Uttar Pradesh | NEETನಲ್ಲಿ ಎರಡು ಬಾರಿ ಫೈಲ್: ಅಂಗವೈಕಲ್ಯ ಕೋಟಾದಡಿ ವೈದ್ಯಕೀಯ ಸೀಟಿಗಾಗಿ ಪಾದ ಕತ್ತರಿಸಿಕೊಂಡ ಯುವಕ!
Photo Credit: The Hindu
ಲಕ್ನೋ, ಜ.24: ಸರ್ಕಾರಿ ವೈದ್ಯಕೀಯ ಕಾಲೇಜಿನಲ್ಲಿ ಅಂಗವೈಕಲ್ಯ ಕೋಟಾದಡಿ ಪ್ರವೇಶ ಪಡೆಯುವ ಉದ್ದೇಶದಿಂದ ಉತ್ತರ ಪ್ರದೇಶದ ಯುವಕನೊಬ್ಬ ತನ್ನದೇ ಪಾದ ಕತ್ತರಿಸಿಕೊಂಡಿರುವ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ.
ಸುಮಾರು 20 ವರ್ಷದ ಸೂರಜ್ ಭಾಸ್ಕರ್, ರಾಷ್ಟ್ರೀಯ ಅರ್ಹತಾ–ಪ್ರವೇಶ ಪರೀಕ್ಷೆ (NEET)ಯಲ್ಲಿ ಎರಡು ಬಾರಿ ಅನುತ್ತೀರ್ಣನಾಗಿದ್ದರಿಂದ ತೀವ್ರ ಮಾನಸಿಕ ಒತ್ತಡಕ್ಕೆ ಒಳಗಾಗಿದ್ದನೆಂದು ಪೊಲೀಸರು ತಿಳಿಸಿದ್ದಾರೆ. ವೈದ್ಯಕೀಯ ಶಿಕ್ಷಣದ ಕನಸನ್ನು ನನಸಾಗಿಸಿಕೊಳ್ಳಲು ಅಂಗವೈಕಲ್ಯ ಕೋಟಾದಡಿ ಪ್ರವೇಶ ಪಡೆಯುವ ಉದ್ದೇಶದಿಂದ ಆತ ದೈಹಿಕವಾಗಿ ಅಂಗವಿಕಲನಾಗುವ ಯೋಜನೆಯನ್ನು ರೂಪಿಸಿದ್ದಾನೆ ಎಂದು ತನಿಖೆಯಿಂದ ತಿಳಿದುಬಂದಿದೆ.
ಈ ಘಟನೆ ಜೌನ್‌ಪುರ ಜಿಲ್ಲೆಯ ಖಲೀಲ್‌ಪುರ ಗ್ರಾಮದಲ್ಲಿ ನಡೆದಿದೆ. ಸೂರಜ್ ತನ್ನ ಪಾದವನ್ನು ಸ್ವಯಂ ಕತ್ತರಿಸಿಕೊಂಡು, ಅದನ್ನು “ಅಪರಿಚಿತರಿಂದ ನಡೆದ ಕ್ರಿಮಿನಲ್ ದಾಳಿ” ಎಂದು ಬಿಂಬಿಸಲು ಯತ್ನಿಸಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.
ರವಿವಾರ (ಜನವರಿ 18, 2026) ಸೂರಜ್ ನ ಅಣ್ಣ ಆಕಾಶ್ ಭಾಸ್ಕರ್ ಪೊಲೀಸರಿಗೆ ದೂರು ನೀಡಿದ್ದು, ಹಿಂದಿನ ರಾತ್ರಿ ಅಪರಿಚಿತರು ಸೂರಜ್ ಮೇಲೆ ಹಲ್ಲೆ ನಡೆಸಿ, ಅವನ ಪಾದ ಕತ್ತರಿಸಿ, ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿಟ್ಟು ಪರಾರಿಯಾಗಿದ್ದಾರೆ ಎಂದು ತಿಳಿಸಿದ್ದ ಎನ್ನಲಾಗಿದೆ. ಈ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ಆರಂಭಿಸಿದರು.
ನಂತರ ಪ್ರಕರಣವನ್ನು ನಗರ ವೃತ್ತಾಧಿಕಾರಿ ಗೋಲ್ಡಿ ಗುಪ್ತಾ ಅವರಿಗೆ ಹಸ್ತಾಂತರಿಸಲಾಯಿತು. ತನಿಖೆಯ ವೇಳೆ ಸೂರಜ್ ನೀಡಿದ ಹೇಳಿಕೆಗಳಲ್ಲಿ ಹಲವು ಅನುಮಾನಗಳು ಕಂಡುಬಂದಿವೆ ಎಂದು ಪೊಲೀಸರು ತಿಳಿಸಿದ್ದಾರೆ. ಸೂರಜ್ ನ ಮೊಬೈಲ್ ಫೋನ್ ಪರಿಶೀಲನೆ ನಡೆಸಲಾಗಿದ್ದು, ತನಿಖೆಯಲ್ಲಿ ಪತ್ತೆಯಾದ ಮಹಿಳೆಯನ್ನು ವಿಚಾರಿಸಿದ ಬಳಿಕ ಪೊಲೀಸರ ಅನುಮಾನಗಳು ಮತ್ತಷ್ಟು ಹೆಚ್ಚಾಯಿತು.
ಇದಲ್ಲದೆ, ತನಿಖಾಧಿಕಾರಿಗಳು ಸೂರಜ್‌ಗೆ ಸೇರಿದ ಡೈರಿಯನ್ನು ವಶಪಡಿಸಿಕೊಂಡಿದ್ದು, ಅದರಲ್ಲಿ “ನಾನು 2026ರಲ್ಲಿ ಎಂಬಿಬಿಎಸ್ ವೈದ್ಯನಾಗುತ್ತೇನೆ” ಎಂಬ ವಾಕ್ಯ ಬರೆದಿರುವುದು ಪತ್ತೆಯಾಗಿದೆ. ನೀಟ್ ಪರೀಕ್ಷೆಯಲ್ಲಿ ಎರಡು ಬಾರಿ ಉತ್ತೀರ್ಣರಾಗಲು ವಿಫಲವಾದ ಹಿನ್ನೆಲೆಯಲ್ಲಿ ಸೂರಜ್ ಮಾನಸಿಕ ಒತ್ತಡಕ್ಕೆ ಒಳಗಾಗಿದ್ದನೆಂದು ಪೊಲೀಸರು ತಿಳಿಸಿದ್ದಾರೆ.
ಅಂಗವೈಕಲ್ಯ ಕೋಟಾದಡಿ ವೈದ್ಯಕೀಯ ಕಾಲೇಜು ಪ್ರವೇಶ ಪಡೆಯಲು ಆತ ಉದ್ದೇಶಪೂರ್ವಕವಾಗಿ ತನ್ನ ಪಾದವನ್ನು ಕತ್ತರಿಸಿಕೊಂಡು, ಘಟನೆಯನ್ನು ಕ್ರಿಮಿನಲ್ ದಾಳಿ ಎಂದು ತೋರಿಸುವ ಯೋಜನೆಯನ್ನು ರೂಪಿಸಿದ್ದಾನೆ ಎಂಬುದು ತನಿಖೆಯಲ್ಲಿ ದೃಢಪಟ್ಟಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಬುಧವಾರ (ಜನವರಿ 21, 2026) ತನಿಖೆಯ ವಿವರಗಳನ್ನು ಹಂಚಿಕೊಂಡ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ (ನಗರ) ಆಯುಷ್ ಶ್ರೀವಾಸ್ತವ, “ಆರೋಪಿಯು ಸುಳ್ಳು ಕಥೆಯ ಮೂಲಕ ತನಿಖೆಯನ್ನು ದಾರಿ ತಪ್ಪಿಸಲು ಯತ್ನಿಸಿದ್ದಾನೆ. ಆದರೆ ನಿರಂತರ ವಿಚಾರಣೆ ಮತ್ತು ಲಭ್ಯವಿರುವ ಸಾಕ್ಷ್ಯಗಳ ಪರಿಶೀಲನೆಯ ವೇಳೆ ಅವನ ಹೇಳಿಕೆಗಳು ಒಂದಕ್ಕೊಂದು ತಾಳೆಯಾಗುತ್ತಿಲ್ಲ,” ಎಂದು ತಿಳಿಸಿದ್ದಾರೆ.
ಸೂರಜ್ ವಿರುದ್ಧ ಕ್ರಿಮಿನಲ್ ಕಾನೂನಿನ ಯಾವ ಯಾವ ವಿಧಿಗಳನ್ನು ಅನ್ವಯಿಸಬಹುದು ಎಂಬ ಕುರಿತು ಪೊಲೀಸರು ಪ್ರಸ್ತುತ ಕಾನೂನು ಅಭಿಪ್ರಾಯ ಪಡೆಯುತ್ತಿದ್ದು, ಮುಂದಿನ ಕಾನೂನು ಕ್ರಮ ಪ್ರಗತಿಯಲ್ಲಿದೆ ಎಂದು ತಿಳಿಸಿದ್ದಾರೆ.
ಸೂರಜ್ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ ಎಂದು ಲೈನ್ ಬಜಾರ್ ಪೊಲೀಸ್ ಠಾಣೆಯ ಠಾಣಾಧಿಕಾರಿ ಸತೀಶ್ ಸಿಂಗ್ ಮಾಹಿತಿ ನೀಡಿದ್ದಾರೆ.