ಶಾಲೆಗಳಲ್ಲಿ ಪೂರೈಸಲಾಗುವ ಆಹಾರ, ಪಾನೀಯಗಳ ಮೇಲೆ ಶೇ. 60ರಷ್ಟು ದೇಶಗಳು ಮಾತ್ರ ನಿಗಾ ವಹಿಸುತ್ತವೆ: UNESCO ವರದಿ
Photo: PTI
ಹೊಸದಿಲ್ಲಿ: ಶಾಲೆಗಳಲ್ಲಿ ಪೂರೈಸಲಾಗುವ ಆಹಾರ ಮತ್ತು ಪಾನೀಯಗಳ ಮೇಲೆ ನಿಗಾವಣೆ ವಹಿಸಲು ಕೇವಲ ಶೇ. 60ರಷ್ಟು ದೇಶಗಳು ಮಾತ್ರ ಶಾಸನಗಳು ಹಾಗೂ ಮಾನದಂಡಗಳನ್ನು ಹೊಂದಿವೆ ಎಂದು UNESCO ಜಾಗತಿಕ ಶಿಕ್ಷಣ ನಿಗಾವಣೆ ವರದಿಯಲ್ಲಿ ಹೇಳಲಾಗಿದೆ.
ಶಾಲಾ ಊಟ ಸಹಯೋಗ ಸಂಶೋಧನೆಯ ಭಾಗವಾಗಿರುವ ಲಂಡನ್ ಸ್ಕೂಲ್ ಆಫ್ ಹೈಜೀನ್ ಆ್ಯಂಡ್ ಟ್ರಾಪಿಕಲ್ ಮೆಡಿಸಿನ್ ಸಂಶೋಧನಾ ಸಮೂಹದೊಂದಿಗಿನ ಸಹಭಾಗಿತ್ವದಲ್ಲಿ ಈ ವರದಿಯನ್ನು ಪ್ರಕಟಿಸಲಾಗಿದೆ.
“187 ದೇಶಗಳ ಪೈಕಿ ಕೇವಲ 93 ದೇಶಗಳು ಮಾತ್ರ ಶಾಲೆಯಲ್ಲಿ ಪೂರೈಸಲಾಗುವ ಆಹಾರ ಮತ್ತು ಪಾನೀಯಗಳ ಮೇಲೆ ಶಾಸನ, ಕಡ್ಡಾಯ ಮಾನದಂಡಗಳು ಅಥವಾ ಮಾರ್ಗಸೂಚಿಗಳನ್ನು ಹೊಂದಿವೆ. ಆದರೆ, ಈ 93 ದೇಶಗಳ ಪೈಕಿ ಶೇ. 29ರಷ್ಟು ದೇಶಗಳು ಮಾತ್ರ ಶಾಲೆಗಳಲ್ಲಿ ಆಹಾರ ಮತ್ತು ಪಾನೀಯಗಳನ್ನು ಮಾರುಕಟ್ಟೆ ಮಾಡುವುದರ ವಿರುದ್ಧ ನಿರ್ಬಂಧ ಕ್ರಮಗಳನ್ನು ಹೊಂದಿವೆ ಹಾಗೂ ಶೇ. 60ರಷ್ಟು ದೇಶಗಳು ಮಾತ್ರ ಆಹಾರ ಮತ್ತು ಪಾನೀಯಗಳ ಮೇಲೆ ನಿಗಾವಣೆ ವಹಿಸುವ ಮಾನದಂಡಗಳನ್ನು ಹೊಂದಿವೆ” ಎಂದು ಜಾಗತಿಕ ಶಿಕ್ಷಣ ನಿಗಾವಣೆ (GEM) ವರದಿಯಲ್ಲಿ ಹೇಳಲಾಗಿದೆ.
30 ಕಡಿಮೆ ಆದಾಯ ಅಥವಾ ಮಧ್ಯಮ ಗಾತ್ರದ ಆದಾಯ ಹೊಂದಿರುವ ದೇಶಗಳಲ್ಲಿ ನಡೆಸಲಾಗಿರುವ ಶಾಲಾಧಾರಿತ ಆಹಾರ ಮತ್ತು ಪೌಷ್ಟಿಕತೆ ಶಿಕ್ಷಣದ ಮೌಲ್ಯಮಾಪನ ಆಧಾರಿತ ಸಮೀಕ್ಷೆಯ ಪ್ರಕಾರ, ಶಾಲಾ ವ್ಯವಸ್ಥೆಯೊಳಗಿನ ಏಕೀಕರಣವನ್ನು ಬಹುತೇಕ ಪಠ್ಯೇತರ ಅಥವಾ ಯೋಜನಾಧಾರಿತ ಚಟುವಟಿಕೆಗಳ ಮೂಲಕ ಸಾಧಿಸಲಾಗಿದೆಯೆ ಹೊರತು, ನಿರ್ದಿಷ್ಟ ವಿಷಯ ಅಥವಾ ಪಠ್ಯ ಕ್ರಮವಾಗಿ ಇದನ್ನು ಸೇರ್ಪಡೆ ಮಾಡಲಾಗಿಲ್ಲ ಎಂದು ಜಾಗತಿಕ ಶಿಕ್ಷಣ ನಿಗಾವಣೆ ತಂಡ ಹೇಳಿದೆ.
“28 ದೇಶಗಳ ಪೈಕಿ ಕೇವಲ ಮೂರು ದೇಶಗಳಲ್ಲಿ ಮಾತ್ರ ನಿಯಮಿತವಾಗಿ ಮೌಲ್ಯಮಾಪನವನ್ನು ನಡೆಸಲಾಗುತ್ತಿದೆ ಹಾಗೂ ಬಳಸಲಾಗುತ್ತಿದೆ. ಈ ಮೌಲ್ಯಮಾಪನ ವರದಿಯು ಆಹಾರ ಮತ್ತು ಪೌಷ್ಟಿಕತೆಯ ಕುರಿತ ಗ್ರಹಿಕೆ, ಜ್ಞಾನ, ಆಹಾರಾಭ್ಯಾಸ, ಪೌಷ್ಟಿಕಾಂಶ ಸ್ಥಿತಿ, ಹವ್ಯಾಸಗಳು ಹಾಗೂ ಆಹಾರ ಪದ್ಧತಿಗಳನ್ನು ಒಳಗೊಂಡಿದೆ” ಎಂದು ವರದಿಯಲ್ಲಿ ಹೇಳಲಾಗಿದೆ.
“ಬಹುತೇಕ ಶಾಲಾ ಊಟ ಯೋಜನೆಗಳು ಪೌಷ್ಟಿಕತೆ, ಆರೋಗ್ಯ ಮತ್ತು ಸಾಮಾಜಿಕ ರಕ್ಷಣೆ ಉದ್ದೇಶಗಳೊಂದಿಗೆ ಶೈಕ್ಷಣಿಕ ಗುರಿಗಳನ್ನು ಹೊಂದಿವೆ. ಆದರೆ, ಕೆಲವು ಕಾರ್ಯಕ್ರಮಗಳು ಮಾತ್ರ ಬೊಜ್ಜು ನಿಯಂತ್ರಣ ಹಾಗೂ ನಿಭಾವಣೆ ಕಡೆಗೆ ಗಮನ ಹರಿಸಿವೆ” ಎಂದು ವರದಿಯಲ್ಲಿ ಹೇಳಲಾಗಿದೆ.
ಶಾಲಾ ಊಟ ಯೋಜನೆಯ ಬಗ್ಗೆ ಗಮನ ಹರಿಸಿರುವ ಮತ್ತೊಂದು ಸಮೀಕ್ಷೆಯ ಪ್ರಕಾರ, ಶೇ. 72ರಷ್ಟು ದೇಶಗಳು ಶಾಲಾ ಮೈದಾನಗಳಲ್ಲಿ ಆಹಾರ ಮಾರಾಟ ಮಾಡುವುದರ ವಿರುದ್ಧ ನಿರ್ಬಂಧಗಳನ್ನು ಹೊಂದಿದ್ದರೆ, ಶೇ. 52ರಷ್ಟು ದೇಶಗಳು ಶಾಲೆಯೊಳಗೆ ಅಥವಾ ಶಾಲೆಯ ಬಳಿಯ ಮೈದಾನಗಳಲ್ಲಿ ಆಹಾರ ಮಾರಾಟ ಅನುಮತಿಗೆ ರಾಷ್ಟ್ರೀಯ ಮಟ್ಟದ ನಿಷೇಧಗಳನ್ನು ಹೊಂದಿವೆ ಎಂದು ವರದಿಯಾಗಿದೆ ಎಂದು ಹೇಳಲಾಗಿದೆ.
“ಅಧಿಕ ಆದಾಯ ಹೊಂದಿರುವ ದೇಶಗಳಲ್ಲಿನ ಆಹಾರ ವ್ಯವಸ್ಥೆ ಪರಿವರ್ತನೆಯೊಂದಿಗೆ ಸಂಬಂಧ ಹೊಂದಿರುವ ಪೌಷ್ಟಿಕತೆ ನೀತಿಯ ಪರಾಮರ್ಶೆಯ ಪ್ರಕಾರ, ಬಹುತೇಕ ನೀತಿ ನಿರೂಪಣೆ ಕ್ರಮಗಳು ಆರೋಗ್ಯಕರ ನಡವಳಿಕೆ ಬದಲಾವಣೆ ಆಯ್ಕೆಯೆಡೆಗೆ ಗಮನ ಹರಿಸಿದ್ದರೆ, ಆಹಾರದ ಲೇಬಲಿಂಗ್, ಉತ್ಪನ್ನದ ಮರು ಸೂತ್ರೀಕರಣ, ಶಾಲೆಗಳಲ್ಲಿ ಆರೋಗ್ಯಕರ ಆಹಾರ ಪೂರೈಸುವುದು ಹಾಗೂ ಆಹಾರ ಜಾಹೀರಾತುಗಳನ್ನು ನಿರ್ಬಂಧಿಸುವುದರತ್ತ ಆಹಾರ ಪರಿಸರ ತಾಣಗಳು ಗಮನ ಹರಿಸಿರುವುದು ಈ ಪರಾಮರ್ಶೆಯ ಫಲಿತಾಂಶದಿಂದ ವ್ಯಕ್ತವಾಗಿದೆ” ಎಂದೂ ಜಾಗತಿಕ ಶಿಕ್ಷಣ ನಿಗಾವಣೆ ವರದಿಯಲ್ಲಿ ಉಲ್ಲೇಖಿಸಲಾಗಿದೆ.
“ಅನಾರೋಗ್ಯಕರ ಆಹಾರ ಅಥವಾ ಪಾನೀಯ ಸೇವನೆಯನ್ನು ತಗ್ಗಿಸುವ ಪ್ರಾಮುಖ್ಯತೆಯಲ್ಲಿ ಕೊರತೆಯಿದೆ. ಆಹಾರ ಪರಿಸರ ಹಾಗೂ ಶಾಸನಾತ್ಮಕ ಅಥವಾ ಶಾಸಕಾಂಗ ಸುಧಾರಣೆಗಳ ಬದಲು ವೈಯಕ್ತಿಕ ಹೊಣೆಗಾರಿಕೆ ಬಗೆಗೆ ಪ್ರಾಮುಖ್ಯತೆ ನೀಡಲಾಗಿದೆ” ಎಂದೂ ವರದಿಯಲ್ಲಿ ಹೇಳಲಾಗಿದೆ.
ಪೌಷ್ಟಿಕತೆ ಶಿಕ್ಷಣ, ದೈಹಿಕ ಚಟುವಟಿಕೆ ಹಾಗೂ ಪಠ್ಯೇತರ ಕ್ರಮಗಳೊಂದಿಗೆ ಶಾಲಾ ಊಟದ ನಿಯಮಗಳನ್ನು ಒಟ್ಟುಗೂಡಿಸುವ ಸಮಗ್ರ ಶಾಲಾ ಅನುಸಂಧಾನಕ್ಕೆ ಈ ವರದಿಯಲ್ಲಿ ಕರೆ ನೀಡಲಾಗಿದೆ. ಆಹಾರ ಸಾಕ್ಷರತೆಯನ್ನು ಔಪಚಾರಿಕ, ಔಪಚಾರಿಕೇತರ ಹಾಗೂ ಅನೌಪಚಾರಿಕ ಕಲಿಕಾ ಅನ್ವೇಷಣೆಯ ಮೂಲಕ ರೂಪಾಂತರಿಸುವ ಪ್ರಯತ್ನ ನಡೆಸಬೇಕು ಎಂದೂ ವರದಿಯಲ್ಲಿ ಸಲಹೆ ನೀಡಲಾಗಿದೆ.
ಆರೋಗ್ಯ, ಪೌಷ್ಟಿಕತೆ, ಕೃಷಿ ಮತ್ತು ಆಹಾರ ವ್ಯವಸ್ಥೆ ಸೇರಿದಂತೆ ವಿವಿಧ ವಲಯಗಳಾದ್ಯಂತ ಶಿಕ್ಷಣ ಮತ್ತು ತರಬೇತಿಯ ಮೂಲಕ ಎಲ್ಲ ಹಂತಗಳಲ್ಲಿ ಸಾಮರ್ಥ್ಯವನ್ನು ರೂಪಿಸಬೇಕಾದ ಅಗತ್ಯವಿದೆ. ಪರಸ್ಪರ ಅವಲಂಬನೆಯ ಹೊರತಾಗಿಯೂ, ದತ್ತಾಂಶ ಸಂಗ್ರಹ ಮತ್ತು ಕಾರ್ಯಕ್ರಮಗಳು ಹಾಗೂ ಫಲಿತಾಂಶಗಳ ನಿಗಾವಣೆ ಒಳಗೊಂಡಂತೆ ಶಿಕ್ಷಣ ಮತ್ತು ಪೌಷ್ಟಿಕತೆ ನಡುವಿನ ಸಂಬಂಧಗಳು ಕನಿಷ್ಠ ಪ್ರಮಾಣದ ಸಂಶೋಧನೆಗೊಳಗಾಗಿವೆ ಎಂದು ವರದಿಯಲ್ಲಿ ಅಭಿಪ್ರಾಯ ಪಡಲಾಗಿದೆ.