×
Ad

ಉತ್ತರಪ್ರದೇಶ | ಶಾರದಾ ವಿವಿ ವಿದ್ಯಾರ್ಥಿನಿ ಆತ್ಮಹತ್ಯೆ : ವಿದ್ಯಾರ್ಥಿಗಳು, ಸಂಬಂಧಿಕರಿಂದ ಪ್ರತಿಭಟನೆ

Update: 2025-07-19 21:17 IST

PC : X \ @MazharKhaan_

ಹೊಸದಿಲ್ಲಿ: ಉತ್ತರಪ್ರದೇಶದ ಗ್ರೇಟರ್ ನೋಯಿಡದಲ್ಲಿರುವ ಶಾರದಾ ವಿಶ್ವವಿದ್ಯಾನಿಲಯದ ಹಾಸ್ಟೆಲ್‌ನಲ್ಲಿ ಶುಕ್ರವಾರ ವಿದ್ಯಾರ್ಥಿನಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆತ್ಮಹತ್ಯೆಗೆ ವಿಶ್ವವಿದ್ಯಾನಿಲಯ ಸಿಬ್ಬಂದಿಯ ಕಿರುಕುಳವೇ ಕಾರಣವೆಂದು ಆರೋಪಿಸಿರುವ ವಿದ್ಯಾರ್ಥಿಗಳು ಮತ್ತು ಸಂಬಂಧಿಕರು ಪ್ರತಿಭಟನೆ ಮಾಡಿದ್ದಾರೆ.

ವಿದ್ಯಾರ್ಥಿನಿಯು ಸಹಿಗಳನ್ನು ನಕಲಿ ಮಾಡಿದ್ದಾರೆ ಎಂಬುದಾಗಿ ವಿಶ್ವವಿದ್ಯಾನಿಲಯದ ಬೋಧಕ ಸಿಬ್ಬಂದಿ ಸುಳ್ಳು ಆರೋಪ ಮಾಡಿ, ತರಗತಿಯಲ್ಲೇ ಆಕೆಯನ್ನು ಅವಮಾನಿಸಿದ್ದಾರೆ ಮತ್ತು ಅನುತ್ತೀರ್ಣಗೊಳಿಸುವುದಾಗಿ ಬೆದರಿಕೆ ಹಾಕಿದ್ದಾರೆ ಎಂಬುದಾಗಿ ವಿದ್ಯಾರ್ಥಿನಿಯ ಸಂಬಂಧಿಕರು ಆರೋಪಿಸಿದ್ದಾರೆ.

20 ವರ್ಷದ ಬಿಡಿಎಸ್ ವಿದ್ಯಾರ್ಥಿನಿ ಶುಕ್ರವಾರ ತನ್ನ ಹಾಸ್ಟೆಲ್ ಕೊಠಡಿಯಲ್ಲಿ ನೇಣಿನಿಂದ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಅವರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ‘‘ನಿನ್ನೆ ಶಾರದಾ ವಿಶ್ವವಿದ್ಯಾನಿಲಯದ ವಿದ್ಯಾರ್ಥಿನಿಯೊಬ್ಬರು ವಿಶ್ವವಿದ್ಯಾನಿಲಯದ ಹಾಸ್ಟೆಲ್‌ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪೊಲೀಸರಿಗೆ ಮಾಹಿತಿ ಬಂದ ಬಳಿಕ, ಅವರು ಸ್ಥಳಕ್ಕೆ ತೆರಳಿದ್ದಾರೆ. ಬಳಿಕ ಶೀಘ್ರವಾಗಿ ಮರನೋತ್ತರ ಪರೀಕ್ಷೆ ಮಾಡಲಾಯಿತು’’ ಎಂದು ಗ್ರೇಟರ್ ನೋಯ್ಡ ಎಡಿಸಿಪಿ ಸುಧೀರ್ ಕುಮಾರ್ ಶನಿವಾರ ತಿಳಿಸಿದರು.

ಅಸೈನ್‌ಮೆಂಟ್‌ಗಳು ಮತ್ತು ಲ್ಯಾಬ್ ವರ್ಕ್‌ಗಳಲ್ಲಿ ನನ್ನ ಸಹೋದರಿ ಸಹಿಗಳನ್ನು ನಕಲಿ ಮಾಡಿದ್ದಾರೆ ಎಂಬುದಾಗಿ ಒಂದು ವಾರದ ಹಿಂದೆ ಓರ್ವ ಪ್ರೊಫೆಸರ್ ಆರೋಪಿಸಿದ್ದರು ಎಂದು ಸಂತ್ರಸ್ತೆಯ ಸಹೋದರ ಹೇಳಿದ್ದಾರೆ. ‘‘ನನ್ನ ತಂದೆ ಸೋಮವಾರ ವಿಶ್ವವಿದ್ಯಾನಿಲಯಕ್ಕೆ ಭೇಟಿ ನೀಡಿ ಪ್ರೊಫೆಸರ್ ಮತ್ತು ವಿಭಾಗದ ಮುಖ್ಯಸ್ಥರೊಂದಿಗೆ ಮಾತನಾಡಿದ್ದಾರೆ. ಗುರುವಾರ ಬೆಳಗ್ಗೆ ಅವರು ನನ್ನ ಸಹೋದರಿಯೊಂದಿಗೂ ಮಾತನಾಡಿದ್ದಾರೆ. ಬಳಿಕ, ಸಹೋದರಿ ನಮ್ಮ ಸಂಪರ್ಕಕ್ಕೆ ಸಿಕ್ಕಿಲ್ಲ. ಬಳಿಕ, ಅವಳನ್ನು ತರಗತಿಯಲ್ಲಿ ಅವಮಾನಿಸಲಾಗಿದೆ ಎಂಬುದಾಗಿ ಆಕೆಯ ಸಹಪಾಠಿಗಳು ನಮಗೆ ತಿಳಿಸಿದರು. ನಕಲಿ ಮಾಡುವುದರಲ್ಲಿ ಆಕೆ ಪರಿಣತೆ ಎಂಬುದಾಗಿ ಶಿಕ್ಷಕರು ಹೇಳಿದರು ಮತ್ತು ಆಕೆಯನ್ನು ಅನುತ್ತೀರ್ಣಗೊಳಿಸುವ ಬೆದರಿಕೆಯನ್ನು ಒಡ್ಡಿದರು’’ ಎಂದು ಅವರು ಹೇಳಿದರು.

ಪ್ರತಿಭಟನೆಯ ಬಳಿಕ ಪೊಲೀಸರು ಐವರು ಸಿಬ್ಬಂದಿಯ ವಿರುದ್ಧ ಮೊಕದ್ದಮೆ ದಾಖಲಿಸಿದ್ದಾರೆ. ಇಬ್ಬರನ್ನು ವಿಚಾರಣೆಗಾಗಿ ವಶಕ್ಕೆ ಪಡೆಯಲಾಗಿದೆ ಎಂದು ಎಡಿಸಿಪಿ ತಿಳಿಸಿದರು.

ತಾಯಿಯಿಂದ ಪ್ರತಿಭಟನೆ :

ತನ್ನ ಮಗಳ ಸಾವಿಗೆ ನ್ಯಾಯ ಕೋರಿ ತಾಯಿ ಸುನೀತಾ ವಿಶ್ವವಿದ್ಯಾನಿಲಯದ ಆವರಣದಲ್ಲಿ ಗುರುವಾರ ರಾತ್ರಿಯಿಡೀ ಧರಣಿ ಕುಳಿತರು. ‘‘ಮುಖ್ಯಮಂತ್ರಿ ಯೋಗಿ ಮತ್ತು ಪ್ರಧಾನಿ ಮೋದಿಯನ್ನು ಕರೆಯಿರಿ. ನಾನಿಲ್ಲಿ ರಾತ್ರಿ 9 ಗಂಟೆಯಿಂದ ಧರಣಿ ಕುಳಿತಿದ್ದೇನೆ. ನನ್ನ ಮಗಳಿಗೆ ನ್ಯಾಯ ಸಿಗುವವರೆಗೆ ನಾನಿಲ್ಲಿಂದ ಕದಲುವುದಿಲ್ಲ. ನಿಮಗೆ ಏನು ಬೇಕೋ ಹಾಗೆ ಮಾಡಿ. ನನ್ನನು ಸುಡಿ, ಈ ಸ್ಥಳವನ್ನು ಮುಚ್ಚಿಹಾಕಿ. ನಾನಿಲ್ಲಿಂದ ಕದಲುವುದಿಲ್ಲ’’ ಎಂದು ಅವರು ಹೇಳಿದರು.

ದುಃಖತಪ್ತ ವಿದ್ಯಾರ್ಥಿಗಳು ಮತ್ತು ಕುಟುಂಬ ಸದಸ್ಯರ ಮೇಲೆ ಪೊಲೀಸರು ಬಲಪ್ರಯೋಗ ಮಾಡಿದ್ದಾರೆ ಎಂಬುದಾಗಿಯೂ ಅವರು ಆರೋಪಿಸಿದರು. ‘‘ಎಲ್ಲಾ ಬಿಡಿಎಸ್ ವಿದ್ಯಾರ್ಥಿಗಳು ಈಗ ಹೆದರಿದ್ದಾರೆ. ಅವರು ಮನೆಗೆ ಹೋಗಲು ಬಯಸಿದ್ದಾರೆ’’ ಎಂದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News