×
Ad

ರೋಚಕ ಹಣಾಹಣಿಯಲ್ಲಿ ರಾಘೋಪುರ್ ಕ್ಷೇತ್ರದಲ್ಲಿ ತೇಜಸ್ವಿ ಯಾದವ್‌ಗೆ ಗೆಲುವು

Update: 2025-11-14 18:49 IST

ತೇಜಸ್ವಿ ಯಾದವ್ | Photo Credit : 

ಪಾಟ್ನಾ: ಆರ್‌ಜೆಡಿಯ ಭದ್ರಕೋಟೆ ಎಂದೇ ಪರಿಗಣಿಸಲಾಗಿರುವ ರಘೋಪುರ್ ವಿಧಾನಸಭಾ ಕ್ಷೇತ್ರದಲ್ಲಿ ಅಂತಿಮ ಘಟ್ಟದವರೆಗೂ ನಡೆದ ರೋಚಕ ಹಣಾಹಣಿಯಲ್ಲಿ ಆರ್‌ಜೆಡಿ ನಾಯಕ ಹಾಗೂ ಮಹಾಘಟಬಂಧನ್ ಮುಖ್ಯಮಂತ್ರಿ ಅಭ್ಯರ್ಥಿ ತೇಜಸ್ವಿ ಯಾದವ್ ಸುಮಾರು 11,000 ಮತಗಳ ಅಂತರದಲ್ಲಿ ಗೆಲುವು ಸಾಧಿಸಿದ್ದಾರೆ.

ಶುಕ್ರವಾರ ಬೆಳಗ್ಗೆ ಮತ ಎಣಿಕೆ ಪ್ರಾರಂಭಗೊಳ್ಳುವುದಕ್ಕೂ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ್ದ 36 ವರ್ಷದ ತೇಜಸ್ವಿ ಯಾದವ್, "ನಾವು ಸರಕಾರ ರಚಿಸುವ ವಿಶ್ವಾಸವಿದೆ. ಇದು ಜನರ ಗೆಲುವಾಗಲಿದೆ. ನಾವು ಸರಕಾರ ರಚಿಸಲಿದ್ದೇವೆ" ಎಂದು ಆತ್ಮವಿಶ್ವಾಸ ವ್ಯಕ್ತಪಡಿಸಿದ್ದರು.

ಆದರೆ, ಮತ ಎಣಿಕೆ ಪ್ರಾರಂಭವಾದಾಗ ಆರಂಭಿಕ ಮುನ್ನಡೆ ಗಳಿಸಿದ್ದ ತೇಜಸ್ವಿ ಯಾದವ್, ಒಂದು ಹಂತದಲ್ಲಿ ಹಿನ್ನಡೆಗೆ ಗುರಿಯಾಗಿದ್ದರು. ಕೊನೆಯ ಹಂತದವರೆಗೂ ರೋಚಕ ಹಣಾಹಣಿಗೆ ಸಾಕ್ಷಿಯಾದ ರಘೋಪುರ್, ಅಂತಿಮವಾಗಿ ತೇಜಸ್ವಿ ಯಾದವ್ ಅವರಿಗೇ ಗೆಲುವಿನ ಮಾಲೆ ಹಾಕಿತು.

ರಘೋಪುರ್ ವಿಧಾನಸಭಾ ಕ್ಷೇತ್ರ ಆರ್‌ಜೆಡಿಯ ಭದ್ರಕೋಟೆಯಾಗಿದೆ. ಈ ಹಿಂದೆ ಈ ವಿಧಾನಸಭಾ ಕ್ಷೇತ್ರವನ್ನು ಅವರ ತಂದೆ ಲಾಲೂ ಪ್ರಸಾದ್ ಯಾದವ್ ಹಾಗೂ ತಾಯಿ ರಾಬ್ರಿ ದೇವಿ ಪ್ರತಿನಿಧಿಸಿದ್ದರು. ಬಳಿಕ, 2015ರಿಂದ ಈ ಕ್ಷೇತ್ರದಿಂದ ತೇಜಸ್ವಿ ಯಾದವ್ ಸ್ಪರ್ಧಿಸುತ್ತಾ ಬರುತ್ತಿದ್ದಾರೆ. 2020ರ ವಿಧಾನಸಭಾ ಚುನಾವಣೆಯಲ್ಲಿ ಅವರು ಈ ಕ್ಷೇತ್ರದಿಂದ 38,000 ಮತಗಳ ಭಾರಿ ಅಂತರದಿಂದ ಗೆಲುವು ಸಾಧಿಸಿದ್ದರು.

ಆದರೆ, ಈ ಬಾರಿ ಸತೀಶ್ ಕುಮಾರ್ ಯಾದವ್‌ರನ್ನು ಬಿಜೆಪಿ ತನ್ನ ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸಿತ್ತು. ಈ ಹಿಂದೆ 2010ರಲ್ಲಿ ಜೆಡಿಯು ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಸತೀಶ್ ಕುಮಾರ್ ಯಾದವ್, ರಾಬ್ರಿ ದೇವಿಯನ್ನು ಪರಾಭವಗೊಳಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News