×
Ad

65 ಕೋಟಿ ರೂ. ಸುಲಿಗೆ ಪ್ರಕರಣದಲ್ಲಿ ಇಬ್ಬರು ಮಾಜಿ ಪತ್ರಕರ್ತರ ಬಂಧನ: ಲಕ್ಷಾಂತರ ರೂ. ನಗದು ವಶ

Update: 2025-06-11 18:56 IST

ಆದರ್ಶ್ ಝಾ , ಶಾಝಿಯಾ ನಿಸಾರ್  | PC :indiatoday.in

ನೊಯ್ಡಾ: 65 ಕೋಟಿ ರೂ. ಮೊತ್ತದ ಸುಲಿಗೆ ಜಾಲ ಪ್ರಕರಣದಲ್ಲಿ ಓರ್ವ ಮಾಜಿ ಮಹಿಳಾ ನಿರೂಪಕಿ ಸೇರಿದಂತೆ ಇಬ್ಬರು ಆರೋಪಿಗಳನ್ನು ಮಂಗಳವಾರ ನೊಯ್ಡಾ ಪೊಲೀಸರು ಬಂಧಿಸಿದ್ದಾರೆ.

ಆರೋಪಿಗಳನ್ನು ಶಾಝಿಯಾ ನಿಸಾರ್ ಹಾಗೂ ಆದರ್ಶ್ ಝಾ ಎಂದು ಗುರುತಿಸಲಾಗಿದೆ. ಅವರಿಬ್ಬರೂ ಖಾಸಗಿ ಸುದ್ದಿ ವಾಹಿನಿಯೊಂದರ ಅಧಿಕಾರಿಗಳ ಮೇಲೆ ಲೈಂಗಿಕ ಕಿರುಕುಳದ ಆರೋಪ ಹೊರಿಸಿ, ಅವರ ಬಳಿ ಭಾರಿ ಮೊತ್ತಕ್ಕೆ ಬೇಡಿಕೆ ಇರಿಸಿ, ಅವರನ್ನು ಬ್ಲ್ಯಾಕ್‌ಮೇಲ್ ಮಾಡಿದ್ದರು ಎಂದು ಆರೋಪಿಸಲಾಗಿದೆ.

ಪ್ರಾಥಮಿಕ ವಿಚಾರಣೆಯ ಸಂದರ್ಭದಲ್ಲಿ, ಶಾಝಿಯಾ ನಿಸಾರ್ ಖಾಸಗಿ ಸುದ್ದಿ ವಾಹಿನಿಯೊಂದರಲ್ಲಿ ಈ ಹಿಂದೆ ನಿರೂಪಕಿಯಾಗಿ ಕೆಲಸ ಮಾಡಿದ್ದಳು. ಈ ನಡುವೆ, ಆದರ್ಶ್ ಝಾ ಮತ್ತೊಂದು ಮಾಧ್ಯಮ ಸಂಸ್ಥೆಯ ಡಿಜಿಟಲ್ ವಿಭಾಗದಲ್ಲಿ ನಿರೂಪಕನಾಗಿ ಕೆಲಸ ಮಾಡುತ್ತಿದ್ದ ಎಂದು ಹೇಳಲಾಗಿದೆ.

ಪೊಲೀಸರಿಗೆ ನೀಡಿರುವ ದೂರಿನ ಪ್ರಕಾರ, ಆರಂಭದಲ್ಲಿ ಆರೋಪಿಗಳು 5 ಕೋಟಿ ರೂ‌.ಗಾಗಿ ಬೇಡಿಕೆ ಇಟ್ಟಿದ್ದರು. ಬಳಿಕ, ಅವರು ಆ ಮೊತ್ತವನ್ನು 65 ಕೋಟಿ ರೂ.ಗೆ ಏರಿಕೆ ಮಾಡಿದ್ದರು ಎಂದು ಆರೋಪಿಸಲಾಗಿದೆ. ಈ ಆರೋಪಕ್ಕೆ ಸಂಬಂಧಿಸಿದಂತೆ, ಪೊಲೀಸರು ಆರೋಪಿಗಳ ಆಡಿಯೊ ಹಾಗೂ ವಿಡಿಯೊ ಸಾಕ್ಷ್ಯಗಳನ್ನು ಕಲೆ ಹಾಕಿದ್ದಾರೆ.

ಈ ಸಂಬಂಧ ದೂರು ದಾಖಲಾಗುತ್ತಿದ್ದಂತೆಯೇ ತನಿಖೆಗೆ ಚಾಲನೆ ನೀಡಿದ್ದ ನೊಯ್ಡಾ ಸೆಕ್ಟರ್-58 ಠಾಣೆಯ ಪೊಲೀಸರು, ಶಾಝಿಯಾ ನಿಸಾರ್ ಹಾಗೂ ಆದರ್ಶ್ ಝಾ ಇಬ್ಬರನ್ನೂ ಬಂಧಿಸಿದ್ದಾರೆ. ಇವರಿಬ್ಬರ ಬಂಧನಕ್ಕೂ ಮುನ್ನ, ಶೋಧ ಕಾರ್ಯಾಚರಣೆ ನಡೆಸಿದ ಪೊಲೀಸರು, ಶಾಝಿಯಾ ನಿಸಾರ್ ನಿವಾಸದಿಂದ 34.50 ಲಕ್ಷ ರೂ. ನಗದನ್ನು ವಶಪಡಿಸಿಕೊಂಡಿದ್ದಾರೆ.

ಇಬ್ಬರೂ ಆರೋಪಿಗಳನ್ನು ನೊಯ್ಡಾ ಪೊಲೀಸರು ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದು, ಅವರನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಈ ಸುಲಿಗೆ ಜಾಲದಲ್ಲಿ ಭಾಗಿಯಾಗಿರುವ ಇನ್ನಿತರರನ್ನು ಪತ್ತೆ ಹಚ್ಚಲು ಮತ್ತಷ್ಟು ತನಿಖೆ ಮುಂದುವರಿದಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News