×
Ad

"ತಮಿಳು ನಿರ್ದೇಶಕನಿಂದ ಕ್ರೂರ ಅತ್ಯಾಚಾರ": 90ರ ದಶಕದ ಮಲಯಾಳಂ ನಟಿಯಿಂದ ಆಘಾತಕಾರಿ ವಿಷಯ ಬಹಿರಂಗ

Update: 2024-09-05 21:54 IST

 ನಟಿ ಸೌಮ್ಯಾ |  PC : NDTV  

ಚೆನ್ನೈ: ಮಲಯಾಳಂ ಚಿತ್ರರಂಗವನ್ನು ತಲ್ಲಣಗೊಳಿಸಿರುವ ಲೈಂಗಿಕ ದೌರ್ಜನ್ಯ ಮತ್ತು ಅತ್ಯಾಚಾರ ಆರೋಪಗಳ ಅಲೆ ಈಗ ತಮಿಳುನಾಡಿನಲ್ಲಿ ಪ್ರತಿಧ್ವನಿಸಿದೆ. ತಮಿಳು ನಿರ್ದೇಶಕರೋರ್ವರು ತನಗೆ ತೀವ್ರ ಮಾನಸಿಕ ಮತ್ತು ದೈಹಿಕ ಹಿಂಸೆಯನ್ನು ನೀಡಿದ್ದರು ಮತ್ತು ತನ್ನ ಮೇಲೆ ಕ್ರೂರ ಅತ್ಯಾಚಾರವನ್ನು ನಡೆಸಿದ್ದರು ಎಂದು ದಕ್ಷಿಣ ಭಾರತೀಯ ನಟಿ ಸೌಮ್ಯಾ ಆರೋಪಿಸಿದ್ದಾರೆ.

ಸುದ್ದಿವಾಹಿನಿಗೆ ನೀಡಿದ ಭಾವನಾತ್ಮಕ ಸಂದರ್ಶನದಲ್ಲಿ ಸೌಮ್ಯಾ, ನಿರ್ದೇಶಕ ತನ್ನನ್ನು ಲೈಂಗಿಕ ಗುಲಾಮಳನ್ನಾಗಿ ಮಾಡಿಕೊಂಡಿದ್ದ ಎನ್ನುವುದನ್ನು ಬಹಿರಂಗಗೊಳಿಸಿದರು. ಸದ್ಯಕ್ಕೆ ನಿರ್ದೇಶಕನ ಗುರುತನ್ನು ಅವರು ಬಹಿರಂಗಗೊಳಿಸಿಲ್ಲ.

‘‘ನನಗೆ 18 ವರ್ಷ ವಯಸ್ಸಾಗಿದ್ದಾಗ ತನ್ನ ಪತ್ನಿಯೊಂದಿಗೆ ತನ್ನನ್ನು ಭೇಟಿಯಾಗಿದ್ದ ನಿರ್ದೇಶಕ ತಾನು ನನ್ನ ‘ತಂದೆ’ಯಂತೆ ಎಂದು ಹೇಳಿಕೊಂಡು ನಾಟಕವಾಡಿದ್ದ. ಕ್ರಮೇಣ ಆತ ನನ್ನಿಂದ ಮಗುವನ್ನು ಪಡೆಯುವ ಆತಂಕಕಾರಿ ಇಚ್ಛೆಯನ್ನು ವ್ಯಕ್ತಪಡಿಸಿದ್ದ’’ಎಂದು ಹೇಳಿದ ಸೌಮ್ಯಾ,ನಿರ್ದೇಶಕ ಕಾಲೇಜು ದಿನಗಳಲ್ಲಿ ತನ್ನ ದೌರ್ಬಲ್ಯದ ಲಾಭವೆತ್ತಿಕೊಂಡು ತನ್ನ ಮೇಲೆ ಪದೇ ಪದೇ ಅತ್ಯಾಚಾರವೆಸಗಿದ್ದ. ತಾನು ಮಲಯಾಳಂ ಚಿತ್ರರಂಗವನ್ನು ಪ್ರವೇಶಿಸಿದ ನಂತರವೂ ಈ ಶೋಷಣೆ ಮುಂದುವರಿದಿತ್ತು ಎಂದಿದ್ದಾರೆ.

ಸೌಮ್ಯಾ 1990ರ ದಶಕದಲ್ಲಿ ಮೂರು ಯಶಸ್ವಿ ಚಿತ್ರಗಳಲ್ಲಿ ಅಭಿನಯಿಸಿದ್ದರು,ಆದರೆ ಇನ್ನಷ್ಟು ಶೋಷಣೆಯನ್ನು ಅನುಭವಿಸಿದ್ದರು.

ಕೇರಳ ಸರಕಾರವು ರಚಿಸಿರುವ ವಿಶೇಷ ಪೋಲಿಸ್ ತಂಡಕ್ಕೆ ಸದ್ರಿ ನಿರ್ದೇಶಕನ ಗುರುತನ್ನು ಬಹಿರಂಗಗೊಳಿಸಲು ತಾನು ಯೋಜಿಸಿದ್ದೇನೆ ಎಂದು ಸೌಮ್ಯಾ ಸಂದರ್ಶನದಲ್ಲಿ ತಿಳಿಸಿದರು. ಈ ತಂಡವು ಪ್ರಸ್ತುತ ಮಲಯಾಳಂ ಚಿತ್ರರಂಗದಲ್ಲಿನ ಹಲವಾರು ಲೈಂಗಿಕ ದೌರ್ಜನ್ಯ ಪ್ರಕರಣಗಳ ತನಿಖೆಯನ್ನು ನಡೆಸುತ್ತಿದೆ.

‘ನನ್ನ ಸಹನಟರ ಪೈಕಿ ನನ್ನ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ್ದ ಓರ್ವನನ್ನು ಹೇಮಾ ಸಮಿತಿ ವರದಿಯಲ್ಲಿ ಹೆಸರಿಸಲಾಗಿದೆ. ನಿರ್ದೇಶಕರು, ನಟರು ಮತ್ತು ತಂತ್ರಜ್ಞರು ಸಹ ನನ್ನನ್ನು ಶೋಷಿಸಿದ್ದರು. ಓರ್ವ ವ್ಯಕ್ತಿ ಪಾನ್ ತಿಂದು ನನ್ನ ಮೇಲೆ ಉಗುಳಿದ್ದ. ನನ್ನ ಮನಸ್ಸಿಗಾಗಿದ್ದ ಗಾಯ ಮತ್ತು ಅವಮಾನದಿಂದ ಚೇತರಿಸಿಕೊಳ್ಳಲು ನನಗೆ 30 ವರ್ಷಗಳೇ ಬೇಕಾದವು. ಇತರ ಸಂತ್ರಸ್ತೆಯರೂ ಮುಂದೆ ಬಂದು ತಮ್ಮ ಕಹಿ ಅನುಭವಗಳನ್ನು ಬಹಿರಂಗಗೊಳಿಸುವುದನ್ನು ನಾನು ಉತ್ತೇಜಿಸುತ್ತೇನೆ ’ಎಂದು ಸೌಮ್ಯಾ ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News