ಪಾಕಿಸ್ತಾನಕ್ಕಾಗಿ ಬೇಹುಗಾರಿಕೆ ಶಂಕೆ; ಡಿಆರ್ಡಿಒ ಅತಿಥಿ ಗೃಹದ ಮ್ಯಾನೇಜರ್ ಮಹೇಂದ್ರ ಪ್ರಸಾದ್ ವಶಕ್ಕೆ
ಸಾಂದರ್ಭಿಕ ಚಿತ್ರ | PC : NDTV
ಜೈಪುರ, ಜು. 5: ಪಾಕಿಸ್ತಾನಕ್ಕಾಗಿ ಗೂಢಚಾರಿಕೆ ನಡೆಸುತ್ತಿದ್ದ ಶಂಕೆಯಲ್ಲಿ ರಕ್ಷಣಾ ಸಂಶೋಧನೆ ಹಾಗೂ ಅಭಿವೃದ್ಧಿ ಸಂಘಟನೆ (ಡಿಆರ್ಡಿಒ)ಯ ಅತಿಥಿ ಗೃಹದ ಮ್ಯಾನೇಜರ್ ನನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಪೊಲೀಸರು ಮಂಗಳವಾರ ತಿಳಿಸಿದ್ದಾರೆ.
ಉತ್ತರಾಖಂಡದ ಅಲ್ಮೋರಾದ ನಿವಾಸಿ ಮಹೇಂದ್ರ ಪ್ರಸಾದ್ ನನ್ನು ಜೈಸಲ್ಮೇರ್ ನ ಚಂದನ್ ಪ್ರದೇಶದಲ್ಲಿರುವ ಡಿಆರ್ಡಿಒ ಅತಿಥಿ ಗೃಹದ ಮ್ಯಾನೇಜರ್ ಆಗಿ ನೇಮಕ ಮಾಡಲಾಗಿತ್ತು.
‘‘ಮಹೇಂದ್ರ ಪ್ರಸಾದ್ ನನ್ನು ಸೋಮವಾರ ವಶಕ್ಕೆ ತೆಗೆದುಕೊಳ್ಳಲಾಗಿದೆ. ಆತನ ವಿಚಾರಣೆ ನಡೆಸಲಾಗುವುದು’’ ಎಂದು ಜೈಸಲ್ಮೇರ್ ನ ಪೊಲೀಸ್ ವರಿಷ್ಠ ಅಭಿಷೇಕ್ ಶಿವಹರೆ ತಿಳಿಸಿದ್ದಾರೆ.
‘‘ಈತ ಈ ಪ್ರದೇಶದ ವ್ಯೆವಾಹತ್ಮಕ ಕಾರ್ಯಾಚರಣೆ ಹಾಗೂ ಚಟುವಟಿಕೆಗಳಿಗೆ ಸಂಬಂಧಿಸಿ ಅತಿ ಸೂಕ್ಷ್ಮ ಮಾಹಿತಿಯನ್ನು ಪೂರೈಸಿದ್ದಾನೆ ಎಂದು ಶಂಕಿಸಲಾಗಿದೆ’’ ಎಂದು ಪೊಲೀಸರು ತಿಳಿಸಿದ್ದಾರೆ.
ಡಿಆರ್ಡಿಒ ಜೈಸಲ್ಮೇರ್ ಪೋಖರಣ್ ಫೈಯರಿಂಗ್ ವಲಯದಲ್ಲಿ ಕ್ಷಿಪಣಿ, ಶಸ್ತ್ರಾಸ್ತ್ರಗಳ ಪರೀಕ್ಷೆ ಹಾಗೂ ಪ್ರಯೋಗ ನಡೆಸುತ್ತದೆ. ಈ ಪ್ರಕ್ರಿಯೆಯಲ್ಲಿ ಭಾಗಿಯಾಗುವ ತಜ್ಞರು ಹಾಗೂ ಅಧಿಕಾರಿಗಳು ಈ ಅತಿಥಿ ಗೃಹದಲ್ಲಿ ತಂಗುತ್ತಿದ್ದರು.