪಿನೊಂದಿಗೆ, ಸುಪ್ರೀಂ ಕೋರ್ಟ್ ನಿಥಾರಿ ಹತ್ಯೆ ಪ್ರಕರಣದ ಅಧ್ಯಾಯಕ್ಕೆ ಅಂತ್ಯ ಹಾಡಿದೆ. ಭಾರತದ ಅಪರಾಧ ಇತಿಹಾಸದಲ್ಲಿನ ಅತ್ಯಂತ ಕ್ರೂರ ಪ್ರಕರಣಗಳಲ್ಲಿ ಒಂದನ್ನು ಮುಕ್ತಾಯಗೊಳಿಸಿದೆ.