×
Ad

ಉತ್ತರ ಪ್ರದೇಶ | ಅಪ್ರಾಪ್ತ ದಲಿತ ಬಾಲಕಿಯ ಸಾಮೂಹಿಕ ಅತ್ಯಾಚಾರ

Update: 2025-03-06 20:52 IST

ಸಾಂದರ್ಭಿಕ ಚಿತ್ರ | PC : freepik.com

ಲಕ್ನೋ : ಹದಿನಾಲ್ಕು ವರ್ಷದ ಅಪ್ರಾಪ್ತ ದಲಿತ ಬಾಲಕಿಯ ಅಹರಿಸಿ, ಚಿತ್ರಹಿಂಸೆ ನೀಡಿದ ಹಾಗೂ 2 ತಿಂಗಳುಗಳ ಕಾಲ ಮತ್ತೆ ಮತ್ತೆ ಅತ್ಯಾಚಾರ ಎಸಗಿದ ಘಟನೆ ಉತ್ತರಪ್ರದೇಶದ ಮೊರದಾಬಾದ್ ಜಿಲ್ಲೆಯಲ್ಲಿ ನಡೆದಿದೆ.

ಈ ಪ್ರಕರಣದಲ್ಲಿ ನಾಲ್ವರು ಭಾಗಿಯಾಗಿದ್ದು, ಅವರಲ್ಲಿ ಒಬ್ಬನನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಜನವರಿ 2ರಂದು ಟೈಲರ್ ಬಳಿ ತೆರಳುತ್ತಿದ್ದ ಬಾಲಕಿಯನ್ನು ಅಪಹರಿಸಲಾಗಿತ್ತು. ಸಲ್ಮಾನ್, ಝುಬೈರ್, ರಶೀದ್ ಹಾಗೂ ಆರೀಪ್ ಬಾಲಕಿಯನ್ನು ಬಲವಂತವಾಗಿ ಕಾರಿನಲ್ಲಿ ಕರೆದೊಯ್ದರು. ಅಮಲು ಪದಾರ್ಥ ನೀಡಿ ಪ್ರಜ್ಞೆ ತಪ್ಪುವಂತೆ ಮಾಡಿದರು. ಆಕೆಯನ್ನು ನಿರ್ಜನ ಪ್ರದೇಶಕ್ಕೆ ಕರೆದೊಯ್ದರು. ಅಲ್ಲಿ ಕೊಠಡಿಯಲ್ಲಿ ಕೂಡಿ ಹಾಕಿ ಮತ್ತೆ ಮತ್ತೆ ಅತ್ಯಾಚಾರ ಎಸಗಿದರು ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ಸಂತ್ರಸ್ತ ಬಾಲಕಿಯ ಕುಟುಂಬ ಆರೋಪಿಸಿದೆ.

ಸೆರೆಯಲ್ಲಿದ್ದಾಗ ಬಾಲಕಿಯ ಕೈಮೇಲೆ ಇದ್ದ ಓಂ ಹಚ್ಚೆಗೆ ಆರೋಪಿಗಳು ಆ್ಯಸಿಡ್ ಸುರಿದು ಸುಟ್ಟು ಹಾಕಿದ್ದಾರೆ. ಆಕೆಗೆ ಬಲವಂತವಾಗಿ ಮಾಂಸ ತಿನ್ನಿಸಿದ್ದಾರೆ ಹಾಗೂ ಚಿತ್ರಹಿಂಸೆ ನೀಡಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ ಎಂದು ಭಗತ್‌ಪುರ ಪೊಲೀಸ್ ಠಾಣೆಯ ಎಸ್‌ಎಚ್‌ಒ ಸಂಜಯ್ ಕುಮಾರ್ ಪಂಚಾಲ್ ತಿಳಿಸಿದ್ದಾರೆ.

ಆಕೆ ಹೇಗೋ ಅವರ ಸೆರೆಯಿಂದ ತಪ್ಪಿಸಿಕೊಂಡು ಮಾರ್ಚ್ 2ರಂದು ತನ್ನ ಮನೆಗೆ ಹಿಂದಿರುಗುವ ವರೆಗೆ ಎರಡು ತಿಂಗಳುಗಳ ಕಾಲ ಆರೋಪಿಗಳು ಆಕೆಗೆ ನಿರಂತರ ಚಿತ್ರಹಿಂಸೆ ನೀಡಿದ್ದಾರೆ. ಬಾಲಕಿ ಘಟನೆಯ ಕುರಿತು ಮಾಹಿತಿ ನೀಡಿದ ಬಳಿಕ ಆಕೆಯ ಕುಟುಂಬ ಕೂಡಲೇ ಪೊಲೀಸ್ ದೂರು ದಾಖಲಿಸಿದೆ. ಅನಂತರ ಭಗತ್‌ಪುರ ಪೊಲೀಸ್ ಠಾಣೆಯಲ್ಲಿ ಭಾರತೀಯ ನ್ಯಾಯ ಸಂಹಿತೆಯ ಸಂಬಂಧಿತ ಸೆಕ್ಷನ್‌ಗಳು, ಪೋಕ್ಸೊ ಕಾಯ್ದೆ, ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡ ದೌರ್ಜನ್ಯ ತಡೆ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಘಟನೆಯನ್ನು ದೃಢಪಡಿಸಿರುವ ಪೊಲೀಸ್ ಅಧೀಕ್ಷಕ (ಗ್ರಾಮೀಣ) ಕುನ್ವಾರ್ ಆಕಾಶ್ ಸಿಂಗ್, ಆರೋಪಿಗಳಲ್ಲಿ ಓರ್ವನಾದ ಸಲ್ಮಾನ್‌ನನ್ನು ಮಂಗಳವಾರ ಬಂಧಿಸಲಾಗಿದೆ. ಆತನನ್ನು ಜೈಲಿಗೆ ಕಳುಹಿಸಲಾಗಿದೆ. ಉಳಿದ ಮೂವರು ಶಂಕಿತರನ್ನು ಬಂಧಿಸಲು ಕಾರ್ಯಾಚರಣೆ ಮುಂದುವರಿದಿದೆ ಎಂದು ತಿಳಿಸಿದ್ದಾರೆ.

ಈ ನಡುವೆ ಬಾಲಕಿಯ ಕುಟುಂಬ, ಅವರು ತಮಗೆ ಬೆದರಿಕೆ ಒಡ್ಡುತ್ತಿದ್ದಾರೆ. ಹಾಗೂ ಪ್ರಕರಣ ಹಿಂಪಡೆಯುವಂತೆ ಬಲವಂತಪಡಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News