ಎರಡು ದಶಕದಿಂದ ಭಾರತದಲ್ಲಿ ಯುವಕರ ಸಾವಿಗೆ ಇದು ಪ್ರಮುಖ ಕಾರಣ...
ಸಾಂದರ್ಭಿಕ ಚಿತ್ರ (credit: Grok)
ಹೊಸದಿಲ್ಲಿ: ಕಳೆದ ಎರಡು ದಶಕಗಳಿಂದ ಭಾರತದಲ್ಲಿ 15-29 ವರ್ಷ ವಯೋಮಿತಿಯ ಯುವಕರ ಸಾವಿಗೆ ಆತ್ಮಹತ್ಯೆ ಅಗ್ರ ಎರಡು ಕಾರಣಗಳ ಪೈಕಿ ಒಂದಾಗಿದೆ ಎನ್ನುವ ಅಂಶ, ಸಾವಿನ ಕಾರಣಗಳ ವಿಶ್ಲೇಷಣೆಯಿಂದ ದೃಢಪಟ್ಟಿದೆ. 2020-22ರ ಅವಧಿಯಲ್ಲಿ ಮೃತಪಟ್ಟ ಪ್ರತಿ ಆರು ಮಂದಿಯ ಪೈಕಿ ಒಬ್ಬರ ಸಾವಿಗೆ ಆತ್ಮಹತ್ಯೆ ಕಾರಣ. ಜಾಗತಿಕ ಮಟ್ಟದಲ್ಲಿ ಅತ್ಮಹತ್ಯೆ ಯುವಕರ ಸಾವಿಗೆ ಮೂರನೇ ಅತಿದೊಡ್ಡ ಕಾರಣವಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.
ಅಚ್ಚರಿಯ ವಿಚಾರವೆಂದರೆ ಎಲ್ಲ ವಯೋಮಿತಿಯ ಜನರ ಸಾವಿನ ಕಾರಣಗಳನ್ನು ವಿಶ್ಲೇಷಿಸಿದಾಗ ಆತ್ಮಹತ್ಯೆ ಅಗ್ರ ಹತ್ತು ಕಾರಣಗಳಲ್ಲಿ ಸೇರಿಲ್ಲ. ಹೃದ್ರೋಗ ಸಮಸ್ಯೆ ಸಾವಿನ ಪ್ರಮುಖ ಕಾರಣ ಎನಿಸಿದ್ದು, ಉಸಿರಾಟದ ಸೋಂಕು ಮತ್ತು ಕ್ಯಾನ್ಸರ್ ನಂತರದ ಸ್ಥಾನಗಳಲ್ಲಿವೆ. ಇದರಿಂದ ಯುವಕರು ಹೆಚ್ಚಿನ ಪ್ರಮಾಣದಲ್ಲಿ ಆತ್ಮಹತ್ಯೆ ಮೂಲಕ ಸಾವಿಗೆ ಶರಣಾಗುತ್ತಿದ್ದಾರೆ ಎನ್ನುವುದು ದೃಢಪಟ್ಟಿದೆ.
2020-22ರ ಅವಧಿಯಲ್ಲಿ ಒಟ್ಟು ಮೃತಪಟ್ಟ ಯುವಜನರ ಪೈಕಿ ಶೇಕಡ 17.1 ರಷ್ಟು ಮಂದಿ ಆತ್ಮಹತ್ಯೆಯಿಂದ ಮೃತಪಟ್ಟಿದ್ದರೆ, ರಸ್ತೆ ಅಪಘಾತ (15.6%), ಹೃದ್ರೋಗ (9.8), ಉದ್ದೇಶಪೂರ್ವಕವಲ್ಲದ ಗಾಯ (8.7), ಜೀರ್ಣಸಂಬಂಧಿ ಕಾಯಿಲೆಗಳು (6.4), ಉಸಿರಾಟದ ಸೋಂಕು (4.8) ಕೂಡಾ ಸಾವಿಗೆ ಕಾರಣವಾಗಿದೆ. ಇತರ ಕಾರಣಗಳಿಂದ ಶೇಕಡ 37.5ರಷ್ಟು ಯುವಜನತೆ ಮೃತಪಟ್ಟಿದ್ದಾರೆ.
ಆತ್ಮಹತ್ಯೆಗೆ ಶರಣಾಗುವ ಯುವಜನತೆಯ ಪೈಕಿ ಯುವತಿಯರ ಪಾಲು (ಶೇಕಡ 18.2), ಯುವಕರಿಗಿಂತ (16.3%) ಅಧಿಕ. ಆದರೆ ಹಲವು ವರ್ಷಗಳಿಂದ ಈ ಅಂತರ ಕುಸಿಯುತ್ತಿದ್ದು, 2010-13ರ ಅವಧಿಯಲ್ಲಿ ಈ ಪ್ರಮಾಣ ಕ್ರಮವಾಗಿ ಶೇಕಡ 21.8 ಮತ್ತು ಶೇಕಡ 15ರಷ್ಟಾಗಿತ್ತು. ದೇಶದಲ್ಲಿ ಒಟ್ಟು ಸಾವಿನ ಸಂಖ್ಯೆಗೆ ಹೋಲಿಸಿದರೆ 15-29 ವಯೋಮಿತಿಯ ಪಾಲು ಶೇಕಡ 5ರಷ್ಟಿದೆ ಎಂದು ರಿಜಿಸ್ಟರ್ ಜನರಲ್ ಆಫ್ ಇಂಡಿಯಾ ವರದಿ ಹೇಳಿದೆ.
ಆತ್ಮಹತ್ಯೆಯ ಯೋಚನೆ ಬಂದಾಗ ಅದನ್ನು ನಿಗ್ರಹಿಸಲು ರಾಜ್ಯ ಸರಕಾರದ ಅರೋಗ್ಯ ಇಲಾಖೆಯ ಹೆಲ್ಪ್ ಲೈನ್ 104 ಸಹಾಯ ಮಾಡುತ್ತದೆ. ಅದರ ಜೊತೆಗೆ Tele-MANAS ನ 14416 ಅನ್ನೂ ಸಂಪರ್ಕಿಸಬಹುದು.