ಉತ್ತರಾಖಂಡ: ಹಿಮ ಪರ್ವತದಲ್ಲಿ ಅಕ್ರಮ ಮಂದಿರ ನಿರ್ಮಿಸಿದ 'ದೇವಮಾನವ'
ಅನಧಿಕೃತ ಮಂದಿರ PC: x.com/Enraged_Indian
ಬಗೇಶ್ವರ: ಸ್ವಯಂಘೋಷಿತ ದೇವಮಾನವ ಬಾಬಾ ಯೋಗಿ ಚೈತನ್ಯ ಆಕಾಶ್, ಸಮುದ್ರ ಮಟ್ಟಕ್ಕಿಂತ 5000 ಮೀಟರ್ ಅಥವಾ 15600 ಅಡಿ ಎತ್ತರದಲ್ಲಿರುವ ಉತ್ತರಾಖಂಡ ಬಗೇಶ್ವರ ಹಿಮಪರ್ವತದ ಸರ್ಕಾರಿ ಜಮೀನಿನಲ್ಲಿ ಸದ್ದಿಲ್ಲದೇ ಅನಧಿಕೃತ ಮಂದಿರ ನಿರ್ಮಾಣ ಮಾಡಿರುವುದು ಬೆಳಕಿಗೆ ಬಂದಿದೆ.
ದೇವರಿಂದ ಪ್ರೇರಣೆ ಪಡೆದು ಈ ಪರಿಸರ ಸೂಕ್ಷ್ಮ ಪದೇಶದಲ್ಲಿ ಅನಧಿಕೃತವಾಗಿ ಮಂದಿರ ನಿರ್ಮಿಸಿದ್ದಾಗಿ ತಿಳಿದುಬಂದಿದೆ. "ಈ ಯೋಜನೆಗೆ ಬೆಂಬಲ ನೀಡುವಂತೆ ಬಾಬಾ ಗ್ರಾಮಸ್ಥರ ಮನವೊಲಿಸಿದರು. ದೇವಿ ಈ ಸ್ವಯಂಘೋಷಿತ ದೇವಮಾನವನಿಗೆ ಕನಸಿನಲ್ಲಿ ಬಂದು ದೇವಿಕುಂಡದಲ್ಲಿ ಮಂದಿರ ನಿರ್ಮಿಸುವಂತೆ ಸೂಚಿಸಿದ್ದಾಗಿ ಬಾಬಾ ತಿಳಿಸಿದ್ದಾರೆ" ಎಂದು ಗ್ರಾಮಸ್ಥರಾದ ಮಹೇಂದ್ರ ಸಿಂಗ್ ಧಾಮಿ ವಿವರಿಸಿದ್ದಾರೆ.
ಸ್ಥಳೀಯರಿಗೆ ಮತ್ತು ಯಾತ್ರಾರ್ಥಿಗಳಿಗೆ ಅತ್ಯಂತ ಪವಿತ್ರ ಎನಿಸಿರುವ ದೇವಿಕುಂಡವನ್ನು ಈ ವ್ಯಕ್ತಿ ಈಜುಗೊಳವಾಗಿ ಪರಿವರ್ತಿಸಿದ್ದಾಗಿ ತಿಳಿದು ಬಂದಿದೆ. ಇಲ್ಲಿ ಪ್ರತಿದಿನ ಈತ ಸ್ನಾನ ಮಾಡುತ್ತಿದ್ದು, ಈ ಮೂಲಕ ಕುಂಡವನ್ನು ಅಪವಿತ್ರಗೊಳಿಸುತ್ತಿದ್ದಾನೆ. ಇದು ನಿಸ್ಸಂಶಯ ಎಂದು ಅವರು ಹೇಳಿದ್ದಾರೆ.
"ಇದು ಖಂಡಿತವಾಗಿಯೂ ದೇವನಿಂದನೆ. ಹಲವು ಶತಮಾನಗಳಿಂದ, ನಮ್ಮ ಭಕ್ತರು ಈ ಕುಂಡಕ್ಕೆ ಪ್ರತಿ 12 ವರ್ಷಗಳಿಗೊಮ್ಮೆ ನಡೆಯುವ ನಂದರಾಜ್ ಯಾತ್ರೆಯ ವೇಳೆ ಭೇಟಿ ನೀಡುತ್ತಿದ್ದರು. ಇದೀಗ ಬಾಬಾ ಎನಿಸಿಕೊಂಡ ಈ ವ್ಯಕ್ತಿ ಗ್ರಾಮಸ್ಥರ ದಿಕ್ಕುತಪ್ಪಿಸಿ ಸಂಪ್ರದಾಯಕ್ಕೆ ವಿರುದ್ಧವಾಗಿ ಈ ದೇವಾಲಯ ನಿರ್ಮಿಸಿದ್ದಾರೆ" ಎಂದು ಮತ್ತೊಬ್ಬ ಗ್ರಾಮಸ್ಥ ಪ್ರಕಾಶ್ ಕುಮಾರ್ ದೂರಿದ್ದಾರೆ.
ಇದೀಗ ಸ್ಥಳೀಯ ಆಡಳಿತ ಈ ಅಕ್ರಮ ನಿರ್ಮಾಣದ ಬಗ್ಗೆ ತನಿಖೆ ಆರಂಭಿಸಿದೆ. ಕಾಪ್ ಕಾಟ್ ಉಪವಿಭಾಗೀಯ ಮ್ಯಾಜಿಸ್ಟ್ರೇಟ್ ಅನುರಾಗ್ ಆರ್ಯ ಈ ಬಗ್ಗೆ ಮಾಹಿತಿ ನೀಡಿ, ಅರಣ್ಯ ಇಲಾಖೆ, ಪೊಲೀಸ್ ಹಾಗೂ ಕಂದಾಯ ಅಧಿಕಾರಿಗಳು ಅಲ್ಲಿಗೆ ಭೇಟಿ ನೀಡಿ, ಅನಧಿಕೃತ ನಿರ್ಮಾಣ ತೆರವುಗೊಳಿಸಲಿದ್ದಾರೆ ಹಾಗೂ ಯೋಗಿ ಚೈತನ್ಯ ವಿರುದ್ಧ ಕ್ರಮ ಕೈಗೊಳ್ಳಲಿದ್ದಾರೆ ಎಂದು ಸ್ಪಷ್ಟಪಡಿಸಿದ್ದಾರೆ.