×
Ad

ವಾರಣಾಸಿ ಲೋಕಸಭಾ ಕ್ಷೇತ್ರ | 2014ರಲ್ಲಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಸ್ಪರ್ಧಿಸಿದ್ದವರ ಸಂಖ್ಯೆ 41, ಈ ಬಾರಿ ಕೇವಲ 6!

Update: 2024-05-27 22:07 IST

ನರೇಂದ್ರ ಮೋದಿ | PTI  

ವಾರಣಾಸಿ: 2014ರಲ್ಲಿ ವಾರಣಾಸಿ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಭರ್ಜರಿ ಗೆಲುವು ಸಾಧಿಸಿದ್ದ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಆಗ ಬರೋಬ್ಬರಿ 41 ಮಂದಿ ಸ್ಪರ್ಧಿಸಿದ್ದರು. ಈ ಪೈಕಿ ಪಕ್ಷೇತರ ಅಭ್ಯರ್ಥಿಗಳ ಸಂಖ್ಯೆಯೇ 19ರಷ್ಟಿತ್ತು. ಆದರೆ, ಈ ಬಾರಿ ಪ್ರಧಾನಿ ನರೇಂದ್ರ ಮೋದಿಯವರ ವಿರುದ್ಧ ಕಾಂಗ್ರೆಸ್ ರಾಜ್ಯಾಧ್ಯಕ್ಷ ಅಜಯ್ ರಾಯ್ ಸೇರಿದಂತೆ ಕೇವಲ ಆರು ಮಂದಿ ಮಾತ್ರ ಸ್ಪರ್ಧಿಸಿದ್ದಾರೆ.

2014ರಲ್ಲಿ ಪ್ರಧಾನಿ ನರೇಂದ್ರ ಮೋದಿ ವಾರಣಾಸಿ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದಾಗ, ಆಗ ತಮ್ಮ ಪ್ರತಿಸ್ಪರ್ಧಿಯಾಗಿದ್ದ ಆಪ್ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್‌ರ ವಿರುದ್ಧ 3.72 ಲಕ್ಷ ಮತಗಳ ಅಂತರದಿಂದ ಜಯಭೇರಿ ಬಾರಿಸಿದ್ದರು. ಆ ಬಾರಿ ಅವರು ಗಳಿಸಿದ್ದ ಶೇಕಡಾವಾರು ಮತ ಪ್ರಮಾಣ ಶೇ. 56.37ರಷ್ಟಿತ್ತು.

2019ರಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ವಿರುದ್ಧ ಸ್ಪರ್ಧಿಸಿದ್ದ ಅಭ್ಯರ್ಥಿಗಳ ಸಂಖ್ಯೆ 26 ಆಗಿತ್ತು. ಈ ಪೈಕಿ ಎಂಟು ಮಂದಿ ಪಕ್ಷೇತರ ಅಭ್ಯರ್ಥಿಗಳು ಸ್ಪರ್ಧಿಸಿದ್ದರು. ಆ ಚುನಾವಣೆಯಲ್ಲಿ ಈ ಹಿಂದಿನ ಚುನಾವಣೆಗಿಂತ ಅತ್ಯಧಿಕ ಅಂತರದಲ್ಲಿ ಜಯಭೇರಿ ಬಾರಿಸಿದ್ದ ಪ್ರಧಾನಿ ಮೋದಿ, ತಮ್ಮ ಸಮೀಪದ ಪ್ರತಿಸ್ಪರ್ಧಿ ಸಮಾಜವಾದಿ ಪಕ್ಷದ ಶಾಲಿನಿ ಯಾದವ್ ವಿರುದ್ಧ 4.59 ಲಕ್ಷ ಮತಗಳ ಅಂತರದಲ್ಲಿ ಗೆಲುವಿನ ನಗೆ ಬೀರಿದ್ದರು. ಆ ಬಾರಿ ಅವರು ಪಡೆದಿದ್ದ ಶೇಕಡಾವಾರು ಮತ ಪ್ರಮಾಣ 63.6ಕ್ಕೆ ಏರಿಕೆಯಾಗಿತ್ತು.

ಈ ಬಾರಿಯ ಚುನಾವಣೆಯಲ್ಲಿ ಆರಂಭದಲ್ಲಿ ಒಟ್ಟು 41 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದರು‌. ಈ ಪೈಕಿ ಓರ್ವ ಅಭ್ಯರ್ಥಿ ಸ್ವಯಂಪ್ರೇರಿತವಾಗಿ ತಮ್ಮ ನಾಮಪತ್ರವನ್ನು ಹಿಂಪಡೆದಿದ್ದರು. ಕೊನೆಗೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಅಜಯ್ ರಾಯ್ ಸೇರಿದಂತೆ ಒಟ್ಟು ಏಳು ಮಂದಿ ಅಭ್ಯರ್ಥಿಗಳು ಮಾತ್ರ ಚುನಾವಣಾ ಕಣದಲ್ಲಿ ಉಳಿದುಕೊಂಡಿದ್ದಾರೆ.

1991ರಿಂದ ಇಲ್ಲಿಯವರೆಗೆ ವಾರಣಾಸಿ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಏಳು ಬಾರಿ ಗೆಲುವು ಸಾಧಿಸಿದೆ. 2004ರಲ್ಲಿ ಮಾತ್ರ ಕಾಂಗ್ರೆಸ್ ಅಭ್ಯರ್ಥಿ ರಾಜೇಶ್ ಕುಮಾರ್ ಮಿಶ್ರಾ ಗೆಲುವು ಸಾಧಿಸಿದ್ದರು. ಪ್ರಧಾನಿ ನರೇಂದ್ರ ಮೋದಿ ಈ ಕ್ಷೇತ್ರದಿಂದ ಸ್ಪರ್ಧಿಸುವುದಕ್ಕೂ ಮುನ್ನ ಈ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದದ್ದು ಬಿಜೆಪಿ ಹಿರಿಯ ನಾಯಕ ಮುರಳಿ ಮನೋಹರ್ ಜೋಶಿ.

ವಾರಣಾಸಿ ಲೋಕಸಭಾ ಕ್ಷೇತ್ರದಲ್ಲಿ ಮೇಲ್ಜಾತಿಗಳಾದ ಬ್ರಾಹ್ಮಣರು, ಭೂಮಿಹಾರ್‌ಗಳು ಹಾಗೂ ಜೈಸ್ವಾಲ್‌ ಮತದಾರರೇ ಅತ್ಯಧಿಕ ಸಂಖ್ಯೆಯಲ್ಲಿದ್ದಾರೆ. ಈ ಸಮುದಾಯಗಳ ನಂತರ ಮುಸ್ಲಿಮರು ಇತರೆ ಹಿಂದುಳಿದ ವರ್ಗಗಳ ಸಮುದಾಯಗಳಿವೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News