×
Ad

ಪ್ರತಿಪಕ್ಷಗಳ ಸಭೆಯಲ್ಲಿ ‘ಪ್ರಧಾನಿ ಹುದ್ದೆ’ಯ ಬಗ್ಗೆ ಚರ್ಚೆ ಆಗಿಲ್ಲ: ಶರದ್ ಪವಾರ್

Update: 2023-06-26 22:12 IST

ಶರದ್ ಪವಾರ್ |  Photo: PTI

ಪುಣೆ: ಕಳೆದ ವಾರ ಪಾಟ್ನಾದಲ್ಲಿ ನಡೆದ ಪ್ರತಿಪಕ್ಷಗಳ ಸಭೆಯಲ್ಲಿ ‘‘ಪ್ರಧಾನಿ ಹುದ್ದೆ’’ ಬಗ್ಗೆ ಯಾವುದೇ ಚರ್ಚೆ ನಡೆದಿಲ್ಲ ಎಂದು ನ್ಯಾಶನಲಿಸ್ಟ್ ಕಾಂಗ್ರೆಸ್ ಪಕ್ಷ (NCP)ದ ಅಧ್ಯಕ್ಷ ಶರದ್ ಪವಾರ್ ಸೋಮವಾರ ಹೇಳಿದ್ದಾರೆ.

ಹಣದುಬ್ಬರ, ನಿರುದ್ಯೋಗ ಮತ್ತು ಕೆಲವು ಸ್ಥಳಗಳಲ್ಲಿ ಕೋಮು ಶಕ್ತಿಗಳನ್ನು ಹುರಿದುಂಬಿಸಲು ನಡೆಸಲಾಗುತ್ತಿರುವ ‘‘ಉದ್ದೇಶಪೂರ್ವಕ ಪ್ರಯತ್ನಗಳ’’ ಬಗ್ಗೆ ಆ ಸಭೆಯಲ್ಲಿ ಚರ್ಚೆ ನಡೆಯಿತು ಎಂದು ಮಹಾರಾಷ್ಟ್ರದ ಬಾರಾಮತಿ ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಪವಾರ್ ಹೇಳಿದರು.

ಪ್ರತಿಪಕ್ಷಗಳ ಸಭೆಯನ್ನು ಟೀಕಿಸಿರುವುದಕ್ಕಾಗಿ ಅವರು ಬಿಜೆಪಿ ವಿರುದ್ಧವೂ ಈ ಸಂದರ್ಭದಲ್ಲಿ ಕಿಡಿಗಾರಿದರು. ‘‘ಈ ಸಮಾವೇಶದ ಬಗ್ಗೆ ಬಿಜೆಪಿಗೆ ಯಾಕೆ ಚಿಂತೆ? ಬಿಜೆಪಿಗೆ ರಾಜಕೀಯ ಪ್ರಬುದ್ಧತೆ ಇಲ್ಲ’’ ಎಂದು ಅವರು ಅಭಿಪ್ರಾಯಪಟ್ಟರು.

ಶುಕ್ರವಾರ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಪಾಟ್ನಾದಲ್ಲಿ ಆಯೋಜಿಸಿದ ಡಝನ್‌ಗೂ ಅಧಿಕ ಪ್ರತಿಪಕ್ಷಗಳ ಸಭೆಯಲ್ಲಿ 30ಕ್ಕೂ ಅಧಿಕ ನಾಯಕರು ಭಾಗವಹಿಸಿದ್ದರು. 2024ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಒಗ್ಗಟ್ಟಾಗಿ ಎದುರಿಸಬೇಕು ಎಂಬ ನಿರ್ಣಯವನ್ನು ಪಕ್ಷಗಳು ತೆಗೆದುಕೊಂಡಿವೆ.

ತಮ್ಮ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು, ಸಾಮಾನ್ಯ ಕಾರ್ಯಸೂಚಿ ಮತ್ತು ರಾಜ್ಯವಾರು ತಂತ್ರಗಾರಿಕೆಯ ಆಧಾರದಲ್ಲಿ ತಾವು ಮುಂದಿನ ಲೋಕಸಭಾ ಚುನಾವಣೆಯನ್ನು ಎದುರಿಸುವುದಾಗಿ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಪ್ರತಿಪಕ್ಷಗಳು ತಿಳಿಸಿವೆ. ‘‘19 ಪ್ರಧಾನಿ ಅಭ್ಯರ್ಥಿಗಳು ಸಭೆ ಸೇರಿದ್ದಾರೆ’’ ಎಂಬ ಬಿಜೆಪಿಯ ಹೇಳಿಕೆಗೆ ಪ್ರತಿಕ್ರಿಯಿಸಿದ ಪವಾರ್, ಇದೊಂದು ಬಾಲಿಶ ಹೇಳಿಕೆಯಾಗಿದೆ ಎಂದರು.

‘‘ಸಭೆಯಲ್ಲಿ ಪ್ರಧಾನಿ ಹುದ್ದೆಯ ಬಗ್ಗೆ ಚರ್ಚೆ ನಡೆಯಲಿಲ್ಲ. ಹಣದುಬ್ಬರ ಮತ್ತು ನಿರುದ್ಯೋಗ ಮುಂತಾದ ವಿಷಯಗಳ ಬಗ್ಗೆ ಚರ್ಚೆ ನಡೆಯಿತು. ಕೆಲವು ಸ್ಥಳಗಳಲ್ಲಿ ಕೋಮು ಶಕ್ತಿಗಳಿಗೆ ಉತ್ತೇಜನ ನೀಡಲು ನಡೆಸಲಾಗುತ್ತಿರುವ ಉದ್ದೇಶಪೂರ್ವಕ ಪ್ರಯತ್ನಗಳ ಬಗ್ಗೆ ಚರ್ಚೆ ನಡೆಯಿತು. ಅಧಿಕಾರದಲ್ಲಿರುವವರು, ಅಂದರೆ ಬಿಜೆಪಿಯು ಸಮುದಾಯಗಳ ನಡುವೆ ಹೇಗೆ ಉದ್ವಿಗ್ನತೆಯನ್ನು ಸೃಷ್ಟಿಸುತ್ತಿದೆ ಎಂಬ ಬಗ್ಗೆಯೂ ಚರ್ಚಿಸಲಾಯಿತು’’ ಎಂದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News