ವಕ್ಫ್ ತಿದ್ದುಪಡಿ ಕಾಯ್ದೆ | ಗುಜರಾತ್ ಪ್ರತಿನಿಧಿಗಳು ಮತ್ತಿತರರನ್ನು ಭೇಟಿಯಾದ ಜಂಟಿ ಸದನ ಸಮಿತಿ
Update: 2024-09-27 21:05 IST
PC : PTI
ಅಹಮದಾಬಾದ್ : ವಕ್ಫ್ ತಿದ್ದುಪಡಿ ಕಾಯ್ದೆ ಕುರಿತು ರಾಷ್ಟ್ರವ್ಯಾಪಿ ಸಮಾಲೋಚನೆ ನಡೆಸುವ ಭಾಗವಾಗಿ ಶುಕ್ರವಾರ ಜಂಟಿ ಸದನ ಸಮಿತಿಯು ಗುಜರಾತ್ ಪ್ರತಿನಿಧಿಗಳು ಹಾಗೂ ಮತ್ತಿತರರನ್ನು ಭೇಟಿ ಮಾಡಿತು.
ಹೋಟೆಲೊಂದರಲ್ಲಿ ಗುಜರಾತ್ ಪ್ರತಿನಿಧಿಗಳನ್ನು ಭೇಟಿಯಾದ ಜಂಟಿ ಸದನ ಸಮಿತಿ ಎದುರು ಗುಜರಾತ್‌ನ ಗೃಹ ಖಾತೆಯ ರಾಜ್ಯ ಸಚಿವ ಹರ್ಷ್ ಸಾಂಘವಿ ಗುಜರಾತ್ ಸರಕಾರದ ಸಲಹೆಗಳನ್ನು ಮಂಡಿಸಿದರು.
ಸಭೆಯ ಕುರಿತ ವಿವರಗಳನ್ನು ಬಹಿರಂಗಪಡಿಸಲು ಹರ್ಷ್ ಸಾಂಘವಿ ನಿರಾಕರಿಸಿದರೂ, ರಾಜ್ಯ ಸರಕಾರ ಈಗಾಗಲೇ ವಕ್ಫ್ ಕಾಯ್ದೆಗೆ ತಿದ್ದುಪಡಿ ತರಲು ಮುಂದಾಗಿರುವ ಕೇಂದ್ರ ಸರಕಾರದ ನಡೆಯನ್ನು ಪ್ರಶಂಸಿಸಿದೆ ಎಂದು ಹೇಳಿದರು.
ಗುಜರಾತ್ ಬಾರ್ ಕೌನ್ಸಿಲ್ ಪ್ರತಿನಿಧಿಗಳು, ಅಲ್ಪಸಂಖ್ಯಾತ ಸಮನ್ವಯ ಸಮಿತಿಯ ಪ್ರತಿನಿಧಿಗಳನ್ನಲ್ಲದೆ, ಕಾಂಗ್ರೆಸ್ ಶಾಸಕ ಮತ್ತು ವಕ್ಫ್ ಮಂಡಳಿ ಸದಸ್ಯ ಇಮ್ರಾನ್ ಖೇಡಾವಾಲಾ ನೇತೃತ್ವದ ನಿಯೋಗವನ್ನೂ ಜಂಟಿ ಸದನ ಸಮಿತಿ ಭೇಟಿ ಮಾಡಿತು.