ಉತ್ತರ ಪ್ರದೇಶ | ದಾಳಿ ಮಾಡಿದ ಹುಲಿಯನ್ನು ಹೊಡೆದು ಕೊಂದ ಗ್ರಾಮಸ್ಥರು
ಸಾಂದರ್ಭಿಕ ಚಿತ್ರ | PC : PTI
ಲಖಿಂಪುರಖೇರಿ: ದುಧ್ವಾ ಹುಲಿ ಅಭಯಾರಣ್ಯದ ಬಫರ್ ವಲಯದಲ್ಲಿರುವ ಗ್ರಾಮಕ್ಕೆ ದಾರಿ ತಪ್ಪಿ ಬಂದ ಹಾಗೂ ಇಬ್ಬರು ಗ್ರಾಮಸ್ಥರ ಮೇಲೆ ದಾಳಿ ಮಾಡಿದ ಎರಡು ವರ್ಷದ ಹೆಣ್ಣು ಹುಲಿಯನ್ನು ಸ್ಥಳೀಯರು ಬುಧವಾರ ಹೊಡೆದು ಕೊಂದಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಫುಲ್ವಾರಿಯಾದ ನಿವಾಸಿಗಳು ಸಂಘಟಿತರಾಗಿ ಈ ಹೆಣ್ಣು ಹುಲಿಯನ್ನು ಹೊಡೆದು ಕೊಂದು ಹಾಕಿದರು ಎಂದು ಅವರು ಹೇಳಿದ್ದಾರೆ.
ಪಾಲಿಯಾ ತಾಲೂಕಿನ ಗ್ರಾಮದಿಂದ ಹುಲಿಯ ಅಸ್ತಿಪಂಜರವನ್ನು ಅರಣ್ಯಾಧಿಕಾರಿಗಳು ಪತ್ತೆ ಹಚ್ಚಿದ್ದಾರೆ. ಅಲ್ಲದೆ, ಅದನ್ನು ವಲಯ ಕೇಂದ್ರ ಕಚೇರಿಗೆ ಕಳುಹಿಸಿ ಕೊಡಲಾಗಿದೆ ಎಂದು ದುಧ್ವಾ ಬಫರ್ ವಲಯದ ಉಪ ನಿರ್ದೇಶಕ ಸೌರೀಶ್ ಸಹಾಯಿ ತಿಳಿಸಿದ್ದಾರೆ.
ವನ್ಯ ಜೀವಿ ಸಂರಕ್ಷಣಾ ಕಾಯ್ದೆಯ ನಿಯಮಗಳ ಅಡಿಯಲ್ಲಿ ಪಾಲಿಯಾ ಪೊಲೀಸ್ ಠಾಣೆಯಲ್ಲಿ ಅಪರಿಚಿತ ವ್ಯಕ್ತಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಅವರು ಹೇಳಿದ್ದಾರೆ.
ಹುಲಿಯಿಂದ ಗಾಯಗೊಂಡ ಗ್ರಾಮಸ್ಥರು ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ಅವರು ತಿಳಿಸಿದ್ದಾರೆ.