ಏಜೆಂಟ್ ಗಳು ನಮ್ಮನ್ನು ವಂಚಿಸಿದರು: ಅಮೆರಿಕದಿಂದ ಗಡೀಪಾರಾದ ವಲಸಿಗರ ಅಳಲು
PC : PTI
ದಿನಗಟ್ಟಲೆ ಹಸಿದುಕೊಂಡು ಅಮೆರಿಕ ಗಡಿಯನ್ನು ತಲುಪಿದ್ದ ವಲಸಿಗರು
ಕುರುಕ್ಷೇತ್ರ/ಹೋಷಿಯಾರ್ ಪುರ್: “ಒಂದು ತಿಂಗಳೊಳಗಾಗಿ ನಾನು ಅಮೆರಿಕ ತಲುಪಲಿದ್ದೇನೆ ಎಂದು ನನಗೆ ಆಶ್ವಾಸನೆ ನೀಡಲಾಗಿತ್ತು. ಆದರದು ಸುಳ್ಳಾಯಿತು” ಎನ್ನುತ್ತಾರೆ 43 ವರ್ಷದ ರಾಬಿನ್ ಹಂಡ. ವಿದೇಶಿ ನೆಲದಲ್ಲಿ ಉತ್ತಮ ಬದುಕು ಕಟ್ಟಿಕೊಳ್ಳಲು ಬಯಸಿದ್ದ ರಾಬಿನ್ ಹಂಡಾರ ಕುಟುಂಬವು, ಪ್ರವಾಸಿ ಏಜೆಂಟ್ ಗಳಿಗೆ 43 ಲಕ್ಷ ರೂ. ಪಾವತಿಸಿತ್ತು ಎನ್ನಲಾಗಿದೆ.
ಇದಾದ ಮುಂದಿನ ಆರು ತಿಂಗಳ ನಂತರ, ಹರ್ಯಾಣದ ಕುರುಕ್ಷೇತ್ರ ಜಿಲ್ಲೆಯ ಇಸ್ಮಾಯಿಲಾಬಾದ್ ನ 27 ವರ್ಷದ ಕಂಪ್ಯೂಟರ್ ಇಂಜಿನಿಯರ್ ಒಬ್ಬರು ವಿವಿಧ ದೇಶಗಳನ್ನು ಸುತ್ತಿ, ಸಮುದ್ರವೊಂದನ್ನು ದಾಟಿ ಹಾಗೂ ಕೆಲವೊಮ್ಮೆ ದಿನಗಟ್ಟಲೆ ಹಸಿದುಕೊಂಡು ಅಮೆರಿಕ ಗಡಿಯನ್ನು ತಲುಪಿದ್ದರು. ಆದರೆ, ಗಡಿ ಗಸ್ತು ಪಡೆಯು ಅವರನ್ನು ಬಂಧಿಸಿತ್ತು.
ಬುಧವಾರ ಅಮೆರಿಕ ಪ್ರಾಧಿಕಾರಗಳು ಗಡೀಪಾರು ಮಾಡಿದ ಹರ್ಯಾಣದ 33 ಮಂದಿ ಹಾಗೂ ಪಂಜಾಬ್ ನ 30 ಮಂದಿ ಸೇರಿದಂತೆ 104 ಅಕ್ರಮ ಭಾರತೀಯ ವಲಸಿಗರ ಪೈಕಿ ಹಂಡಾ ಕೂಡಾ ಸೇರಿದ್ದಾರೆ.
ಅಮೆರಿಕದಿಂದ ಗಡೀಪಾರಿಗೊಳಗಾದ ಭಾರತೀಯರು ತವರಿಗೆ ಮರಳಿದಾಗಿನಿಂದ, ಹೇಗೆ ನಿರ್ಲಜ್ಜ ಏಜೆಂಟ್ ಗಳು ತಮ್ಮನ್ನು ವಂಚಿಸಿದರು ಎಂಬ ಕತೆಗಳನ್ನು ಹಲವಾರು ಮಂದಿ ಹಂಚಿಕೊಳ್ಳುತ್ತಿದ್ದಾರೆ.
ಗಡೀಪಾರಿಗೊಳಗಾಗಿರುವ ಹರ್ಯಾಣದ 33 ಮಂದಿಯ ಪೈಕಿ, 14 ಮಂದಿ ಕುರುಕ್ಷೇತ್ರ ಜಿಲ್ಲೆಗೆ ಸೇರಿದ್ದಾರೆ. ಮೂಲಗಳ ಪ್ರಕಾರ, ಮಾಧ್ಯಮಗಳಿಂದ ತಪ್ಪಿಸಿಕೊಳ್ಳಯಲು ಈ 14 ಮಂದಿಯ ಪೈಕಿ ಹಲವರು ತಮ್ಮ ಸಂಬಂಧಿಕರೊಂದಿಗೆ ಉಳಿದುಕೊಂಡಿದ್ದಾರೆ ಎನ್ನಲಾಗಿದೆ.
ವಲಸಿಗರು ಅಮೆರಿಕ ತಲುಪಲು ಬಳಸುವ ಅಕ್ರಮ ಹಾಗೂ ಅಪಾಯಕಾರಿ ಮಾರ್ಗದ ಮೂಲಕ ಯುವಕರನ್ನು ಅಮೆರಿಕಕ್ಕೆ ರವಾನಿಸುತ್ತಿರುವ ಏಜೆಂಟ್ ಗಳ ಕುರಿತು ಮಾಹಿತಿಯನ್ನು ಕಲೆ ಹಾಕಲು ಪ್ರಯತ್ನಿಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇಂತಹ ಏಜೆಂಟ್ ಗಳ ಬಗ್ಗೆ ಮಾಹಿತಿ ಪಡೆಯಲು ಗಡೀಪಾರಿಗೊಳಗಾಗಿರುವ 14 ಯುವಕರ ಪೈಕಿ 10 ಯುವಕರು ಹಾಗೂ ಅವರ ಕುಟುಂಬದ ಸದಸ್ಯರನ್ನು ಪೊಲೀಸರು ಸಂಪರ್ಕಿಸಿದ್ದಾರೆ ಎಂದು ಕುರುಕ್ಷೇತ್ರ ಪೊಲೀಸ್ ವರಿಷ್ಠಾಧಿಕಾರಿ ವರುಣ್ ಸಿಂಗ್ಲಾ ಹೇಳಿದ್ದಾರೆ.
ಗಡೀಪಾರಿಗೊಳಗಾಗಿರುವ ನಾಲ್ಕು ವಲಸಿಗರ ಕುಟುಂಬಗಳು ಗೋಪ್ಯ ಸ್ಥಳಗಳಿಗೆ ತೆರಳಿವೆ ಎಂದು ಅವರು ತಿಳಿಸಿದ್ದಾರೆ. ಆದರೆ, ಪೊಲೀಸರೊಂದಿಗೆ ಮಾತನಾಡಿರುವ ಯಾವ ಕುಟುಂಬಗಳೂ ಯಾವುದೇ ಏಜೆಂಟ್ ಗಳ ವಿರುದ್ಧ ದೂರು ದಾಖಲಿಸಿಲ್ಲ. ನಾವು ಈ ಕುರಿತು ಯೋಚಿಸುತ್ತೇವೆ ಎಂದು ಅವು ಹೇಳಿವೆ. ದೂರುಗಳನ್ನು ಸ್ವೀಕರಿಸಿದ ನಂತರವಷ್ಟೆ ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗುವುದು ಎಂದು ಸಿಂಗ್ಲಾ ಹೇಳಿದ್ದಾರೆ.
ಅಮೆರಿಕ ಮೂಲದ ಸಹೋದರನೊಟ್ಟಿಗೆ ಇರಲು ಬಯಸಿದ್ದ ಪಂಜಾಬ್ ನ ಭತೇರಿ ಗ್ರಾಮದ ಜಗ್ತರ್ ಸಿಂಗ್ ಕೂಡಾ ನನಗೆ ಪ್ರವಾಸಿ ಏಜೆಂಟ್ ಗಳು ವಂಚಿಸಿದ್ದಾರೆ ಎಂದು ಆರೋಪಿಸಿದ್ದಾರೆ.
“ಜನವರಿ 11ರಂದು ನಾನು ದಿಲ್ಲಿಯಿಂದ ಮಾಲ್ಟಾಗೆ ತೆರಳುವ ವಿಮಾನವನ್ನೇರಿದೆ. ನಂತರ ನನ್ನನ್ನು ಅಕ್ರಮ ಮಾರ್ಗದ ಮೂಲಕ ಸ್ಪೇನ್ ಹಾಗೂ ಮೆಕ್ಸಿಕೊಗೆ ಕರೆದೊಯ್ಯಲಾಯಿತು. ನಾನು ಜನವರಿ 24ರಂದು ಅಮೆರಿಕವನ್ನು ಪ್ರವೇಶಿಸಿದೆ ಹಾಗೂ ಗಡಿ ಗಸ್ತು ಪಡೆಯವರು ನನ್ನನ್ನು ಸೆರೆ ಹಿಡಿದರು” ಎಂದು ಅವರು ಅಳಲು ತೋಡಿಕೊಂಡಿದ್ದಾರೆ.
ಗಡೀಪಾರು ಮಾಡುವುದಕ್ಕೂ ಮುನ್ನ, ನನ್ನನ್ನು 11 ದಿನಗಳ ಕಾಲ ಕಾರಾಗೃಹದಲ್ಲಿರಿಸಲಾಗಿತ್ತು ಎಂದು ಅವರು ಹೇಳಿದ್ದಾರೆ.
“ಉತ್ತಮ ಬದುಕು ಕಟ್ಟಿಕೊಳ್ಳಬೇಕು ಎಂಬ ನನ್ನ ಕನಸು ಛಿದ್ರವಾಗಿ ಹೋಯಿತು ಹಾಗೂ ನನ್ನ ಬದುಕು ಹಾಳಾಯಿತು” ಎಂದು ತಮ್ಮ ಪತ್ನಿ, ಇಬ್ಬರು ಪುತ್ರಿಯರು ಹಾಗೂ ತಾಯಿಯೊಂದಿಗೆ ವಾಸಿಸುತ್ತಿರುವ ಅವರು ಗದ್ಗದಿತರಾಗುತ್ತಾರೆ.
ಅಮೆರಿಕಕ್ಕೆ ಸುಗಮ ಪ್ರವೇಶ ದೊರಕಿಸಿಕೊಡಲಾಗುವುದು ಎಂದು ಆಶ್ವಾಸನೆ ನೀಡಿದ್ದ ಪ್ರವಾಸಿ ಏಜೆಂಟ್ ಗೆ ನಾನು 42 ಲಕ್ಷ ರೂ. ಪಾವತಿಸಿದ್ದೆ ಎಂದು ಪಂಜಾಬ್ ನ ಹೋಷಿಯಾರ್ ಪುರ್ ಜಿಲ್ಲೆಯ ಹರ್ವಿಂದರ್ ಸಿಂಗ್ ಹೇಳುತ್ತಾರೆ. ಆದರೆ, ಅವರ ಪ್ರಯಾಣವು ಸುಗಮವಾಗುವ ಬದಲು ಕಗ್ಗಂಟಾಯಿತು ಎಂದು ಅವರು ಬೇಸರ ವ್ಯಕ್ತಪಡಿಸುತ್ತಾರೆ.
“ನನ್ನನ್ನು ಬ್ರೆಝಿಲ್ ಗೆ ಕರೆದೊಯ್ಯಲಾಯಿತು. ಅಲ್ಲಿಂದ ಬಲವಂತವಾಗಿ ಈಕ್ವೆಡಾರ್, ಕೊಲಂಬಿಯಾ ಹಾಗೂ ಪನಾಮ ಮೂಲಕ ನನ್ನನ್ನು ರಸ್ತೆ ಮಾರ್ಗವಾಗಿ ಕರೆದೊಯ್ಯಲಾಯಿತು. ಇದಕ್ಕೂ ಮುಂಚೆ ಭಾರತದಲ್ಲಿನ ಪ್ರವಾಸಿ ಏಜೆಂಟ್ ಗೆ ಅರ್ಧದಷ್ಟು ಹಣವನ್ನು ಮಾತ್ರ ಪಾವತಿ ಮಾಡಿದ್ದ ನನಗೆ ಅಲ್ಲಿ ಉಳಿದ ಹಣವನ್ನು ಬಲವಂತವಾಗಿ ಪಾವತಿ ಮಾಡುವಂತೆ ಮಾಡಲಾಯಿತು” ಎಂದು ಅವರು ಸ್ಮರಿಸುತ್ತಾರೆ.
ಪನಾಮದಿಂದ ನಾನು ಹಾಗೂ ಮತ್ತಿತರರು ಅಪಾಯಕಾರಿ ಅಕ್ರಮ ಮಾರ್ಗದ ಮೂಲಕ ಅಮೆರಿಕವನ್ನು ಪ್ರವೇಶಿಸಲು ಅಪಾಯಕಾರಿ ಪ್ರಯಾಣ ಬೆಳೆಸುವಂತೆ ಮಾಡಲಾಯಿತು. ನಂತರ, ನಾವೆಲ್ಲ ಅಲ್ಲಿ ಬಂಧನಕ್ಕೊಳಗಾದೆವು ಎಂದು ಅವರು ಹೇಳುತ್ತಾರೆ.
ಯಾವುದೇ ದಾಖಲೆಯಿಲ್ಲದೆ ಅಮೆರಿಕವನ್ನು ಪ್ರವೇಶಿಸಲು ನಾವು 40ರಿಂದ 50 ಲಕ್ಷ ರೂ.ವರೆಗೆ ಪ್ರವಾಸಿ ಏಜೆಂಟ್ ಗಳಿಗೆ ಪಾವತಿಸಿದ್ದೆವು ಎಂದು ಗಡೀಪಾರಿಗೊಳಗಾಗಿರುವ ಪಂಜಾಬ್ ಹಾಗೂ ಹರ್ಯಾಣದ ಬಹುತೇಕರು ಆರೋಪಿಸಿದ್ದಾರೆ.
ಕಾನೂನು ಬಾಹಿರ ಪ್ರವಾಸಿ ಏಜೆಂಟ್ ಗಳು ಮೊದಲು ಜನರನ್ನು ಕೆಲವು ಯೂರೋಪ್ ದೇಶಗಳಿಗೆ ಕರೆದೊಯ್ಯುತ್ತಾರೆ. ನಂತರ ಪೆರು, ಪನಾಮ, ಈಕ್ವೆಡಾರ್ ಹಾಗೂ ಗ್ವಾಟೆಮಾಲ ಮೂಲಕ ಅಮೆರಿಕ-ಮೆಕ್ಸಿಕೊ ಗಡಿಗೆ ತಲುಪಿಸುತ್ತಾರೆ ಎಂದು ವಲಸೆ ಸಮಾಲೋಚಕರೊಬ್ಬರು ಹೇಳುತ್ತಾರೆ.
ಈ ಏಜೆಂಟ್ ಗಳು ಪ್ರತಿ ವ್ಯಕ್ತಿಗೆ 30 ಲಕ್ಷ ರೂ. ನಿಂದ 50 ಲಕ್ಷ ರೂ. ವರೆಗೆ ಶುಲ್ಕ ವಿಧಿಸುತ್ತಾರೆ ಎಂದು ಅವರು ಹೇಳುತ್ತಾರೆ.
ತಮ್ಮ ಪ್ರಯಾಣವು ಬೆಟ್ಟಗುಡ್ಡಗಳು, ಅರಣ್ಯಗಳು ಹಾಗೂ ಸಮುದ್ರಗಳನ್ನು ಹಾದು ಹೋಗಬೇಕಾದಂತಹ ಅಪಾಯವನ್ನು ಒಳಗೊಂಡಿದೆ ಎಂದು ಜನರಿಗೆ ತಿಳಿದಿದ್ದರೂ, ಅವರು ಆ ಅಪಾಯಗಳನ್ನು ಆಯ್ಕೆ ಮಾಡಿಕೊಳ್ಳುತ್ತಾರೆ ಎಂದೂ ಅವರು ಹೇಳುತ್ತಾರೆ.
ವಲಸೆ ಸಮಾಲೋಚಕರ ಪ್ರಕಾರ, ಪಂಜಾಬ್ ನ ಮಝಾ ಹಾಗೂ ದೋಬಾ ಪ್ರಾಂತ್ಯಗಳು ಹಾಗೂ ಹರ್ಯಾಣದ ಕುರುಕ್ಷೇತ್ರ, ಕರ್ನಲ್ ಹಾಗೂ ಅಂಬಾಲಾ ಜಿಲ್ಲೆಯಲ್ಲಿ ಅಮೆರಿಕಕ್ಕೆ ವಲಸೆ ಹೋಗುವುದು ಸಾಮಾನ್ಯ ಸಂಗತಿಯಾಗಿದೆ ಎನ್ನುತ್ತಾರೆ