ಉತ್ತರ ಪ್ರದೇಶ | ದಲಿತನ ವಿವಾಹ ಮೆರವಣಿಗೆ ಮೇಲೆ ಪ್ರಬಲ ಜಾತಿಯ ಜನರಿಂದ ದೊಣ್ಣೆ, ಕಬ್ಬಿಣದ ರಾಡ್‌ನಿಂದ ದಾಳಿ!
ಸಾಂದರ್ಭಿಕ ಚಿತ್ರ
ಮೀರತ್: ದಲಿತ ವ್ಯಕ್ತಿಯೋರ್ವರ ವಿವಾಹದ ಮೆರವಣಿಗೆ ಮೇಲೆ ಪ್ರಬಲ ಜಾತಿಗೆ ಸೇರಿದ ಸುಮಾರು 40 ಜನರಿದ್ದ ಗುಂಪು ದಾಳಿ ನಡೆಸಿದ, ಜಾತಿ ನಿಂದನೆಗೈದ ಹಾಗೂ ವಿವಾಹದ ಉಡುಪಿನಲ್ಲಿದ್ದ ವರನನ್ನು ಕುದುರೆಯಿಂದ ಎಳೆದು ಕೆಳಗೆ ಹಾಕಿದ ಘಟನೆ ಭುವನೇಶ್ವರದಲ್ಲಿ ನಡೆದಿದೆ ಎಂದು ಪೊಲೀಸರು ಶುಕ್ರವಾರ ತಿಳಿಸಿದ್ದಾರೆ.
ಡಿಜೆ ಸಂಗೀತದೊಂದಿಗೆ ವಿವಾಹದ ಮೆರವಣಿಗೆ ಪ್ರಬಲ ಜಾತಿಯ ಜನರಿರುವ ಪ್ರದೇಶದಲ್ಲಿ ಹಾದು ಹೋಗಿರುವುದು ಈ ದಾಳಿಗೆ ಕಾರಣ ಎಂದು ಪೊಲೀಸರು ತಿಳಿಸಿದ್ದಾರೆ
‘‘ವಿವಾಹದ ಮೆರವಣಿಗೆಯಲ್ಲಿ ಪಾಲ್ಗೊಂಡ ಅಥಿತಿಗಳಿಗೆ ಕಬ್ಬಿಣದ ರಾಡ್‌ನಿಂದ ಹಲ್ಲೆ ನಡೆಸಲಾಗಿದೆ. ಇದರಿಂದ 6 ಮಂದಿಯ ತಲೆಗೆ ಗಾಯಗಳಾಗಿವೆ. ಹಿಂದಿರುಗುವಂತೆ ಅವರು ಬಲವಂತಪಡಿಸಿದ್ದಾರೆ. ಅಲ್ಲದೆ, ಈ ಪ್ರದೇಶಕ್ಕೆ ಹಿಂದಿರುಗದಂತೆ ಬೆದರಿಕೆ ಒಡ್ಡಿದ್ದಾರೆ’’ ಎಂದು ವರನ ಕುಟುಂಬ ಆರೋಪಿಸಿದೆ.
‘‘ವಿವಾಹದ ಮೆರವಣಿಗೆಯಲ್ಲಿ ಜೋರಾಗಿ ಸಂಗೀತ ಹಾಕಿರುವ ಕಾರಣಕ್ಕೆ ಈ ಜಗಳ ನಡೆದಿದೆ. ಐವರನ್ನು ಬಂಧಿಸಿದ್ದೇವೆ. ಇತರರನ್ನು ಗುರುತಿಸಲು ತನಿಖೆ ನಡೆಯುತ್ತಿದೆ. ಗುರುತಿಸಲಾದ 30 ಮಂದಿ ಹಾಗೂ ಇತರ ಕೆಲವು ಅಪರಿಚಿತ ವ್ಯಕ್ತಿಗಳ ವಿರುದ್ಧ ಭಾರತೀಯ ನ್ಯಾಯ ಸಂಹಿತೆ , ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳ ದೌರ್ಜನ್ಯ ತಡೆ ಕಾಯ್ದೆಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ’’ ಎಂದು ಎಎಸ್‌ಪಿ ರಿಜುಲ್ ಕುಮಾರ್ ತಿಳಿಸಿದ್ದಾರೆ.
ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದ ಧರ್ಮಾವಳಿ ಗ್ರಾಮದ ನಿವಾಸಿ ಸುರೇಂದ್ರ ಸಿಂಗ್, ‘‘ಗುರುವಾರ ರಾತ್ರಿ 8 ಗಂಟೆಗೆ ಭಗತ್ ಸಿಂಗ್ ಅವರ ವಿವಾಹದ ಮೆರವಣಿಗೆಗೆ ತಡೆ ಒಡ್ಡಲಾಯಿತು’’ ಎಂದಿದ್ದಾರೆ.
‘‘ಠಾಕೂರ್ ಸಮುದಾಯಕ್ಕೆ ಸೇರಿದ 12ಕ್ಕೂ ಅಧಿಕ ಜನರು ದೊಣ್ಣೆ, ಕಬ್ಬಿಣದ ರಾಡ್ ಹಾಗೂ ಹರಿತವಾದ ಆಯುಧಗಳಿಂದ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದ ಅತಿಥಿಗಳ ಮೇಲೆ ದಾಳಿ ನಡೆಸಿದರು. ಜಾತಿ ನಿಂದನೆ ಮಾಡಿದರು. ವರನನ್ನು ಕುದುರೆಯಿಂದ ಕೆಳಗೆ ಎಳೆದು ಹಾಕಿದರು. ಇದರಿಂದ ಮಹಿಳೆ ಸೇರಿದಂತೆ 6 ಮಂದಿ ಅತಿಥಿಗಳು ಗಾಯಗೊಂಡಿದ್ದಾರೆ. ಮುಖದಲ್ಲಿ ಗಾಯಗಳಾಗಿವೆ’’ ಎಂದು ಸುರೇಂದ್ರ ತಿಳಿಸಿದ್ದಾರೆ.