×
Ad

ಬನಾರಸ್ ವಿವಿಯಲ್ಲಿ ಹಿಂಸಾಚಾರ; ವಿದ್ಯಾರ್ಥಿಗಳು, ಮೇಲ್ವಿಚಾರಕ ಸಿಬ್ಬಂದಿ ನಡುವೆ ಘರ್ಷಣೆ

ಕಲ್ಲು ತೂರಾಟದಲ್ಲಿ ಪೊಲೀಸರು ಸಹಿತ ಹಲವರಿಗೆ ಗಾಯ

Update: 2025-12-03 20:55 IST

ಬಿರ್ಲಾ ಸಿ ಹಾಸ್ಟೆಲ್ | Photo Credit : X  

ವಾರಣಾಸಿ,ಡಿ.3:ಇಲ್ಲಿನ ಬನಾರಸ್ ವಿಶ್ವವಿದ್ಯಾನಿಲಯದ ಬಿರ್ಲಾ ಸಿ ಹಾಸ್ಟೆಲ್ ಹಾಗೂ ವಿವಿಯ ಮೇಲ್ವಿಚಾರಕ ಸಿಬ್ಬಂದಿಯ ನಡುವೆ ಮಂಗಳವಾರ ತಡರಾತ್ರಿ ಹಿಂಸಾತ್ಮಕ ಘರ್ಷಣೆ ನಡೆದಿದ್ದು, ಎರಡೂ ಗುಂಪುಗಳು ಪರಸ್ಪರ ಕಲ್ಲೆಸೆತದಲ್ಲಿ ತೊಡಗಿದ್ದರಿಂದ ಹಲವರು ಗಾಯಗೊಂಡಿದ್ದಾರೆ.

ಘರ್ಷಣೆಯನ್ನು ನಿಯಂತ್ರಿಸಲು ಭಾರೀ ಸಂಖ್ಯೆಯ ಪೊಲೀಸರು ವಿವಿ ಆವರಣವನ್ನು ಪ್ರವೇಶಿಸಿದ್ದು, ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದೆ.

ಗಲಭೆಗೆ ಸಂಬಂಧಿಸಿ ಬನಾರಸ್ ವಿವಿಯ ಮೇಲ್ವಿಚಾರಕ ಸಿಬ್ಬಂದಿಯು, ಅಂಕಿತ್‌ಪಾಲ್ ಹಾಗೂ ಅಂಕಿತ್ ಸಿಂಗ್ ಎಂಬ ಇಬ್ಬರು ವ್ಯಕ್ತಿಗಳನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದು, ಘಟನೆಗೆ ಸಂಬಂಧಿಸಿ ದೂರು ನೀಡಿದ್ದಾರೆ.

ಬಿಎಚ್‌ಯು ಕ್ಯಾಂಪಸ್ ಹಾಸ್ಟೆಲ್ ರೋಡ್ ಪ್ರದೇಶದಲ್ಲಿ ಪೊಲೀಸರು ಹಾಗೂ ಪ್ರಾಂತೀಯ ಸಶಸ್ತ್ರ ದಳ (ಪಿಎಸಿ) ಸಿಬ್ಬಂದಿಯನ್ನು ನಿಯೋಜಿಸಲಾಗಿದ್ದು, ಅಧಿಕಾರಿಗಳು ಪರಿಸ್ಥಿತಿಯ ಮೇಲೆ ನಿಗಾವಿರಿಸಿದ್ದಾರೆ.

ಮಂಗಳವಾರ ಮಧ್ಯರಾತ್ರಿ ರಾಜಾರಾಮ್ ಹಾಸ್ಟೆಲ್ ಸಮೀಪ ಬಿರ್ಲಾ ಸಿ ಹಾಸ್ಟೆಲ್‌ನಲ್ಲಿರುವ ವಿದ್ಯಾರ್ಥಿಯೊಬ್ಬನಿಗೆ ಕಾರೊಂದು ಡಿಕ್ಕಿ ಹೊಡೆದಿತ್ತು. ಹಾಸ್ಟೆಲ್‌ ನ ನಿವಾಸಿಗಳು ಕೂಡಲೇ ಈ ಬಗ್ಗೆ ದೂರು ನೀಡಲು ಮೇಲ್ವಿಚಾರಕ ಸಿಬ್ಬಂದಿಯ ಕಚೇರಿಗೆ ತೆರಳಿದ್ದರು. ಆಗ ವಿದ್ಯಾರ್ಥಿಗಳು ಹಾಗೂ ಕಚೇರಿಯ ಭದ್ರತಾ ಸಿಬ್ಬಂದಿ ನಡುವೆ ವಾಗ್ವಾದವುಂಟಾಗಿ ಹೊಡೆದಾಟಕ್ಕೆ ತಿರುಗಿತ್ತು. ಬಳಿಕ ಇತ್ತಂಡಗಳೂ ಘರ್ಷಣೆಗಿಳಿದು, ಪರಸ್ಪರ ಕಲ್ಲುತೂರಾಟ ನಡೆಸಿದ್ದವು.

ಪರಿಸ್ಥಿತಿ ಕೈಮೀರುತ್ತಿರುವುದನ್ನು ಗಮನಿಸಿದ ವಿವಿ ಆಡಳಿತವರ್ಗವು ಪೊಲೀಸರನ್ನು ಕರೆಸಿತ್ತು. ಕೂಡಲೇ ಐದು ಪೊಲೀಸ್‌ ಠಾಣೆಗಳ ಪೊಲೀಸರು ಹಾಗೂ ಪಿಎಸಿ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿತ್ತು. ಪರಿಸ್ಥಿತಿಯನ್ನು ನಿಯಂತ್ರಿಸುವುದಕ್ಕಾಗಿ ವಿದ್ಯಾರ್ಥಿಗಳನ್ನು ಹಾಸ್ಟೆಲ್‌ ಗೆ ಅಟ್ಟಲಾಯಿತು ಹಾಗೂ ಹಾಸ್ಟೆಲ್‌ನ ದಾರಿಯನ್ನು ಸಂಪೂರ್ಣವಾಗಿ ಪೊಲೀಸರು ತಮ್ಮ ನಿಯಂತ್ರಣಕ್ಕೆ ತೆಗೆದುಕೊಂಡರು.

ಎರಡು ತಾಸುಗಳ ಘರ್ಷಣೆಯ ಬಳಿ ಪರಿಸ್ಥಿತಿ ಸಂಪೂರ್ಣವಾಗಿ ತಹಬದಿಗೆ ಬಂದಿರುವುದಾಗಿ ಎಸಿಪಿ ಬೇಲ್‌ಪುರ ಗೌರವ್ ಕುಮಾರ್ ತಿಳಿಸಿದ್ದಾರೆ. ವಿದ್ಯಾರ್ಥಿಗಳು, ಮೇಲ್ವಿಚಾರಕ ಮಂಡಳಿಯ ಸಿಬ್ಬಂದಿ ಹಾಗೂ ಕೆಲವು ಪೊಲೀಸರು ಸೇರಿದಂತೆ ಹಲವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಗಲಭೆಗೆ ಸಂಬಂಧಿಸಿ ಬಂಧಿತನಾಗಿರುವ ಪಾಲ್ ಈ ಹಿಂದೆಯೂ ಪೊಲೀಸರಿಂದ ಸೆರೆಹಿಡಿಯಲ್ಪಟ್ಟಿದ್ದು, ಹಿಂಸಾಚಾರದಲ್ಲಿ ಆತನ ಪಾತ್ರದ ಬಗ್ಗೆಯೂ ಅವರು ತನಿಖೆ ನಡೆಸುತ್ತಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News