12 ಸಾವಿರ ಉದ್ಯೋಗ ಕಡಿತ: ಟಿಸಿಎಸ್ ಘೋಷಣೆ
PC : TCS
ಹೊಸದಿಲ್ಲಿ, ಜು. 27: ದೇಶದ ಅತಿ ದೊಡ್ಡ ಐಟಿ ಸೇವೆ ಪೂರೈಕೆದಾರ ಕಂಪೆನಿ ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ ಪ್ರಸಕ್ತ ಆರ್ಥಿಕ ವರ್ಷದಲ್ಲಿ ತನ್ನ 12,000 (ಶೇ.2) ಕ್ಕೂ ಅಧಿಕ ಉದ್ಯೋಗಿಗಳನ್ನು ಕೆಲಸದಿಂದ ತೆಗೆಯಲು ನಿರ್ಧರಿಸಿದೆ.
ಇದು ಹಿರಿಯ ಹಾಗೂ ಮಧ್ಯಮ ಶ್ರೇಣಿಯಲ್ಲಿ ಕೆಲಸ ಮಾಡುತ್ತಿರುವ ಉದ್ಯೋಗಿಗಳ ಮೇಲೆ ಹೆಚ್ಚು ಪರಿಣಾಮ ಬೀರಲಿದೆ.
ಹೊಸ ಮಾರುಕಟ್ಟೆ ಪ್ರವೇಶಿಸುತ್ತಿರುವುದರಿಂದ, ನೂತನ ತಂತ್ರಜ್ಞಾನದಲ್ಲಿ ಹೂಡಿಕೆ ಮಾಡುತ್ತಿರುವುದರಿಂದ ಹಾಗೂ ಕೃತಕ ಬುದ್ಧಿಮತ್ತೆ (ಎಐ)ಯನ್ನು ನಿಯೋಜಿಸುತ್ತಿರುವುದರಿಂದ ಕಂಪೆನಿ ಸಿಬ್ಬಂದಿಯ ಮರು ತರಬೇತಿ ಹಾಗೂ ಮರು ನೇಮಕ ಮಾಡುತ್ತಿದೆ. ಈ ಪ್ರಕ್ರಿಯೆಯ ಭಾಗವಾಗಿ ಸುಮಾರು 12,000 ಉದ್ಯೋಗಿಗಳನ್ನು ಕೆಲಸದಿಂದ ತೆಗೆಯಲಾಗುತ್ತಿದೆ ಎಂದು ಟಾಟಾ ಕನ್ಸಲ್ಟೆನ್ಸಿ ಸರ್ವೀಸ್ ರವಿವಾರ ತಿಳಿಸಿದೆ.
ಈ ಕಡಿತವು ಗ್ರಾಹಕರಿಗೆ ಒದಗಿಸುವ ಸೇವೆಗಳ ಮೇಲೆ ಯಾವುದೇ ಪರಿಣಾಮ ಬೀರದಂತೆ ಪುನರ್ ರಚನೆ ಮಾಡಲಾಗುವುದು. ಉದ್ಯೋಗ ಕಳೆದುಕೊಳ್ಳುವವರಿಗೆ ಸೂಕ್ತ ನೆರವು ನೀಡಲಾಗುವುದು ಎಂದು ಅದು ಹೇಳಿದೆ.