ಕೋವಿಡ್ ಪ್ರಕರಣ | 5 ವರ್ಷಗಳ ಕಾಲ ನಡೆದ 70 ಮಂದಿ ತಬ್ಲಿಘಿ ಜಮಾತ್ ಸದಸ್ಯರ ವಿರುದ್ಧದ ಆರೋಪಗಳು, ವಿಚಾರಣೆಯನ್ನು ರದ್ದುಗೊಳಿಸಿದ ದಿಲ್ಲಿ ಹೈಕೋರ್ಟ್
ಸಾಂದರ್ಭಿಕ ಚಿತ್ರ | PC : PTI
ಹೊಸದಿಲ್ಲಿ: ತಬ್ಲಿಘಿ ಜಮಾತ್ ನೊಂದಿಗೆ ಗುರುತಿಸಿಕೊಂಡಿದ್ದ ಸುಮಾರು 70 ಮಂದಿ ಭಾರತೀಯರ ವಿರುದ್ಧ ಕೋವಿಡ್-19 ಹರಡಿದ ಆರೋಪದ ಮೇಲೆ ದಾಖಲಾಗಿದ್ದ 16 ಎಫ್ಐಆರ್ ಗಳು ಹಾಗೂ ಈ ಪ್ರಕರಣಗಳಲ್ಲಿ ಸಲ್ಲಿಕೆಯಾಗಿದ್ದ ಆರೋಪ ಪಟ್ಟಿಗಳು ಸೇರಿದಂತೆ ನಂತರದ ವಿಚಾರಣೆಯನ್ನು ಐದು ವರ್ಷಗಳಿಗೂ ಹೆಚ್ಚು ಕಾಲದ ನಂತರ ದಿಲ್ಲಿ ಹೈಕೋರ್ಟ್ ವಜಾಗೊಳಿಸಿದೆ.
ವಿಚಾರಣೆಯನ್ನು ವಜಾಗೊಳಿಸಲಾಗಿದೆ ಎಂದು ನ್ಯಾ. ನೀನಾ ಕೃಷ್ಣ ಅವರು ತೆರೆದ ನ್ಯಾಯಾಲಯದಲ್ಲಿ ಘೋಷಿಸಿದರಾದರೂ, ಈ ಆದೇಶದ ವಿಸ್ತೃತ ವಿವರವನ್ನು ನಿರೀಕ್ಷಿಸಲಾಗುತ್ತಿದೆ.
ಸಾಂಕ್ರಾಮಿಕ ಅವಧಿಯಾಗಿದ್ದ ಮಾರ್ಚ್ 24, 2020ರಿಂದ ಮಾರ್ಚ್ 30, 2020ರ ನಡುವೆ ವಿವಿಧ ಮಸೀದಿಗಳಲ್ಲಿ ವಿದೇಶಿ ಪ್ರಜೆಗಳಿಗೆ ಆಶ್ರಯ ಒದಗಿಸುವ ಮೂಲಕ, ಕ್ರಿಮಿನಲ್ ಪಿತೂರಿಯನ್ನು ನಡೆಸಲಾಗಿದೆ ಎಂದು ಭಾರತೀಯ ದಂಡ ಸಂಹಿತೆಯ ವಿವಿಧ ಸೆಕ್ಷನ್ ಗಳಡಿ 70 ಮಂದಿ ಭಾರತೀಯರ ವಿರುದ್ಧ 16 ಎಫ್ಐಆರ್ ಗಳನ್ನು ದಾಖಲಿಸಲಾಗಿತ್ತು. ಈ ಎಫ್ಐಆರ್ ಗಳಲ್ಲಿ 195 ವಿದೇಶಿ ಪ್ರಜೆಗಳನ್ನೂ ಹೆಸರಿಸಲಾಗಿತ್ತು. ಆದರೆ, ಬಹುತೇಕ ದೋಷಾರೋಪ ಪಟ್ಟಿಗಳಲ್ಲಿ ಯಾವುದೇ ವಿದೇಶಿ ಪ್ರಜೆಯನ್ನು ಆರೋಪಿಯನ್ನಾಗಿ ಹೆಸರಿಸಿರಲಿಲ್ಲ. ಹೀಗಾಗಿ, ದ್ವಿಮುಖ ನೀತಿ ಅನುಸರಿಸಲಾಗಿದೆ ಎಂದು ಅಭಿಪ್ರಾಯಪಟ್ಟಿದ್ದ ಮ್ಯಾಜಿಸ್ಟ್ರೇಟ್ ನ್ಯಾಯಾಲಯ, ದೋಷಾರೋಪ ಪಟ್ಟಿಯ ಗಂಭೀರತೆಯನ್ನು ಮಾನ್ಯ ಮಾಡಲು ನಿರಾಕರಿಸಿತ್ತು.
ದಿಲ್ಲಿ ಪೊಲೀಸ್ ಇಲಾಖೆಯ ಅಪರಾಧ ವಿಭಾಗದ ಪೊಲೀಸರು ಆರಂಭದಲ್ಲಿ ಏಳು ಮಂದಿ ಭಾರತೀಯರ ವಿರುದ್ಧ ಸಾಂಕ್ರಾಮಿಕ ರೋಗಗಳ ಕಾಯ್ದೆ, 1897ರ ಸೆಕ್ಷನ್ 3 ಹಾಗೂ ಭಾರತೀಯ ದಂಡ ಸಂಹಿತೆಯ ವಿವಿಧ ಸೆಕ್ಷನ್ ಗಳಾದ 188, 269, 270, 120-ಬಿ ಹಾಗೂ 271ರ ಅಡಿ ಪ್ರಕರಣ ದಾಖಲಿಸಿಕೊಂಡಿದ್ದರು. ಇದಲ್ಲದೆ ವಿಪತ್ತು ನಿರ್ವಹಣಾ ಕಾಯ್ದೆ, 2005ರ ನಿಯಮಗಳಡಿಯೂ ಪ್ರಕರಣ ದಾಖಲಿಸಿಕೊಂಡಿದ್ದರು.
ಇದಾದ ನಂತರ, ದಿಲ್ಲಿ ಪೊಲೀಸ್ ಇಲಾಖೆಯ ಅಪರಾಧ ವಿಭಾಗವು 955 ವಿದೇಶಿ ಪ್ರಜೆಗಳ ವಿರುದ್ಧ ವಿದೇಶಿ ಪ್ರಜೆಗಳ ಕಾಯ್ದೆ, 1946ರ ಸೆಕ್ಷನ್ 14 (ಬಿ) ಅಡಿ ಸೇರಿದಂತೆ 48 ದೋಷಾರೋಪ ಪಟ್ಟಿಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಿತ್ತು. ಈ ಪೈಕಿ 911 ವಿದೇಶಿ ಪ್ರಜೆಗಳು ಮ್ಯಾಜಿಸ್ಟ್ರೇಟ್ ನ್ಯಾಯಾಲಯದೆದುರು ಸಂಧಾನ ಮಾರ್ಗದ ಮೊರೆ ಹೋಗಿದ್ದರು.
ನಂತರ, ಇದೇ ಆರೋಪದಡಿ ವಿದೇಶಿ ಪ್ರಜೆಗಳು ಹಾಗೂ ಭಾರತೀಯ ಪ್ರಜೆಗಳೂ ಸೇರಿದಂತೆ 193 ಮಂದಿಯ ವಿರುದ್ಧ ಚಾಂದನಿ ಮಹಲ್ ಪೊಲೀಸ್ ಠಾಣೆ ಸೇರಿದಂತೆ ದಿಲ್ಲಿಯಾದ್ಯಂತ ಇನ್ನಿತರ 28 ಎಫ್ಐಆರ್ ಗಳು ದಾಖಲಾಗಿದ್ದವು. ಈ ಪೈಕಿ ಭಾರತೀಯ ಪ್ರಜೆಗಳ ವಿರುದ್ಧ ಚಾಂದನಿ ಮಹಲ್ ಪೊಲೀಸ್ ಠಾಣೆಯಿಂದ ಸಲ್ಲಿಕೆಯಾಗಿದ್ದ ದೋಷಾರೋಪ ಪಟ್ಟಿಯನ್ನು ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಗಂಭೀರವಾಗಿ ಪರಿಗಣಿಸಿತ್ತು.
2020ರ ಎಪ್ರಿಲ್ ಆರಂಭದಲ್ಲಿ ಭಾರತದಲ್ಲಿ ಕೋವಿಡ್-19 ಸಾಂಕ್ರಾಮಿಕ ಸ್ಫೋಟಗೊಂಡಿದ್ದ ಸಂದರ್ಭದಲ್ಲಿ ಅಂತಾರಾಷ್ಟ್ರೀಯ ಮಿಷನರಿ ಸಂಘಟನೆಯಾದ ತಬ್ಲಿಘಿ ಜಮಾತ್ ಆರೋಗ್ಯ ತುರ್ತು ಪರಿಸ್ಥಿತಿಯನ್ನು ಮತ್ತಷ್ಟು ಉಲ್ಬಣಗೊಳಿಸಿತ್ತು ಎಂದು ಆರೋಪಿಸಲಾಗಿತ್ತು. ಈ ಸಂಘಟನೆಯು ಕೋವಿಡ್-19 ಪರಿಸ್ಥಿತಿಯನ್ನು ಮತ್ತಷ್ಟು ಉಲ್ಬಣಗೊಳಿಸುತ್ತಿದೆ ಎಂದು ಹಲವು ನಾಯಕರು ಆರೋಪಿಸಿದ್ದರು. ಇದರ ಬೆನ್ನಿಗೇ, ದಿಲ್ಲಿಯಲ್ಲಿರುವ ತಬ್ಲಿಘಿ ಜಮಾತ್ ಸಂಘಟನೆಯ ಕೇಂದ್ರ ಕಚೇರಿಯಲ್ಲಿ ಆಯೋಜಿಸಲಾಗಿದ್ದ ಸಭೆಯಲ್ಲಿ ಭಾಗವಹಿಸುವ ಮೂಲಕ, ತುರ್ತು ಆರೋಗ್ಯ ಪರಿಸ್ಥಿತಿ ನಿಯಮಗಳನ್ನು ಉಲ್ಲಂಘಿಸಲಾಗಿದೆ ಎಂದು ಆರೋಪಿಸಿದ್ದ ಕೇಂದ್ರ ಸರಕಾರ, 950ಕ್ಕೂ ಹೆಚ್ಚು ಮಂದಿ ವಿದೇಶಿ ಪ್ರಜೆಗಳನ್ನು ಕಪ್ಪು ಪಟ್ಟಿಗೆ ಸೇರ್ಪಡೆ ಮಾಡಿತ್ತು.
ಸೌಜನ್ಯ: indianexpress.com