ಉತ್ತರಕಾಶಿ ಪ್ರವಾಹ: ಇನ್ನೂ 43 ಮಂದಿ ನಾಪತ್ತೆ
PC | PTI
ಡೆಹ್ರಾಡೂನ್: ಉತ್ತರಕಾಶಿಯಲ್ಲಿ ಆಗಸ್ಟ್ 5ರಂದು ಸಂಭವಿಸಿದ ದಿಢೀರ್ ಪ್ರವಾಹದಲ್ಲಿ ನಾಪತ್ತೆಯಾದವರ ಪೈಕಿ ಇನ್ನೂ 43 ಮಂದಿ ಪತ್ತೆಯಾಗಿಲ್ಲ ಎಂದು ಉತ್ತರಾಖಂಡ ಸರ್ಕಾರ ಸೋಮವಾರ ಅಧಿಕೃತವಾಗಿ ಪ್ರಕಟಿಸಿದೆ. ಜತೆಗೆ ಆಗಸ್ಟ್ 15ರವರೆಗೆ ಉತ್ತರಕಾಶಿ ಮತ್ತು ಸುತ್ತಮುತ್ತಲ ಜಿಲ್ಲೆಗಳಲ್ಲಿ ವ್ಯಾಪಕ ಮಳೆಯಾಗುವ ನಿರೀಕ್ಷೆ ಇದ್ದು, ಇದು ಭೂಕುಸಿತ ಮತ್ತು ಪ್ರವಾಹಕ್ಕೆ ಕಾರಣವಾಗುವ ಸಾಧ್ಯತೆ ಇದೆ ಎಂದು ಮುನ್ನೆಚ್ಚರಿಕೆ ನೀಡಿದೆ. ಪರಿಹಾರ ಮತ್ತು ಶೋಧ ಕಾರ್ಯಾಚರಣೆ ವಿಳಂಬಕ್ಕೂ ಇದು ಕಾರಣವಾಗಲಿದೆ.
"ಅವಶೇಷಗಳಡಿ ಸಿಲುಕಿ ಹಾಕಿಕೊಂಡಿರುವವರನ್ನು ಪತ್ತೆ ಮಾಡುವುದು ಜಿಲ್ಲಾಡಳಿತದ ಪ್ರಥಮ ಆದ್ಯತೆ. ರಾಷ್ಟ್ರೀಯ ವಿಪತ್ತು ಸ್ಪಂದನೆ ಪಡೆ, ರಾಜ್ಯ ವಿಪತ್ತು ಸ್ಪಂದನಾ ಪಡೆ, ಇಂಡೋ ಟಿಬೇಟಿಯನ್ ಬಾರ್ಡರ್ ಪೊಲೀಸ್, ಭೂಗರ್ಭಶಾಸ್ತ್ರಜ್ಞರ ತಂಡಗಳು ವಿಕೋಪ ವಲಯದಲ್ಲಿ ಜಂಟಿಯಾಗಿ ಕಾರ್ಯ ನಿರ್ವಹಿಸುತ್ತಿವೆ; ಆದರೆ ರಸ್ತೆಗಳು ಕೊಚ್ಚಿಕೊಂಡು ಹೋಗಿರುವುದು ಮತ್ತು ಇಳಿಜಾರುಗಳು ಸವಾಲುದಾಯಕವಾಗಿ ಪರಿಣಮಿಸಿವೆ" ಎಂದು ಗರ್ವಾಲ್ ಜಿಲ್ಲಾಧಿಕಾರಿ ವಿನಯಶಂಕರ ಪಾಂಡೆ ಹೇಳಿದ್ದಾರೆ.
"ನಾಪತ್ತೆಯಾಗಿರುವವರಲ್ಲಿ ಒಂಬತ್ತು ಮಂದಿ ಸೇನಾ ಸಿಬ್ಬಂದಿ, ಎಂಟು ಮಂದಿ ಧರಾಲಿ ಸ್ಥಳೀಯರು, ಐದು ಮಂದಿ ಅಕ್ಕಪಕ್ಕದ ಗ್ರಾಮದವರು ಮತ್ತು ತೆಹ್ರಿ, ಬಿಹಾರ, ಉತ್ತರಪ್ರದೇಶ ಮತ್ತು ನೇಪಾಳದ ಮಂದಿ ಸೇರಿದ್ದಾರೆ. ನಾಪತ್ತೆಯಾಗಿರುವ 29 ಮಂದಿ ನೇಪಾಳಿ ಕಾರ್ಮಿಕರ ಪೈಕಿ ಐದು ಮಂದಿಯ ಸಂಪರ್ಕ ಪುನಃಸ್ಥಾಪಿಸಲಾಗಿದೆ. ಆದರೆ ಉಳಿದವರ ಪತ್ತೆ ಆಗಿಲ್ಲ. ಇದುವರೆಗೆ ಇಬ್ಬರ ಮೃತದೇಹಗಳು ಸಿಕ್ಕಿವೆ" ಎಂದು ವಿವರಿಸಿದ್ದಾರೆ.
ಪರಿಹಾರ ವಾಹನಗಳ ನಿಯತ ಸಂಚಾರದ ಜತೆಗೆ ಸುಮಾರು 300 ಮಂದಿ ಧರಾಲಿಯಲ್ಲಿ ಉಳಿದಿದ್ದು, ಇತರ ಕುಟುಂಬಗಳನ್ನು ಉತ್ತರಕಾಶಿ ಅಥವಾ ಡೆಹ್ರಾಡೂನ್ಗೆ ಸ್ಥಳಾಂತರಿಸಲಾಗಿದೆ. ಇದುವರೆಗೆ ಸಿಕ್ಕಿಹಾಕಿಕೊಂಡಿರುವ ಪ್ರವಾಸಿಗಳು ಮತ್ತು ಜೀವನೋಪಾಯವಿಲ್ಲದ ಸ್ಥಳೀಯರು ಸೇರಿ 1278 ಮಂದಿಯನ್ನು ಸ್ಥಳಾಂತರಿಸಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.