×
Ad

ಉತ್ತರಾಖಂಡ: ಡೂನ್ ಶಾಲಾ ಆವರಣದಲ್ಲಿದ್ದ ಪುರಾತನ ದರ್ಗಾ ಧ್ವಂಸಗೊಳಿಸಿದ ದುಷ್ಕರ್ಮಿಗಳು

Update: 2024-11-16 22:06 IST

PC : X 

ಡೆಹ್ರಾಡೂನ್: ಸಂಘಪರಿವಾರದ ಪ್ರತಿಭಟನೆಯ ಬಳಿಕ, ಇಲ್ಲಿನ ಪ್ರಸಿದ್ಧ ಡೂನ್ ವಸತಿ ಶಾಲೆಯ ಆವರಣದಲ್ಲಿದ್ದ ‘ಮಝರ್’ ಅನ್ನು ಗುಂಪೊಂದು ಧ್ವಂಸಗೊಳಿಸಿರುವುದಾಗಿ ತಿಳಿದುಬಂದಿದೆ.

ಈ ಪುರಾತನವಾದ ಕಟ್ಟಡವನ್ನು ಇತ್ತೀಚೆಗೆ ಡೂನ್ ಶಾಲೆಯ ಅಧಿಕಾರಿಗಳು ನವೀಕರಿಸಿದ್ದರು. ನಾಲ್ಕರಿಂದ ಐದು ಮಂದಿಯ ತಂಡವೊಂದು ಮಝರ್ ಕಟ್ಟಡವನ್ನು ಧ್ವಂಸಗೊಳಿಸುತ್ತಿರುವ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.

ಈ ಘಟನೆಯು ಎರಡು ದಿನಗಳ ಹಿಂದೆ ನಡೆದಿದ್ದಾಗಿ ಡೆಹ್ರಾಡೂನ್ ಜಿಲ್ಲಾ ಮ್ಯಾಜಿಸ್ಟ್ರೇಟ್ ಸವಿನ್ ಬನ್ಸಾಲ್ ಅವರು ಶನಿವಾರ ತಿಳಿಸಿದ್ದಾರೆ. ಮಝರ್ ಅನ್ನು ನೆಲಸಮಗೊಳಿಸಲು ಯಾವುದೇ ಆದೇಶವನ್ನು ನೀಡಿಲ್ಲ. ಆದರೆ ಮಝರ್‌ಗೆ ಸಂಬಂಧಿಸಿದ ವಿಷಯಗಳನ್ನು ದೃಢಪಡಿಸಿಕೊಳ್ಳಲು ಮತ್ತು ಕಾನೂನು ಸುವ್ಯವಸ್ಥೆಯನ್ನು ನೋಡಿಕೊಳ್ಳಲು ಹಿರಿಯ ವಿಭಾಗೀಯ ಮ್ಯಾಜಿಸ್ಟ್ರೇಟ್ ಅವರನ್ನು ಒಳಗೊಂಡ ತಂಡವನ್ನು ಸ್ಥಳಕ್ಕೆ ಕಳುಹಿಸಿಕೊಡಲಾಗಿತ್ತೆಂದು ಬನ್ಸಾಲ್ ಹೇಳಿದ್ದಾರೆ. ಘಟನೆಗೆ ಸಂಬಂಧಿಸಿ ವರದಿಯನ್ನು ಸಲ್ಲಿಸುವಂತೆ ತಾನು ತಂಡಕ್ಕೆ ತಿಳಿಸಿರುವುದಾಗಿ ಬನ್ಸಾಲ್ ಹೇಳಿದ್ದಾರೆ.

ಈ ಮಧ್ಯೆ ಹಿಂದುತ್ವ ಸಂಘಟನೆಯೊಂದರ ಮುಖಂಡ ಸ್ವಾಮಿ ದರ್ಶನ್ ಭಾರ್ತಿ ಅವರು ಹೇಳಿಕೆಯೊಂದನ್ನು ನೀಡಿ, ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಹಾಗೂ ಇತರ ಅಧಿಕಾರಿಗಳನ್ನು ಭೇಟಿ ಮಾಡಿ ಡೂನ್ ಶಾಲೆಯ ಆವರಣದಲ್ಲಿರುವ ಕಟ್ಟಡವನ್ನು ತೆರವುಗೊಳಿಸಬೇಕೆಂದು ಕೋರಿರುವುದಾಗಿ ಹೇಳಿದರು. ಮಝರ್ ಅನ್ನು ಯಾರೇ ಧ್ವಂಸಗೊಳಿಸಿದ್ದರೂ ಅದನ್ನು ತಾನು ಸ್ವಾಗತಿಸುವುದಾಗಿ ಅವರು ಹೇಳಿದ್ದಾರೆ.

ಭಾರ್ತಿ ಅವರು ಉತ್ತರಾಖಂಡ ರಕ್ಷಾ ಅಭಿಯಾನದ ಸಂಸ್ಥಾಪಕರಾಗಿದ್ದಾರೆ.

ಈ ಮಧ್ಯೆ ಉತ್ತರಾಖಂಡ ವಕ್ಫ್ ಮಂಡಳಿಯು ಹೇಳಿಕೆಯೊಂದನ್ನು ನೀಡಿ, ಮಝರ್ ಇರುವ ಸ್ಥಳವು ಈಗ ಶಾಲೆಯ ಭಾಗದಲ್ಲಿದ್ದರೂ, ಅದು ಒಂದು ಕಾಲದಲ್ಲಿ ತನ್ನ ಆಸ್ತಿಯಾಗಿತ್ತೆಂದು ಹೇಳಿದೆ.

‘‘ನಮ್ಮಲ್ಲಿರುವ ದಾಖಲೆಗಳ ಪ್ರಕಾರ, ಉಲ್ಲೇಖಿಸಿದ ಪ್ರದೇಶದಲ್ಲಿರುವ 57 ಎಕರೆ ಜಮೀನು ವಕ್ಫ್‌ಗೆ ಸೇರಿದ್ದಾಗಿತ್ತು. ಆದರೆ ಅದರ ಪ್ರಸಕ್ತ ಸ್ಥಿತಿಗತಿಯೇನೆಂದು ತಿಳಿದಿಲ್ಲ’’ ಎಂಬುದಾಗಿ ಹೆಸರು ವಕ್ಫ್ ಮಂಡಳಿಯ ಬಹಿರಂಗಪಡಿಸಲಿಚ್ಛಿಸದ ಅಧಿಕಾರಿಯೊಬ್ಬರು ಹೇಳಿದ್ದಾರೆ. ವಕ್ಫ್ ಮಂಡಳಿ ಈಗಲೂ ಕೂಡಾ ಶಾಲೆಯ ಸಮೀಪದಲ್ಲಿಯೇ ಒಂದು ದೊಡ್ಡ ಜಮೀನನ್ನು ಹೊಂದಿದೆ ಎಂದವರು ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News