ಬಿಜೆಪಿ ಶಾಸಕನ ಬಾಯಿಗೆ ಆಸಿಡ್ ಸುರಿಯುವುದಾಗಿ ಬೆದರಿಸಿದ ಟಿಎಂಸಿ ನಾಯಕ: ಆರೋಪ
ಟಿಎಂಸಿ ನಾಯಕ ಅಬ್ದುರ್ ರಹೀಮ್ ಬಕ್ಷಿ (Photo: X)
ಕೋಲ್ಕತ್ತಾ: ತೃಣಮೂಲ ಕಾಂಗ್ರೆಸ್(ಟಿಎಂಸಿ) ನಾಯಕ ಅಬ್ದುರ್ ರಹೀಮ್ ಬಕ್ಷಿ ಅವರು ಬಿಜೆಪಿ ಶಾಸಕರೋರ್ವರ ಬಾಯಿಗೆ ಆಸಿಡ್ ಸುರಿಯುವುದಾಗಿ ಬೆದರಿಕೆ ಹಾಕಿರುವ ಆರೋಪ ಕೇಳಿ ಬಂದಿದೆ.
ಬಂಗಾಳಿ ಭಾಷೆ ಮಾತನಾಡುವ ವಲಸೆ ಕಾರ್ಮಿಕರ ಮೇಲೆ ಇತರ ರಾಜ್ಯಗಳಲ್ಲಿ ನಡೆಯುತ್ತಿರುವ ದೌರ್ಜನ್ಯವನ್ನು ಖಂಡಿಸಿ ನಡೆಯುತ್ತಿರುವ ಪ್ರತಿಭಟನೆಯಲ್ಲಿ ಮಾತನಾಡುವಾಗ ಅಬ್ದುರ್ ರಹೀಮ್ ಬಕ್ಷಿ ಈ ವಿವಾದಾತ್ಮಕ ಹೇಳಿಕೆಯನ್ನು ನೀಡಿದ್ದಾರೆ ಎಂದು ಹೇಳಲಾಗಿದೆ.
ತನ್ನ ಭಾಷಣದಲ್ಲಿ ಬಕ್ಷಿ ಬಿಜೆಪಿ ಶಾಸಕ ಶಂಕರ್ ಘೋಷ್ ಹೆಸರು ಉಲ್ಲೇಖಿಸಿಲ್ಲ. ಆದರೆ ಬಂಗಾಳದ ವಲಸೆ ಕಾರ್ಮಿಕರನ್ನು ರೋಹಿಂಗ್ಯರು ಅಥವಾ ಬಾಂಗ್ಲಾದೇಶಿಗಳು ಎಂದು ವಿಧಾನಸಭೆಯಲ್ಲಿ ಘೋಷ್ ಹೇಳಿದ ಹಿಂದಿನ ಹೇಳಿಕೆಗಳನ್ನು ಉಲ್ಲೇಖಿಸಿದ್ದಾರೆ.
“ಹೊರ ರಾಜ್ಯಗಳಲ್ಲಿ ಕೆಲಸ ಮಾಡುವ ಬಂಗಾಳದ 30 ಲಕ್ಷ ವಲಸೆ ಕಾರ್ಮಿಕರು ಬಂಗಾಳಿಗಳಲ್ಲ. ಅವರು ರೋಹಿಂಗ್ಯರು, ಅವರು ಬಾಂಗ್ಲಾದೇಶಿಗಳು ಎಂದು ನಾಚಿಕೆಯಿಲ್ಲದೆ ಕೂಗಿದನು. ನಾನು ಆಗಲೂ ಹೇಳಿದ್ದೆ. ಇಂದು ಕೂಡ ಹೇಳುತ್ತಿದ್ದೇನೆ. ಈ ರೀತಿ ನೀವು ಹೇಳುವುದನ್ನು ಮತ್ತೆ ಕೇಳಿದರೆ ನಿಮ್ಮ ಬಾಯಿಯೊಳಗೆ ಆಸಿಡ್ ಹಾಕಿ ನಿಮ್ಮ ಧ್ವನಿಯನ್ನು ಸುಟ್ಟು ಹಾಕುತ್ತೇನೆ. ಇದು ಪಶ್ಚಿಮ ಬಂಗಾಳ ಎಂದು ನೀವು ತಿಳಿದುಕೊಳ್ಳಬೇಕು. ಬಂಗಾಳಿಗಳ ವಿರುದ್ಧ ಮಾತನಾಡುವುದಕ್ಕೆ ನಾವು ಅವಕಾಶ ನೀಡುವುದಿಲ್ಲ” ಎಂದು ಹೇಳಿದ್ದಾರೆ ಎಂದು ವರದಿಯಾಗಿದೆ.
ಇದಲ್ಲದೆ ಬಿಜೆಪಿ ಧ್ವಜವನ್ನು ಕಿತ್ತುಹಾಕುವಂತೆ ಮತ್ತು ಪಕ್ಷವನ್ನು ಸಾಮಾಜಿಕವಾಗಿ ಬಹಿಷ್ಕರಿಸುವಂತೆ ಬೆಂಬಲಿಗರಿಗೆ ಅಬ್ದುರ್ ರಹೀಮ್ ಬಕ್ಷಿ ಕರೆ ನೀಡಿದ್ದಾರೆ ಎಂದು ಹೇಳಲಾಗಿದೆ.