ಉತ್ತರ ಪ್ರದೇಶ | ಸ್ವಯಂಚಾಲಿತ ಕಾರಿನ ಕಿಟಕಿಗೆ ಕತ್ತು ಸಿಲುಕಿಕೊಂಡು ಒಂದೂವರೆ ವರ್ಷದ ಮಗು ಮೃತ್ಯು
ಸಾಂದರ್ಭಿಕ ಚಿತ್ರ
ಬಲ್ಲಿಯ: ಹೊಚ್ಚ ಹೊಸ ಕಾರಿನ ಸ್ವಯಂಚಾಲಿತ ಕಿಟಕಿಗೆ ಕತ್ತು ಸಿಲುಕಿಕೊಂಡು ಒಂದೂವರೆ ವರ್ಷದ ಮಗು ಮೃತಪಟ್ಟಿರುವ ದಾರುಣ ಘಟನೆ ಉತ್ತರಪ್ರದೇಶದಲ್ಲಿ ವರದಿಯಾಗಿದೆ.
ಸೋಮವಾರ ಚಾಕಿಯ ಗ್ರಾಮದ ನಿವಾಸಿ ರೋಷನ್ ಠಾಕೂರ್ ಅವರು ತಮ್ಮ ಹೊಸ ಬಲೆನೊ ಕಾರಿಗೆ ಪೂಜೆ ನೆರವೇರಿಸಲು ಚಂದಾದಿಹ್ ಗ್ರಾಮ್ ನಲ್ಲಿರುವ ದೇವಸ್ಥಾನವೊಂದಕ್ಕೆ ತಮ್ಮ ಕುಟುಂಬದ ಸದಸ್ಯರೊಂದಿಗೆ ತೆರಳಿದ್ದಾಗ ಈ ಘಟನೆ ನಡೆದಿದೆ.
ಮಂಗಳವಾರ ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ರೋಷನ್ ಸಹೋದರ ರವಿ ಠಾಕೂರ್, ನನ್ನ ಸೋದರಳಿಯ ರೇಯಾಂಶ್, ಹೊರಗಿದ್ದ ಕೋತಿಯನ್ನು ನೋಡುತ್ತಾ ಕತ್ತನ್ನು ಕಿಟಕಿಯಿಂದ ಹೊರಗೆ ಹಾಕಿದ್ದ. ಕಾರು ಚಾಲನೆಯಾದಾಗ, ಸ್ವಯಂಚಾಲಿತ ಕಿಟಿಕಿ ಮೇಲೇರಿದ್ದರಿಂದ, ಆತನ ಕತ್ತು ಅದರ ನಡುವೆ ಸಿಲುಕಿಕೊಂಡಿತು. ಇದರಿಂದ ಮಗು ಪ್ರಜ್ಞಾಹೀನವಾಯಿತು. ಕೂಡಲೇ ಆತನನ್ನು ಮಾವುನಲ್ಲಿರುವ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ಆತ ಮೃತಪಟ್ಟಿದ್ದಾನೆ ಎಂದು ವೈದ್ಯರು ಘೋಷಿಸಿದರು” ಎಂದು ತಿಳಿಸಿದ್ದಾರೆ.
ಆದರೆ, ಈ ಘಟನೆಯನ್ನು ಕುಟುಂಬದ ಸದಸ್ಯರು ಪೊಲೀಸರಿಗೆ ವರದಿ ಮಾಡಿಲ್ಲ. ಹೀಗಿದ್ದೂ, ನಾವು ಈ ವಿಷಯದ ಕುರಿತು ತನಿಖೆಗೆ ಚಾಲನೆ ನೀಡಿದ್ದೇವೆ ಎಂದು ಉಭಾಂವ್ ಠಾಣಾಧಿಕಾರಿ ರಾಜೇಂದ್ರ ಪ್ರಸಾದ್ ಸಿಂಗ್ ತಿಳಿಸಿದ್ದಾರೆ.