ಚುನಾವಣಾ ರ‍್ಯಾಲಿಯಲ್ಲಿ ಮಹಿಳಾ ಅಭ್ಯರ್ಥಿಗೆ ಹಾರ ಹಾಕಿದ ನಿತೀಶ್ ಕುಮಾರ್; ಮಾನಸಿಕ ಆರೋಗ್ಯವನ್ನು ಪ್ರಶ್ನಿಸಿದ ತೇಜಸ್ವಿ ಯಾದವ್
Screengrab: X/@yadavtejashwi
ಮುಝಾಫ್ಫರ್ ಪುರ್: ಮಂಗಳವಾರ ಚುನಾವಣಾ ರ‍್ಯಾಲಿಯೊಂದರಲ್ಲಿ ಮಹಿಳಾ ಎನ್ಡಿಎ ಅಭ್ಯರ್ಥಿಯೊಬ್ಬರಿಗೆ ಹಾರ ಹಾಕಿ, ಅದನ್ನು ತಡೆಯಲು ಬಂದ ತಮ್ಮ ಸಹಚರನ ಮೇಲೆ ಅಸಮಾಧಾನ ವ್ಯಕ್ತಪಡಿಸಿದ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ನಡವಳಿಕೆಯು ಮತ್ತೊಮ್ಮೆ ಅವರ ಮಾನಸಿಕ ಆರೋಗ್ಯ ಕುರಿತ ವಿವಾದಕ್ಕೆ ಕಿಡಿ ಹಚ್ಚಿದೆ.
ಮಂಗಳವಾರ ಮುಝಾಫ್ಫರ್ ಪುರ್ ನಲ್ಲಿ ಆಯೋಜಿಸಲಾಗಿದ್ದ ಚುನಾವಣಾ ರ‍್ಯಾಲಿ ಮೂಲಕ, ಜೆಡಿಯು ಮುಖ್ಯಸ್ಥರೂ ಆದ ನಿತೀಶ್ ಕುಮಾರ್ ತಮ್ಮ ಪಕ್ಷದ ಚುನಾವಣಾ ಪ್ರಚಾರಕ್ಕೆ ಚಾಲನೆ ನೀಡಿದರು. ಈ ವೇಳೆ ಅವರು ಸ್ಥಳೀಯ ಪಕ್ಷದ ಅಭ್ಯರ್ಥಿ ಅಜಯ್ ಕುಶ್ವಾಹರ ಹೆಸರನ್ನು ತಪ್ಪಾಗಿ ಉಚ್ಚರಿಸಿದ್ದು ಹಾಗೂ ಔರಾಲಿ ವಿಧಾನಸಭಾ ಕ್ಷೇತ್ರದ ಬಿಜೆಪಿಯ ಅಭ್ಯರ್ಥಿ ರಮಾ ನಿಷಾದ್ ಹೆಸರಿಗೆ ‘ಶ್ರೀ’ ಎಂಬ ಗೌರವಸೂಚಕ ಬಳಸಿದ್ದು ಸಭಿಕರ ಹುಬ್ಬೇರುವಂತೆ ಮಾಡಿತು.
ಈ ವೇಳೆ ಕಳೆದ ವಾರವಷ್ಟೇ ಬಿಜೆಪಿ ಸೇರ್ಪಡೆಯಾಗಿದ್ದ ರಮಾ ನಿಷಾದ್ ಅವರಿಗೆ ಕೈಯಲ್ಲಿ ಹೂಮಾಲೆ ಹಿಡಿದುಕೊಂಡಿದ್ದ ನಿತೀಶ್ ಕುಮಾರ್ ಹಾರ ಹಾಕಲು ಮುಂದಾದರು. ಆಗ ಮುಜುಗರಕ್ಕೊಳಗಾದ ರಮಾ ನಿಷಾದ್ ಕೊಂಚ ಹಿಂದೆ ಸರಿದರು. ಈ ವೇಳೆ ನಿತೀಶ್ ಕುಮಾರ್ ಅವರ ನಿಟಕಟವರ್ತಿ ಸಂಜಯ್ ಕುಮಾರ್ ಝಾ ಹಾರ ಹಾಕುವುದನ್ನು ತಡೆಯಲು ಮುಂದಾದರು. ಆದರೆ, ಅದಕ್ಕೆ ನಿತೀಶ್ ಕುಮಾರ್ ಅವಕಾಶ ನೀಡದೆ ಇದ್ದುದರಿಂದ, ಸಂಜಯ್ ಕುಮಾರ್ ಝಾ ಹಿಂದೆ ಸರಿಯಬೇಕಾಯಿತು.
ಈ ಕುರಿತು ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಆರ್ಜೆಡಿ ನಾಯಕ ತೇಜಸ್ವಿ ಯಾದವ್, “ಅವರು ನಿಜಕ್ಕೂ ವಿಚಿತ್ರ ಮನುಷ್ಯ. ಒಂದು ವೇಳೆ ಅವರು ಮಾನಸಿಕವಾಗಿ ಸ್ವಸ್ಥರಾಗಿದ್ದರೆ, ಅವರೇಕೆ ಲಿಖಿತ ಭಾಷಣವನ್ನು ಓದುತ್ತಿದ್ದಾರೆ ಹಾಗೂ ಇಂತಹ ನಡವಳಿಕೆಯನ್ನು ಏಕೆ ತೋರುತ್ತಿದ್ದರು?” ಎಂದು ಪ್ರಶ್ನಿಸಿದ್ದಾರೆ.
ई गजब आदमी है भाई!!! 😀
— Tejashwi Yadav (@yadavtejashwi) October 21, 2025
मुख्यमंत्री जी अगर स्वस्थ है तो लिखा हुआ भाषण पढ़ ऐसी हरकतें क्यों कर रहे है? #Bihar pic.twitter.com/Xhit9l37Ib