×
Ad

ಮುಸ್ಲಿಮರ ವಿರುದ್ಧ ಧಾರ್ಮಿಕ ಅಸಹಿಷ್ಣುತೆಯನ್ನು ಖಂಡಿಸುತ್ತೇವೆ: ವಿಶ್ವಸಂಸ್ಥೆಯಲ್ಲಿ ಭಾರತದ ಹೇಳಿಕೆ

Update: 2025-03-15 20:19 IST

PC : PTI 

ವಿಶ್ವಸಂಸ್ಥೆ: ಧಾರ್ಮಿಕ ತಾರತಮ್ಯವು ಎಲ್ಲ ಧರ್ಮಗಳ ಅನುಯಾಯಿಗಳ ಮೇಲೆ ಪರಿಣಾಮವನ್ನು ಬೀರುವ ವ್ಯಾಪಕ ಸವಾಲಾಗಿದೆ ಎನ್ನುವುದನ್ನು ಗುರುತಿಸುವ ಅಗತ್ಯಕ್ಕೆ ಒತ್ತು ನೀಡಿರುವ ಭಾರತವು,ಮುಸ್ಲಿಮರ ವಿರುದ್ಧ ಧಾರ್ಮಿಕ ಅಸಹಿಷ್ಣುತೆಯ ಘಟನೆಗಳನ್ನು ಖಂಡಿಸುವಲ್ಲಿ ತಾನು ವಿಶ್ವಸಂಸ್ಥೆಯ ಸದಸ್ಯ ರಾಷ್ಟ್ರಗಳೊಂದಿಗೆ ಒಗ್ಗಟ್ಟಾಗಿದ್ದೇನೆ ಎಂದು ಹೇಳಿದೆ.

‘ಭಾರತವು ವಿವಿಧತೆ ಮತ್ತು ಬಹುತ್ವದ ನೆಲೆಯಾಗಿದೆ,ನಾವು ಜಗತ್ತಿನ ಬಹುತೇಕ ಎಲ್ಲ ಪ್ರಮುಖ ಧರ್ಮಗಳ ಅನುಯಾಯಿಗಳಿಗೆ ನೆಲೆಯಾಗಿದ್ದೇವೆ. ಭಾರತವು ನಾಲ್ಕು ವಿಶ್ವಧರ್ಮಗಳಾದ ಹಿಂದು,ಬೌದ್ಧ,ಜೈನ ಮತ್ತು ಸಿಖ್ ಧರ್ಮಗಳ ಜನ್ಮಸ್ಥಾನವಾಗಿದೆ. ಭಾರತದಲ್ಲಿ 20 ಕೋ.ಗೂ ಅಧಿಕ ಪ್ರಜೆಗಳು ಇಸ್ಲಾಮ್ ಧರ್ಮವನ್ನು ಆಚರಿಸುತ್ತಿರುವುದರೊಂದಿಗೆ ಅದು ವಿಶ್ವದಲ್ಲಿ ಅತ್ಯಂತ ಹೆಚ್ಚು ಮುಸ್ಲಿಮ್ ಜನಸಂಖ್ಯೆಯನ್ನು ಹೊಂದಿರುವ ದೇಶಗಳಲ್ಲೊಂದಾಗಿದೆ’ ಎಂದು ವಿಶ್ವಸಂಸ್ಥೆಯಲ್ಲಿ ಭಾರತದ ಕಾಯಂ ಪ್ರತಿನಿಧಿಯಾಗಿರುವ ರಾಯಭಾರಿ ಪಿ.ಹರೀಶ ಶುಕ್ರವಾರ ಹೇಳಿದರು.

ಇಸ್ಲಾಮೋಫೋಬಿಯಾ ವಿರುದ್ಧ ಅಂತರರಾಷ್ಟ್ರೀಯ ದಿನಾಚರಣೆ ಅಂಗವಾಗಿ ವಿಶ್ವಸಂಸ್ಥೆಯ ಸಾಮಾನ್ಯ ಅಧಿವೇಶನದಲ್ಲಿ ಸರ್ವ ಸದಸ್ಯರ ವಿಧ್ಯುಕ್ತ ಸಭೆಯನ್ನುದ್ದೇಶಿಸಿ ಮಾತನಾಡುತ್ತಿದ್ದ ಅವರು,ಧಾರ್ಮಿಕ ತಾರತಮ್ಯ,ದ್ವೇಷ ಮತ್ತು ಹಿಂಸಾಚಾರದಿಂದ ಮುಕ್ತವಾದ ಜಗತ್ತನ್ನು ಬೆಳೆಸುವುದು ಅನಾದಿಕಾಲದಿಂದಲೂ ಭಾರತದ ಜೀವನ ವಿಧಾನವಾಗಿದೆ ಎಂದರು.

‘ಮುಸ್ಲಿಮರ ವಿರುದ್ಧ ಧಾರ್ಮಿಕ ಅಸಹಿಷ್ಣುತೆಯ ಘಟನೆಗಳನ್ನು ಖಂಡಿಸುವಲ್ಲಿ ನಾವು ವಿಶ್ವಸಂಸ್ಥೆಯ ಸದಸ್ಯ ರಾಷ್ಟ್ರಗಳೊಂದಿಗೆ ಒಗ್ಗಟ್ಟಾಗಿದ್ದೇವೆ. ಆದರೂ ಧಾರ್ಮಿಕ ತಾರತಮ್ಯವು ಎಲ್ಲ ಧರ್ಮಗಳ ಅನುಯಾಯಿಗಳ ಮೇಲೆ ಪರಿಣಾಮವನ್ನು ಬೀರುವ ವ್ಯಾಪಕ ಸವಾಲಾಗಿದೆ ಎಂದು ಗುರುತಿಸುವುದೂ ಕಡ್ಡಾಯವಾಗಿದೆ ’ಎಂದು ಅವರು ಹೇಳಿದರು.

‘ವಿವಿಧ ರೂಪಗಳಲ್ಲಿ ಧಾರ್ಮಿಕ-ಭೀತಿಯು ನಮ್ಮ ವೈವಿಧ್ಯಮಯ,ಜಾಗತಿಕ ಸಮಾಜದ ಸ್ವರೂಪಕ್ಕೆ ಬೆದರಿಕೆಯಾಗಿದೆ ಎಂದು ಒಪ್ಪಿಕೊಳ್ಳುವುದು ಅರ್ಥಪೂರ್ಣ ಪ್ರಗತಿಯ ಮಾರ್ಗವಾಗಿದೆ ಎನ್ನುವುದರಲ್ಲಿ ನಾವು ಬಲವಾದ ನಂಬಿಕೆಯನ್ನು ಹೊಂದಿದ್ದೇವೆ ’ಎಂದು ಅವರು ಹೇಳಿದರು.

ಹರೀಶ ಪವಿತ್ರ ರಮಝಾನ್ ಮಾಸ ಮತ್ತು ಹೋಳಿ ಶುಭಾಶಯಗಳನ್ನು ಕೋರುವ ಮೂಲಕ ತನ್ನ ಮಾತುಗಳನ್ನು ಆರಂಭಿಸಿದ್ದರು.

ಪೂಜಾಸ್ಥಳಗಳು ಮತ್ತು ಧಾರ್ಮಿಕ ಸಮುದಾಯಗಳನ್ನು ಗುರಿಯಾಗಿಸಿಕೊಂಡು ಆತಂಕಕಾರಿಯಾಗಿ ಹೆಚ್ಚುತ್ತಿರುವ ಹಿಂಸಾಚಾರದ ಬಗ್ಗೆ ಭಾರತ ಕಳವಳಗಳನ್ನು ವ್ಯಕ್ತಪಡಿಸಿದ ಅವರು,‘ಎಲ್ಲ ಸದಸ್ಯ ರಾಷ್ಟ್ರಗಳಿಂದ ಎಲ್ಲ ಧರ್ಮಗಳಿಗೆ ಸಮಾನ ಗೌರವದ ತತ್ವಕ್ಕೆ ನಿರಂತರ ಬದ್ಧತೆ ಮತ್ತು ದೃಢವಾದ ಕ್ರಮದ ಮೂಲಕ ಮಾತ್ರ ಇದನ್ನು ಎದುರಿಸಬಹುದು. ಎಲ್ಲ ದೇಶಗಳು ತಮ್ಮೆಲ್ಲ ಪ್ರಜೆಗಳನ್ನು ಸಮಾನವಾಗಿ ನಡೆಸಿಕೊಳ್ಳಲು ಬದ್ಧವಾಗಿರಬೇಕು ಮತ್ತು ಧಾರ್ಮಿಕ ತಾರತಮ್ಯವನ್ನು ಉತ್ತೇಜಿಸುವ ನೀತಿಗಳನ್ನು ಅನುಸರಿಸಬಾರದು. ನಮ್ಮ ಶಿಕ್ಷಣ ವ್ಯವಸ್ಥೆಯು ದ್ವೇಷನೀತಿಗಳನ್ನು ಶಾಶ್ವತಗೊಳಿಸುವುದಿಲ್ಲ ಅಥವಾ ಧರ್ಮಾಂಧತೆಯನ್ನು ಪ್ರೋತ್ಸಾಹಿಸುವುದಿಲ್ಲ ಎನ್ನುವುದನ್ನೂ ನಾವು ಖಚಿತಪಡಿಸಿಕೊಳ್ಳಬೇಕು’ ಎಂದು ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News