×
Ad

ಪ್ರಯಾಗರಾಜ್ ನದಿ ನೀರಿನ ಗುಣಮಟ್ಟ ಕುರಿತು ಉತ್ತರ ಪ್ರದೇಶ ಸರಕಾರದ ವರದಿಯಲ್ಲಿ ವಿವರಗಳ ಕೊರತೆಯಿದೆ: ಎನ್‌ಜಿಟಿ

Update: 2025-02-19 20:55 IST

ಸಾಂದರ್ಭಿಕ ಚಿತ್ರ | PC : PTI

ಹೊಸದಿಲ್ಲಿ: ಪ್ರಯಾಗರಾಜ್‌ನಲ್ಲಿ ನಡೆಯುತ್ತಿರುವ ಮಹಾ ಕುಂಭಮೇಳದಲ್ಲಿ ಕೋಟ್ಯಂತರ ಭಕ್ತರು ಪುಣ್ಯಸ್ನಾನ ಮಾಡುತ್ತಿರುವ ಗಂಗಾನದಿಯಲ್ಲಿ ಮಾನವರ ಮತ್ತು ಪ್ರಾಣಿಗಳ ಮಲದಲ್ಲಿರುವ ಕೋಲಿಫಾರ್ಮ್ ಬ್ಯಾಕ್ಟೀರಿಯಾ ಮತ್ತು ಇತರ ಜಲ ಗುಣಮಟ್ಟ ಮಾನದಂಡಗಳ ಕುರಿತು ಸಾಕಷ್ಟು ವಿವರಗಳನ್ನು ಸಲ್ಲಿಸದಿದ್ದಕ್ಕಾಗಿ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ(ಎನ್‌ಜಿಟಿ)ಯು ಬುಧವಾರ ಉತ್ತರ ಪ್ರದೇಶ ಮಾಲಿನ್ಯ ನಿಯಂತ್ರಣ ಮಂಡಳಿ(ಯುಪಿಪಿಸಿಬಿ) ಮತ್ತು ಉತ್ತರ ಪ್ರದೇಶ ಸರಕಾರವನ್ನು ತೀವ್ರ ತರಾಟೆಗೆತ್ತಿಕೊಂಡಿದೆ.

ಮಹಾ ಕುಂಭಮೇಳ ನಡೆಯುತ್ತಿರುವ ಪ್ರದೇಶದಲ್ಲಿ ಗಂಗಾ ನದಿಯ ವಿವಿಧ ಭಾಗಗಳಿಂದ ಇತ್ತೀಚಿನ ಜಲ ಗುಣಮಟ್ಟ ವಿಶ್ಲೇಷಣಾ ವರದಿಗಳನ್ನು ಸಲ್ಲಿಸಲು ಎನ್‌ಜಿಟಿ ರಾಜ್ಯ ಸರಕಾರಕ್ಕೆ ಒಂದು ವಾರದ ಸಮಯಾವಕಾಶವನ್ನು ನೀಡಿದೆ.

ತನ್ನ ಡಿಸೆಂಬರ್ ಆದೇಶದ ಪಾಲನೆಯ ಕುರಿತು ಎನ್‌ಜಿಟಿ ಅಧ್ಯಕ್ಷ ನ್ಯಾ.ಪ್ರಕಾಶ ಶ್ರೀವಾಸ್ತವ್, ನ್ಯಾಯಾಂಗ ಸದಸ್ಯ ಸುಧೀರ್ಅಗರವಾಲ್ ಮತ್ತು ತಜ್ಞ ಸದಸ್ಯ ಎ.ಸೆಂಥಿವೇಲ್ ಅವರ ಪೀಠವು ವಿಚಾರಣೆಯನ್ನು ಕೈಗೆತ್ತಿಕೊಂಡಿತ್ತು. ಗಂಗಾ ಮತ್ತು ಯಮುನಾ ನದಿಗಳ ನೀರು ಕುಡಿಯಲು ಮತ್ತು ಕುಂಭ ಸಂದರ್ಭದಲ್ಲಿ ಸ್ನಾನ ಮಾಡಲು ಯೋಗ್ಯವಾಗಿದೆಯೇ ಎನ್ನುವುದನ್ನು ಖಚಿತ ಪಡಿಸಿಕೊಳ್ಳುವಂತೆ ಎನ್‌ಜಿಟಿ ಡಿಸೆಂಬರ್ 23ರಂದು ಉತ್ತರ ಪ್ರ.ಸರಕಾರ ಮತ್ತು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ(ಸಿಪಿಸಿಬಿ)ಗೆ ಆದೇಶಿಸಿತ್ತು.

ಸೋಮವಾರ ಡಿಸೆಂಬರ್ ಆದೇಶಕ್ಕೆ ಅನುಗುಣವಾಗಿ ಸಿಪಿಸಿಬಿ ಎನ್‌ಜಿಟಿಗೆ ಸಲ್ಲಿಸಿರುವ ವರದಿಯು, ಜನವರಿ ಎರಡನೇ ವಾರದಲ್ಲಿ ನಡೆಸಲಾದ ತಪಾಸಣೆಯ ಸಂದರ್ಭದಲ್ಲಿ ಗಂಗಾನದಿಯ ನೀರು ಮಲ ಕೋಲಿಫಾರ್ಮ್ ಬ್ಯಾಕ್ಟೀರಿಯಾದಿಂದ ಕಲುಷಿತಗೊಂಡಿತ್ತು ಮತ್ತು ಜೀವರಾಸಾಯನಿಕ ಆಮ್ಲಜನಕ ಮಾನದಂಡಕ್ಕೆ ಅನುಗುಣವಾಗಿರಲಿಲ್ಲ ಹಾಗೂ ಸ್ನಾನಕ್ಕೆ ಯೋಗ್ಯವಾಗಿರಲಿಲ್ಲ ಎಂದು ಹೇಳಿದೆ.

ಸಿಪಿಸಿಬಿಯ ವರದಿಯನ್ನು ಸೋಮವಾರ ದಾಖಲಿಸಿಕೊಂಡ ಎನ್‌ಜಿಟಿಯು, ಯುಪಿಪಿಸಿಬಿ ತನ್ನ ಡಿ.23ರ ಆದೇಶಕ್ಕೆ ಅನುಗುಣವಾಗಿ ಕ್ರಮಾನುಷ್ಠಾನ ವರದಿಯನ್ನು ಸಲ್ಲಿಸಿಲ್ಲ ಎನ್ನುವುದನ್ನು ಗಮನಕ್ಕೆ ತೆಗೆದುಕೊಂಡಿತ್ತು.

ತಾನು ಪಾಲನಾ ವರದಿಯನ್ನು ಸಲ್ಲಿಸಿದ್ದೇನೆ ಎಂದು ಬುಧವಾರ ಹೇಳಿದ ಯುಪಿಪಿಸಿಬಿ, ಆದರೆ ನೀರಿನ ಮಾದರಿಗಳನ್ನು ಸಂಗ್ರಹಿಸಿದ್ದ ನಿಖರವಾದ ಸ್ಥಳಗಳ ಕುರಿತು ವಿವರಗಳನ್ನು ಸಿಪಿಸಿಬಿಯಿಂದ ಕೋರಿದ್ದಾಗಿ ತಿಳಿಸಿತು. ಇದರಿಂದ ಕೆರಳಿದ ಪೀಠವು, ನೀವು ಸಿಪಿಸಿಬಿ ವರದಿಯನ್ನು ಅಲ್ಲಗಳೆಯುತ್ತೀದ್ದೀರಾ ಎಂದು ಪ್ರಶ್ನಿಸಿತಾದರೂ ನೀರಿನ ಮಾದರಿಗಳನ್ನು ಸಂಗ್ರಹಿಸಿದ ಸ್ಥಳಗಳ ವಿವರಗಳನ್ನು ಮತ್ತು ಪ್ರಯೋಗಾಲಯ ಪರೀಕ್ಷಾ ವರದಿಗಳನ್ನು ಸಲ್ಲಿಸುವಂತೆ ಸಿಪಿಸಿಬಿ ವಕೀಲರಿಗೆ ಸೂಚಿಸಿತು.

ನೀರಿನ ಗುಣಮಟ್ಟದ ಕುರಿತು ಯುಪಿಪಿಸಿಬಿಯ ವರದಿಯು ಜೀವರಾಸಾಯನಿಕ ಆಮ್ಲಜನಕ,ರಾಸಾಯನಿಕ ಆಮ್ಲಜನಕ ಮತ್ತು ಮಲ ಕೋಲಿಫಾರ್ಮ್ ಕುರಿತು ವಿವರಗಳನ್ನು ಒಳಗೊಂಡಿಲ್ಲ ಎಂದೂ ಗಮನಿಸಿದ ಪೀಠವು ಫೆ.18ರವರೆಗಿನದು ಸೇರಿದಂತೆ ಇತ್ತೀಚಿನ ವರದಿಗಳನ್ನು ಸಲ್ಲಿಸುವಂತೆ ಯುಪಿಪಿಸಿಬಿಗೆ ನಿರ್ದೇಶನ ನೀಡಿತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News