×
Ad

ಖನಿಜ ಒಪ್ಪಂದವು ಉಕ್ರೇನ್‌ಗೆ ಸಹಾಯ ಮಾಡಬಹುದೇ?

Update: 2025-03-02 20:20 IST

ಹೊಸದಿಲ್ಲಿ: ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್‌ಸ್ಕಿಯ ಅಮೆರಿಕ ಭೇಟಿ ನಿರೀಕ್ಷೆಯಿಂತೆ ನಡೆದಿಲ್ಲ, ಅದರಲ್ಲೂ ಮುಖ್ಯವಾಗಿ ಝೆಲೆನ್‌ಸ್ಕಿಯ ನಿರೀಕ್ಷೆಯಂತೆ ಸಾಗಿಲ್ಲ. ಶುಕ್ರವಾರ ರಾತ್ರಿ ಶ್ವೇತಭವನದ ಓವಲ್ ಕಚೇರಿಯಲ್ಲಿ ನಡೆದ ಜಂಟಿ ಪತ್ರಿಕಾಗೋಷ್ಠಿಯು ಝೆಲೆನ್‌ಸ್ಕಿ ಮತ್ತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಡುವಿನ ಕಾವೇರಿದ ವಾದ-ವಿವಾದಕ್ಕೆ ಸಾಕ್ಷಿಯಾಯಿತು.

ಅಮೆರಿಕ ಅಧ್ಯಕ್ಷರು ಉಕ್ರೇನ್ ಅಧ್ಯಕ್ಷರನ್ನು ಏರಿದ ಧ್ವನಿಯಲ್ಲಿ ಗದರಿಸಿದರು ಮತ್ತು ‘‘ನೀವು ಮೂರನೇ ಮಹಾಯುದ್ಧದೊಂದಿಗೆ ಚೆಲ್ಲಾಟವಾಡುತ್ತಿದ್ದೀರಿ’’ ಎಂದು ಹೇಳಿದರು. ‘‘ನೀವು ಒಪ್ಪಂದ ಮಾಡಿಕೊಳ್ಳಬೇಕು, ಇಲ್ಲದಿದ್ದರೆ ನಾವು ನಿಮ್ಮೊಂದಿಗೆ ಇರುವುದಿಲ್ಲ’’ ಎಂಬುದಾಗಿ ಟ್ರಂಪ್, ಝೆಲೆನ್‌ಸ್ಕಿಯನ್ನು ಬೆದರಿಸಿದರು.

ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಅಮೆರಿಕದ ಉಪಾಧ್ಯಕ್ಷ ಜೆ.ಡಿ. ವಾನ್ಸ್ ಕೂಡ ಮಧ್ಯಪ್ರವೇಶಿಸಿ, ಉಕ್ರೇನ್ ಅಧ್ಯಕ್ಷರು ‘‘ಅಮೆರಿಕದ ಮಾಧ್ಯಮಗಳ ಮುಂದೆ ದೂರು ಹೇಳುತ್ತಿದ್ದಾರೆ’’ ಎಂದು ಆರೋಪಿಸಿದರು. ಅವರ ವರ್ತನೆಯು ‘‘ಅಗೌರವಯುತವಾಗಿದೆ’’ ಎಂಬುದಾಗಿ ವಾನ್ಸ್ ಅಭಿಪ್ರಾಯಪಟ್ಟರು. ಒಂದು ಹಂತದಲ್ಲಿ ಅವರು ಝೆಲೆನ್‌ಸ್ಕಿಯನ್ನು ಉದ್ದೇಶಿಸಿ, ‘‘ನೀವು ಒಮ್ಮೆಯಾದರು ಕೃತಜ್ಞತೆ ಹೇಳಿದ್ದೀರಾ?’’ ಎಂದು ಪ್ರಶ್ನಿಸಿದರು.

ನಾಯಕರು ಕೋಪದಿಂದ ಮಾತನಾಡಿದರು ಹಾಗೂ ಟ್ರಂಪ್ ಮತ್ತು ವಾನ್ಸ್ ಇಬ್ಬರೂ ಧ್ವನಿ ಎತ್ತರಿಸಿ ಝೆಲೆನ್‌ಸ್ಕಿಯನ್ನು ಗದರಿಸಿದರು ಎಂದು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದ ಪತ್ರಕರ್ತರು ವರದಿ ಮಾಡಿದ್ದಾರೆ. ‘‘ಶುಕ್ರವಾರ ರಾತ್ರಿಯ ದೃಶ್ಯಗಳು ಓವಲ್ ಕಚೇರಿಯಲ್ಲಿ ಸಾರ್ವಜನಿಕವಾಗಿ ಗೋಚರಿಸಿದ ಅತ್ಯಂತ ನಾಟಕೀಯ ದೃಶ್ಯಗಳ ಪೈಕಿ ಒಂದು ಹಾಗೂ ಅವು ಅಮೆರಿಕದ ಅಧ್ಯಕ್ಷರಾಗಿ ಟ್ರಂಪ್ ಅಧಿಕಾರ ಸ್ವೀಕರಿಸಿದ ಬಳಿಕ, ಅಮೆರಿಕ ಮತ್ತು ಉಕ್ರೇನ್ ನಡುವಿನ ಸಂಬಂಧಗಳಲ್ಲಿ ಉಂಟಾಗಿರುವ ಆಳವಾದ ಬಿರುಕನ್ನು ತೆರೆದಿಟ್ಟಿದೆ ಎಂಬುದಾಗಿ ‘ದ ನ್ಯೂಯಾರ್ಕ್ ಟೈಮ್ಸ್’ ಹೇಳಿದೆ.

ಹಾಗಾದರೆ, ಈ ಕೋಪೋದ್ರಿಕ್ತ ಮಾತಿನ ಚಕಮಕಿಗಳಿಗೆ ಕಾರಣವೇನು? ಇದರ ಹಿಂದೆ ಇರುವುದು ಅಮೆರಿಕ ಮತ್ತು ಉಕ್ರೇನ್ ನಡುವಿನ ಖನಿಜ ಒಪ್ಪಂದಕ್ಕೆ ಸಂಬಂಧಿಸಿ ಟ್ರಂಪ್ ಆಡಳಿತ ಮತ್ತು ಝೆಲೆನ್‌ಸ್ಕಿ ಸರಕಾರದ ನಡುವಿನ ಭಿನ್ನಮತ. ಈ ಖನಿಜ ಒಪ್ಪಂದಕ್ಕೆ ತನ್ನ ಅಮೆರಿಕ ಭೇಟಿಯ ವೇಳೆ ಝೆಲೆನ್‌ಸ್ಕಿ ಸಹಿ ಹಾಕಬೇಕಾಗಿತ್ತು.

ಈ ಒಪ್ಪಂದಕ್ಕೆ ಉಕ್ರೇನ್ ತೋರಿಸುತ್ತಿರುವ ನಿರಾಸಕ್ತಿಯನ್ನು ಯಾರೂ ಅರ್ಥಮಾಡಿಕೊಳ್ಳಬಹುದಾಗಿದೆ. ಒಪ್ಪಂದವು ಅದರ ಈಗಿನ ರೂಪದಲ್ಲಿ ಒಂದು ತಿಳುವಳಿಕೆ ಪತ್ರದಂತಿದೆ. ಅಂದರೆ, ಹಲವು ಮಹತ್ವದ ವಿಷಯಗಳನ್ನು ಮುಂದಕ್ಕೆ ಬಗೆಹರಿಸಿಕೊಳ್ಳಬಹುದು ಎಂಬುದಾಗಿ ಒಪ್ಪಂದ ಹೇಳುತ್ತದೆ. ಒಪ್ಪಂದವು ಸದ್ಯಕ್ಕೆ ಪ್ರಧಾನವಾಗಿ ಗಮನ ಹರಿಸಿರುವುದು ‘‘ಪುನರ್ನಿರ್ಮಾಣ ಹೂಡಿಕೆ ನಿಧಿ’’ಯ ರಚನೆಯ ಬಗ್ಗೆ. ಅಮೆರಿಕ ಮತ್ತು ಉಕ್ರೇನ್ ದೇಶಗಳ ಜಂಟಿ ಮಾಲೀಕತ್ವದ ಈ ನಿಧಿಯ ನಿರ್ವಹಣೆಯನ್ನೂ ಜಂಟಿಯಾಗಿ ಮಾಡಲಾಗುತ್ತದೆ.

ಈ ಪ್ರಸ್ತಾಪಿತ ನಿಧಿಗೆ, ಉಕ್ರೇನ್ ಸರಕಾರದ ಮಾಲೀಕತ್ವದ ಎಲ್ಲಾ ನೈಸರ್ಗಿಕ ಸಂಪನ್ಮೂಲ ಸೊತ್ತುಗಳ ಬಳಕೆ ಮತ್ತು ನೈಸರ್ಗಿಕ ಸಂಪನ್ಮೂಲ ಸೊತ್ತುಗಳಿಗೆ ಸಂಬಂಧಿಸಿದ ಇತರ ಮೂಲಸೌಕರ್ಯಗಳ (ದ್ರವೀಕೃತ ನೈಸರ್ಗಿಕ ಅನಿಲ ಟರ್ಮಿನಲ್‌ಗಳು ಮತ್ತು ಬಂದರುಗಳು ಮುಂತಾದುವು) ಬಳಕೆಯಿಂದ ಬರುವ ಆದಾಯದ 50 ಶೇಕಡ ಹೋಗುತ್ತದೆ.

ಅಂದರೆ, ಉಕ್ರೇನ್‌ನ ಶ್ರೀಮಂತ ಕುಳಗಳ ಮಾಲೀಕತ್ವದಲಿರುವ ಹೆಚ್ಚಿನ ಖಾಸಗಿ ಮೂಲಸೌಕರ್ಯಗಳು ಈ ಒಪ್ಪಂದದ ಭಾಗವಾಗುವ ಸಾಧ್ಯತೆಯಿದೆ. ಇದು ಝೆಲೆನ್‌ಸ್ಕಿ ಮತ್ತು ಕೆಲವು ಅತಿ ಪ್ರಭಾವಶಾಲಿ ಉಕ್ರೇನಿಯರ ನಡುವಿನ ಘರ್ಷಣೆಯನ್ನು ಮತ್ತಷ್ಟು ಹೆಚ್ಚಿಸುವ ಸಾಧ್ಯತೆಯಿದೆ.

ಈ ನಡುವೆ, ಉಕ್ರೇನ್‌ಗೆ ಅಮೆರಿಕದ ದೇಣಿಗೆಗಳೇನು ಎನ್ನುವುದನ್ನು ಈ ಒಪ್ಪಂದದಲ್ಲಿ ಸ್ಪಷ್ಟವಾಗಿ ನಮೂದಿಸಲಾಗಿಲ್ಲ. ಉಕ್ರೇನ್ ಈಗಾಗಲೇ ಅಮೆರಿಕಕ್ಕೆ ಋಣಿಯಾಗಿದೆ ಎಂಬುದಾಗಿ ಒಪ್ಪಂದದ ಪೀಠಿಕೆಯೇ ಸ್ಪಷ್ಟವಾಗಿ ಹೇಳುತ್ತದೆ. ‘‘2022 ಫೆಬ್ರವರಿಯಲ್ಲಿ ರಶ್ಯವು ಉಕ್ರೇನ್ ಮೇಲೆ ಪೂರ್ಣ ಪ್ರಮಾಣದ ಯುದ್ಧವನ್ನು ಘೋಷಿಸಿದಂದಿನಿಂದ ಅಮೆರಿಕವು ಉಕ್ರೇನ್‌ಗೆ ಗಣನೀಯ ಪ್ರಮಾಣದದಲ್ಲಿ ಆರ್ಥಿಕ ಮತ್ತು ಸರಕು ರೂಪದ ನೆರವನ್ನು ನೀಡಿದೆ’’ ಎಂಬುದಾಗಿ ಪೀಠಕೆಯ ಮೊದಲ ಪ್ಯಾರಾಗ್ರಾಫ್‌ನಲ್ಲೇ ಬರೆಯಲಾಗಿದೆ.

ಅಮೆರಿಕವು 350 ಬಿಲಿಯ ಡಾಲರ್ (ಸುಮಾರು 30.61 ಲಕ್ಷ ಕೋಟಿ ರೂಪಾಯಿ) ನೆರವನ್ನು ಉಕ್ರೇನ್‌ಗೆ ನೀಡಿದೆ ಎಂಬುದಾಗಿ ಟ್ರಂಪ್ ಹೇಳುತ್ತಾರೆ. ಆದರೆ, ಉಕ್ರೇನ್‌ಗೆ ಹರಿದು ಬಂದಿರುವ ವಿದೇಶಿ ನೆರವಿನ ಲೆಕ್ಕ ಇಟ್ಟಿರುವ ಕೀಲ್ ಇನ್‌ಸ್ಟಿಟ್ಯೂಟ್ ಫಾರ್ ದ ವರ್ಲ್ಡ್ ಎಕಾನಮಿಯ ಪ್ರಕಾರ, ಈ ಮೊತ್ತ ಟ್ರಂಪ್ ಹೇಳುವ ಮೊತ್ತದ ಅರ್ಧದಷ್ಟು.

ಉಕ್ರೇನ್‌ನಲ್ಲಿ ಈಗ ಭಾವಿಸಿರುವುದಕ್ಕಿಂತ ಕಡಿಮೆ ಪ್ರಮಾಣದ ಖನಿಜ ಮತ್ತು ಅಪರೂಪದ ಖನಿಜಗಳ ನಿಕ್ಷೇಪ ಇರಬಹುದು ಎಂಬುದಾಗಿ ಪಾಶ್ಚಾತ್ಯ ಮತ್ತು ಉಕ್ರೇನ್ ಪರಿಣತರು ಹೇಳುತ್ತಾರೆ.

ಒಪ್ಪಂದದ ಹಾಲಿ ಕರಡು, ಮಾಲೀಕತ್ವ, ನಿರ್ವಹಣೆ ಮತ್ತು ಕಾರ್ಯನಿರ್ವಹಣೆ ಮುಂತಾದ ವಿಷಯಗಳನ್ನು ಮುಂದಕ್ಕೆ ಅಂತಿಮಗೊಳಿಸಲಾಗುವುದು ಎಂಬುದಾಗಿ ಹೇಳುವುದರಿಂದ, ಟ್ರಂಪ್‌ರ ಅತಿ ದೊಡ್ಡ ಒಪ್ಪಂದವು ಈಗ ಮೊದಲ ಹೆಜ್ಜೆಯಷ್ಟೇ ಆಗಿದೆ. ಮುಂದೆ ಹಲವು ಸುತ್ತುಗಳ ಮಾತುಕತೆ ನಡೆಯುವ ನಿರೀಕ್ಷೆಯಿದೆ.

ಉಕ್ರೇನ್ ದೃಷ್ಟಿಯಿಂದ ಹೇಳುವುದಾದರೆ, ಇದು ಅದರ ದೌರ್ಬಲ್ಯಕ್ಕಿಂತಲೂ ಹೆಚ್ಚಾಗಿ ಶಕ್ತಿಯಾಗಿದೆ. ಮುಂದಿನ ಮಾತುಕತೆಗಳ ವೇಳೆ, ಹೆಚ್ಚು ತೃಪ್ತಿದಾಯಕ ಶರತ್ತುಗಳನ್ನು ಗಳಿಸುವ ಅವಕಾಶಗಳನ್ನು ಇದು ಉಕ್ರೇನ್‌ಗೆ ಒದಗಿಸುತ್ತದೆ. ಮುಂದಿನ ದಿನಗಳಲ್ಲಿ ಹೆಚ್ಚೇನೂ ಪ್ರಗತಿ ಕಾಣದಿದ್ದರೂ, ಅದು ಅಮೆರಿಕವನ್ನು ಈ ಪ್ರಕ್ರಿಯೆಗೆ ಬದ್ಧಗೊಳಿಸುತ್ತದೆ. ಹಾಗೂ ಇದು ಉಕ್ರೇನ್ ಹಿತಾಸಕ್ತಿಗಳಿಗೆ ಪೂರಕವಾಗಿಯೇ ಇದೆ.

ಭದ್ರತಾ ಖಾತರಿಗಳ ಉದಾಹರಣೆಯನ್ನೇ ತೆಗೆದುಕೊಳ್ಳೋಣ. ಕರಡು ಒಪ್ಪಂದದಲ್ಲಿ ಉಕ್ರೇನ್‌ಗೆ ನೇಟೋ ಸದಸ್ಯತ್ವದ ಪ್ರಸ್ತಾವವೇ ಇಲ್ಲ. ಆದರೆ, ‘‘ಶಾಶ್ವತ ಶಾಂತಿಯನ್ನು ಸ್ಥಾಪಿಸಲು ಅಗತ್ಯವಾದ ಭದ್ರತಾ ಖಾತರಿಗಳನ್ನು ಪಡೆಯುವ ಉಕ್ರೇನ್‌ನ ಪ್ರಯತ್ನಗಳನ್ನು ಅಮೆರಿಕ ಬೆಂಬಲಿಸುತ್ತದೆ’’ ಎಂದಷ್ಟೇ ಅದು ಹೇಳುತ್ತದೆ.

ಆದರೆ, ಈ ಮಾತನ್ನು ಅತಿಯಾಗಿ ಹಿಗ್ಗಿಸುವಂತಿಲ್ಲ. ಆದಾಗ್ಯೂ, ಇದನ್ನೊಂದು ಭದ್ರತಾ ಖಾತರಿಗಳಿಲ್ಲದ ಅಮೆರಿಕದ ವಾಗ್ದಾನ ಎಂಬುದಾಗಿ ಪರಿಗಣಿಸಲು ಸಮಸ್ಯೆಯಿಲ್ಲ. ಯಾಕೆಂದರೆ, ಉಕ್ರೇನ್ ಸ್ವತಂತ್ರ ದೇಶವಾಗಿ ಇರುವುದು ಅಮೆರಿಕದ ಹಿತಾಸಕ್ತಿಗೆ ಪೂರಕವಾಗಿದೆ ಎಂಬ ಇಂಗಿತವೂ ಅದರಲ್ಲಿ ಇದೆ.

ಅದೇ ವೇಳೆ, ಅದು ರಶ್ಯ, ಯುರೋಪ್ ಮತ್ತು ಉಕ್ರೇನ್‌ಗೆ ಎಚ್ಚರಿಕೆಯೂ ಆಗಿದೆ.

‘‘ಏನೇ ಆದರೂ’’ ಅಮೆರಿಕವು ಉಕ್ರೇನ್‌ಗೆ ಭದ್ರತಾ ಖಾತರಿಗಳನ್ನು ನೀಡುವುದು ಎಂಬುದಾಗಿ ಟ್ರಂಪ್ ಹೇಳುವುದಿಲ್ಲ. ಈ ಖಾತರಿಗಳನ್ನು ಯುರೋಪಿಯನ್ ಸೇನೆಯು ನೀಡಬಹುದು ಎಂಬ ಯೋಚನೆಯನ್ನು ಟ್ರಂಪ್ ಹೊಂದಿದಂತೆ ಕಂಡುಬರುತ್ತದೆ.

ಆದರೆ, ಇದನ್ನು (ಭದ್ರತಾ ಖಾತರಿ) ಟ್ರಂಪ್ ಸಾರಾಸಗಟು ತಳ್ಳಿಹಾಕುತ್ತಾರೆ ಎಂದು ಹೇಳುವಂತೆಯೂ ಇಲ್ಲ. ಒಮ್ಮೆ ಉಕ್ರೇನ್‌ನಲ್ಲಿ ಅಮೆರಿಕದ ಬದ್ಧತೆ ಕಡಿಮೆಯಾದಾಗ ಅದನ್ನು ಟ್ರಂಪ್ ತನ್ನ ಲಾಭಕ್ಕಾಗಿ ಬಳಸಬಹುದು.

ಅಂದರೆ, ಒಪ್ಪಂದದಲ್ಲಿ ಪ್ರಸ್ತಾಪಿಸಲಾಗಿರುವ ಪುನರ್ನಿರ್ಮಾಣ ಹೂಡಿಕೆ ನಿಧಿಯಿಂದ ಅಮೆರಿಕಕ್ಕೆ ಗರಿಷ್ಠ ಲಾಭ ಬರುವಂಥ ಶರತ್ತುಗಳನ್ನು ಸೇರಿಸುವುದಕ್ಕಾಗಿ ಉಕ್ರೇನ್ ಮೇಲೆ ಒತ್ತಡ ಹೇರಲು ಅವರು ಇದನ್ನು (ಭದ್ರತಾ ಖಾತರಿ) ಬಳಸಬಹುದು. ಅದೂ ಅಲ್ಲದೆ, ನೇಟೋ ನಿಧಿಗೆ ಹೆಚ್ಚಿನ ದೇಣಿಗೆ ನೀಡುವಂತೆ ಯುರೋಪ್ ದೇಶಗಳ ಮೇಲೆ ಒತ್ತಡ ಹೇರುವುದಕ್ಕಾಗಿಯೂ ಅವರು ಈ ವಿಷಯವನ್ನು ಬಳಸಿಕೊಳ್ಳಬಹುದು.

ಅದೇ ವೇಳೆ, ಈ ಒಪ್ಪಂದದ ಮೂಲಕ ಅವರು ರಶ್ಯಕ್ಕೂ ಸಂದೇಶವೊಂದನ್ನು ನೀಡಬಹುದಾಗಿದೆ. ‘‘ಉಕ್ರೇನ್‌ನಲ್ಲಿ ಅಮೆರಿಕದ ಆರ್ಥಿಕ ಹಿತಾಸಕ್ತಿಯಿದೆ ಮತ್ತು ವಾಣಿಜ್ಯ ಉಪಸ್ಥಿತಿಯಿದೆ. ಹಾಗಾಗಿ, ಭವಿಷ್ಯದ ಶಾಂತಿ ಒಪ್ಪಂದದಿಂದ ರಶ್ಯ ಹಿಂದೆ ಸರಿದು ಯುದ್ಧವನ್ನು ಪುನರಾರಂಭಿಸಿದರೆ ಅಮೆರಿಕ-ಬೆಂಬಲಿತ ಪರಿಣಾಮಗಳನ್ನು ರಶ್ಯ ಎದುರಿಸಬೇಕಾಗಬಹುದು’’ ಎನ್ನುವ ಎಚ್ಚರಿಕೆಯನ್ನು ಅದು ನೀಡಬಹುದಾಗಿದೆ.

ಆದರೆ ಈ ಲೆಕ್ಕಾಚಾರಗಳು ಅಂತಿಮವಾಗಿ, ಒಪ್ಪಂದವು ಪ್ರತಿಪಾದಿಸುವ ‘‘ಸ್ವತಂತ್ರ, ಸಾರ್ವಭೌಮ ಮತ್ತು ಸುಭದ್ರ ಉಕ್ರೇನ್’’ನೊಂದಿಗೆ ಪರಿಸಮಾಪ್ತಿಯಾಗುತ್ತದೆ ಎನ್ನುವ ಖಾತರಿಯೇನೂ ಇಲ್ಲ. ಸದ್ಯಕ್ಕೆ, ಎಲ್ಲಾ ಕೊರತೆಗಳು ಮತ್ತು ಮಹತ್ವದ ವಿಷಯಗಳಲ್ಲಿನ ಅಸ್ಪಷ್ಟತೆಗಳು ಹಾಗೂ ಒಪ್ಪಂದದ ಪಕ್ಷಗಳ ನಡುವಿನ ಸಾರ್ವಜನಿಕ ಜಟಾಪಟಿಯ ಹೊರತಾಗಿಯೂ, ಒಪ್ಪಂದವು ತನ್ನ ಘೋಷಿತ ದಿಕ್ಕಿನಲ್ಲಿ ಮುಂದುವರಿದರೆ ಎಲ್ಲಾ ಪಕ್ಷಗಳ ಹಿತಾಸಕ್ತಿಗಳನ್ನು ರಕ್ಷಿಸುವಂತೆ ಕಾಣುತ್ತದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News