ಉತ್ತರಪ್ರದೇಶ | ಕಳ್ಳರೆಂದು ಆರೋಪಿಸಿ ಇಬ್ಬರು ವ್ಯಕ್ತಿಗಳಿಗೆ ಗುಂಪಿನಿಂದ ಹಲ್ಲೆ
ಸಾಂದರ್ಭಿಕ ಚಿತ್ರ
ಲಕ್ನೋ, ಆ. 16: ಕಳ್ಳತನದ ಆರೋಪದಲ್ಲಿ ಇಬ್ಬರು ವ್ಯಕ್ತಿಗಳಿಗೆ ಗುಂಪೊಂದು ಹಲ್ಲೆ ನಡೆಸಿದ ಘಟನೆ ನಯಾಗಾಂವ್ ಪೊಲೀಸ್ ಠಾಣಾ ವ್ಯಾಪ್ತಿಯ ಎಟಾದಲ್ಲಿ ಶುಕ್ರವಾರ ರಾತ್ರಿ ನಡೆದಿದೆ.
ರಕ್ಷಿಸಲಾದ ಆ ಇಬ್ಬರು ವ್ಯಕ್ತಿಗಳನ್ನು ಹಸ್ತಾಂತರಿಸಲು ಪೊಲೀಸರು ನಿರಾಕರಿಸಿದ ಹಿನ್ನೆಲೆಯಲ್ಲಿ ಗುಂಪು ಪೊಲೀಸ್ ಠಾಣೆಗೆ ನುಗ್ಗಿ ದಾಂಧಲೆ ಕೂಡ ನಡೆಸಿತು ಎಂದು ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ.
ಗುಂಪಿನಿಂದ ಹಲ್ಲೆಗೊಳಗಾದವರನ್ನು ಫಾಹೀಮ್ ಹಾಗೂ ಫಿರೋಝ್ ಎಂದು ಗುರುತಿಸಲಾಗಿದೆ.
ತಾನು ಹಾಗೂ ತನ್ನ ಸಂಬಂಧಿ ‘ಚೆಹುಲ್ಲುಮ್’ ಮೆರವಣಿಗೆಯಲ್ಲಿ ಪಾಲ್ಗೊಂಡು ಹಿಂದಿರುಗುತ್ತಿದ್ದಾಗ ಗುಂಪೊಂದು ತಮ್ಮನ್ನು ತಡೆದು ನಿಲ್ಲಿಸಿತು ಹಾಗೂ ಹಲ್ಲೆ ನಡೆಸಿತು ಎಂದು ಫಾಹಿಮ್ ಆರೋಪಿಸಿದ್ದಾರೆ.
ಗುಂಪು ತಮ್ಮನ್ನು ಕಳ್ಳರೆಂದು ತಪ್ಪಾಗಿ ಭಾವಿಸಿ ದೊಣ್ಣೆಯಿಂದ ಥಳಿಸಿತು. ನಾವು ಕಳ್ಳರಲ್ಲ ಎಂದು ಅವರಿಗೆ ಹೇಳುತ್ತಲೇ ಇದ್ದೆವು. ಆದರೆ, ಗುಂಪು ನಮ್ಮ ಮಾತು ಕೇಳಲಿಲ್ಲ ಎಂದು ಅವರು ಹೇಳಿದ್ದಾರೆ.
ಗುಂಪು ಇಬ್ಬರು ವ್ಯಕ್ತಿಗಳಿಗೆ ಥಳಿಸುತ್ತಿದ್ದ ಸಂದರ್ಭ ಆಗಮಿಸಿದ ಪೊಲೀಸ್ ಗಸ್ತು ತಂಡ ಅವರನ್ನು ರಕ್ಷಿಸಿತು ಹಾಗೂ ಪೊಲೀಸ್ ಠಾಣೆಗೆ ಕರೆದುಕೊಂಡು ಹೋಯಿತು. ಕೂಡಲೇ ಪೊಲೀಸ್ ಠಾಣೆಯ ಹೊರಗೆ ಸೇರಿದ ಗುಂಪು ಅವರಿಬ್ಬರನ್ನು ಹಸ್ತಾಂತರಿಸುವಂತೆ ಆಗ್ರಹಿಸಿತು ಎಂದು ಮೂಲಗಳು ತಿಳಿಸಿವೆ.
ಆದರೆ, ಅವರ ಬೇಡಿಕೆಯನ್ನು ಪೊಲೀಸರು ನಿರಾಕರಿಸಿದಾಗ, ಗುಂಪು ಪೊಲೀಸ್ ಠಾಣೆ ಮೇಲೆ ಕಲ್ಲು ತೂರಾಟ ನಡೆಸಿತು. ಇದರಿಂದ ಪೊಲೀಸ್ ವಾಹನಗಳಿಗೆ ಹಾನಿ ಉಂಟಾಯಿತು ಎಂದು ಅವು ಹೇಳಿವೆ.
ಈ ಹಿನ್ನೆಲೆಯಲ್ಲಿ ಹೆಚ್ಚುವರಿ ಪಡೆಯನ್ನು ಪೊಲೀಸ್ ಠಾಣೆಗೆ ಕಳುಹಿಸಲಾಯಿತು. ಗುಂಪನ್ನು ಚದುರಿಸಲು ಅವರು ಅಶ್ರುವಾಯು ಸೆಲ್ ಗಳನ್ನು ಪ್ರಯೋಗಿಸಿದರು ಎಂದು ಎಸ್.ಪಿ. ಕುಮಾರ್ ಸಿಂಗ್ ತಿಳಿಸಿದ್ದಾರೆ.
‘‘ಗಾಯಗೊಂಡ ಫಾಹಿಮ್ ಹಾಗೂ ಫಿರೋಝ್ ನನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದೆ. ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ. ನಾವು ಐವರು ಪರಿಚಿತ ಹಾಗೂ 50 ಅಪರಿಚಿತ ವ್ಯಕ್ತಿಗಳ ವಿರುದ್ಧ ಕಾನೂನಿನ ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದೇವೆ’’ ಎಂದು ಅವರು ಹೇಳಿದ್ದಾರೆ.
ಈ ಪ್ರದೇಶದಲ್ಲಿ ಭಾರೀ ಪೊಲೀಸ್ ಪಡೆಯನ್ನು ನಿಯೋಜಿಸಲಾಗಿದೆ. ಈಗ ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದು ಸಿಂಗ್ ತಿಳಿಸಿದ್ದಾರೆ.