ಉತ್ತರ ಪ್ರದೇಶ: ಮೃತ ನವಜಾತ ಶಿಶುವಿನ ರುಂಡವನ್ನು ಭಕ್ಷಿಸಿದ ಬೀದಿನಾಯಿಗಳು
ಸಾಂದರ್ಭಿಕ ಚಿತ್ರ | PC : PTI
ಲಕ್ನೋ: ಉತ್ತರ ಪ್ರದೇಶದ ಲಲಿತಪುರದಲ್ಲಿ ಮಂಗಳವಾರ ಸರಕಾರಿ ಆಸ್ಪತ್ರೆಯ ಬಳಿ ಎಸೆಯಲಾಗಿದ್ದ ರುಂಡವಿಲ್ಲದ ನವಜಾತ ಶಿಶುವಿನ ಮೃತದೇಹ ಪತ್ತೆಯಾಗಿದೆ. ದಾರಿಹೋಕರು ಮೃತದೇಹವನ್ನು ಗಮನಿಸುವ ಮುನ್ನ ಬೀದಿನಾಯಿಗಳು ಅದನ್ನು ಹರಿದಾಡಿ ರುಂಡವನ್ನು ತಿಂದಿವೆ ಎನ್ನಲಾಗಿದೆ.
ಫೆ.9ರಂದು ಜಿಲ್ಲೆಯ ಬಹದೂರಪುರ ನಿವಾಸಿ ಸಂಗೀತಾ ಎಂಬ ಗರ್ಭಿಣಿಯನ್ನು ಲಲಿತಪುರ ಮೆಡಿಕಲ್ ಕಾಲೇಜಿನಲ್ಲಿಯ ಜಿಲ್ಲಾ ಮಹಿಳಾ ಆಸ್ಪತ್ರೆಗೆ ದಾಖಲಿಸಲಾಗಿದ್ದು,ಅದೇ ದಿನ ಆಕೆ ಮಗುವಿಗೆ ಜನ್ಮ ನೀಡಿದ್ದಳು. ಆದರೆ ಶಿಶು ಕಡಿಮೆ ತೂಕವನ್ನು ಹೊಂದಿದ್ದರಿಂದ ಅದನ್ನು ವಿಶೇಷ ನವಜಾತ ಆರೈಕೆ ಘಟಕಕ್ಕೆ ಸ್ಥಳಾಂತರಿಸಲಾಗಿತ್ತು.
ಕೆಲ ಸಮಯದ ಬಳಿಕ ನವಜಾತ ಶಿಶು ಮೃತಪಟ್ಟಿದ್ದು,ಮೃತದೇಹವನ್ನು ಸಂಗೀತಾ ಮತ್ತು ಕುಟುಂಬಕ್ಕೆ ಹಸ್ತಾಂತರಿಸಲಾಗಿತ್ತು. ಕುಟುಂಬವು ಬಿಡುಗಡೆ ದಾಖಲೆಗಳನ್ನು ಪಡೆದುಕೊಳ್ಳದೆ ಆಸ್ಪತ್ರೆಯಿಂದ ನಿರ್ಗಮಿಸಿತ್ತು. ಸಂಗೀತಾಳ ಕುಟುಂಬವು ನವಜಾತ ಶಿಶುವಿನ ಮೃತದೇಹವನ್ನು ಆಸ್ಪತ್ರೆಯ ಬಳಿಯೇ ಎಸೆದು ತೆರಳಿತ್ತು ಎಂದು ಊಹಿಸಲಾಗಿದೆ.
ಮಾಹಿತಿ ತಿಳಿದು ಸ್ಥಳಕ್ಕೆ ಧಾವಿಸಿ ಪೋಲಿಸರು ಮೃತದೇಹವನ್ನು ತೆಗೆದುಕೊಂಡು ಮರಣೋತ್ತರ ಪರೀಕ್ಷೆಗೊಳಪಡಿಸಿದ್ದಾರೆ.
ಮೆಡಿಕಲ್ ಕಾಲೇಜಿನ ಪ್ರಾಂಶುಪಾಲ ಡಾ.ಡಿ.ನಾಥ್ ಮತ್ತು ಜಿಲ್ಲಾ ಮಹಿಳಾ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ.ಮೀನಾಕ್ಷಿ ಸಿಂಗ್ ಅವರನ್ನು ಸುದ್ದಿಸಂಸ್ಥೆಯು ಸಂಪರ್ಕಿಸಿತ್ತಾದರೂ ಅವರು ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.