ಪಶ್ಚಿಮ ಬಂಗಾಳ | ಅತ್ಯಾಚಾರ, ಗರ್ಭಪಾತ, ಬೆದರಿಕೆ; ಪದ್ಮಶ್ರೀ ಪುರಸ್ಕೃತ ಸಂತನ ವಿರುದ್ಧ ಮಹಿಳೆ ಆರೋಪ
ಕಾರ್ತಿಕ ಮಹಾರಾಜ್ | PC : NDTV
ಕೋಲ್ಕತಾ: ಕಾರ್ತಿಕ ಮಹಾರಾಜ್ ಎಂದೇ ಜನಪ್ರಿಯರಾಗಿರುವ ಪದ್ಮಶ್ರೀ ಪುರಸ್ಕೃತ ಸ್ವಾಮಿ ಪ್ರದೀಪ್ತಾನಂದ ಶಾಲೆಯೊಂದರಲ್ಲಿ ತನಗೆ ಕೆಲಸ ಕೊಡಿಸುವ ನೆಪದಲ್ಲಿ 2013ರಿಂದ ತನ್ನ ಮೇಲೆ ಹಲವಾರು ಸಲ ಅತ್ಯಾಚಾರ ನಡೆಸಿದ್ದಾರೆ ಎಂದು ಪಶ್ಚಿಮ ಬಂಗಾಳದ ಮಹಿಳೆಯೋರ್ವಳು ಆರೋಪಿಸಿದ್ದಾಳೆ.
ಆದರೆ, ರಾಜ್ಯದ ಮುರ್ಷಿದಾಬಾದ್ ಜಿಲ್ಲೆಯ ಬೆಲ್ದಂಗಾದಲ್ಲಿಯ ಭಾರತ ಸೇವಾಶ್ರಮ ಸಂಘದ ಶಾಖೆಯೊಂದಿಗೆ ಗುರುತಿಸಿಕೊಂಡಿರವ ಮಹಾರಾಜ್, ಇದು ತನ್ನ ಹೆಸರು ಮತ್ತು ಖ್ಯಾತಿಗೆ ಮಸಿ ಬಳಿಯಲು ಪಿತೂರಿಯಾಗಿದೆ ಎಂದು ಆರೋಪಿಸಿದ್ದಾರೆ. ಮಹಾರಾಜ್ ಈ ವರ್ಷ ಪದ್ಮಶ್ರೀ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಈ ವಾರದ ಆರಂಭದಲ್ಲಿ ನವಗ್ರಾಮ ಪೋಲಿಸ್ ಠಾಣೆಯಲ್ಲಿ ದಾಖಲಿಸಿರುವ ತನ್ನ ದೂರಿನಲ್ಲಿ ಮಹಿಳೆ, ಡಿಸೆಂಬರ್ 2012ರಲ್ಲಿ ತಾವಿಬ್ಬರೂ ಭೇಟಿಯಾಗಿದ್ದಾಗ ಆಶ್ರಮಕ್ಕೆ ಸೇರಿದ ಚನಕ್ ಆದಿವಾಸಿ ಆವಾಸಿಕ ಬಾಲಿಕಾ ವಿದ್ಯಾಲಯದಲ್ಲಿ ತನಗೆ ಉದ್ಯೋಗ ಕೊಡಿಸುವುದಾಗಿ ಮಹಾರಾಜ್ ಭರವಸೆ ನೀಡಿದ್ದರು. ಜನವರಿ 2013ರಲ್ಲಿ ಶೀಘ್ರ ನೇಮಕ ಮಾಡಿಕೊಳ್ಳುವ ಭರವಸೆಯೊಂದಿಗೆ ತನಗೆ ಶಾಲೆಯ ಹಾಸ್ಟೆಲ್ ನಲ್ಲಿ ವಸತಿ ಸೌಲಭ್ಯವನ್ನೂ ಒದಗಿಸಲಾಗಿತ್ತು. ಆದರೆ ಮಹಾರಾಜ್ ಹೆಚ್ಚುಕಡಿಮೆ ಪ್ರತಿದಿನ ಆವರಣದ ಐದನೇ ಅಂತಸ್ತಿನಲ್ಲಿಯ ಕೊಠಡಿಗೆ ತನ್ನನ್ನು ಕರೆದೊಯ್ದು ಅತ್ಯಾಚಾರ ನಡೆಸುತ್ತಿದ್ದರು ಎಂದು ಆರೋಪಿಸಿದ್ದಾಳೆ.
‘ಒಮ್ಮೆ ನನ್ನನ್ನು ತನ್ನ ಆಶ್ರಮದಲ್ಲಿ ಐದು ದಿನಗಳ ಕಾಲ ಉಳಿಸಿಕೊಂಡಿದ್ದ ಮಹಾರಾಜ್ ಹಲವಾರು ಸಲ ನನ್ನ ಮೇಲೆ ಅತ್ಯಾಚಾರವೆಸಗಿದ್ದರು. ಬಳಿಕ ನನಗೆ ಮನೆಗೆ ಮರಳುವಂತೆ ಸೂಚಿಸಿದ್ದ ಅವರು,ಪ್ರತಿ ತಿಂಗಳು ನನಗೆ ಹಣವನ್ನು ಕಳುಹಿಸುವ ಭರವಸೆಯನ್ನೂ ನೀಡಿದ್ದರು’ ಎಂದು ಮಹಿಳೆ ದೂರಿನಲ್ಲಿ ತಿಳಿಸಿದ್ದಾಳೆ.
2013ರಲ್ಲಿ ತಾನು ಗರ್ಭವತಿಯಾದಾಗ ಮಹಾರಾಜ್ ಕೆಲವು ಶಾಲಾ ಸಿಬ್ಬಂದಿ ಜೊತೆ ತನ್ನನ್ನು ಬೆರ್ಹಾಮಪುರದ ಆಸ್ಪತ್ರೆಯೊಂದಕ್ಕೆ ಕರೆದೊಯ್ದು ಬಲವಂತದಿಂದ ಗರ್ಭಪಾತ ಮಾಡಿಸಿದ್ದರು ಎಂದು ಆರೋಪಿಸಿರುವ ಮಹಿಳೆ, ಆದರೂ ತನ್ನನ್ನು ನೇಮಕ ಮಾಡಿಕೊಳ್ಳಬಹುದು ಎಂಬ ಭರವಸೆಯೊಂದಿಗೆ ತಾನು ಕಾಯುತ್ತಿದ್ದೆ. ಆದರೆ ತನ್ನ ಮೇಲೆ ಅವರ ಲೈಂಗಿಕ ದೌರ್ಜನ್ಯ ಮುಂದುವರಿದಿತ್ತು. ಅಂತಿಮವಾಗಿ ತಾನು ಖಿನ್ನತೆಗೊಳಗಾಗಿದ್ದೆ ಎಂದು ಹೇಳಿದ್ದಾಳೆ.
ಜೂ.12ರಂದು ತಾನು ಮಹಾರಾಜ್‌ಗೆ ಕರೆಯನ್ನು ಮಾಡಿದ್ದು,ಜೂ.13ರಂದು ಸಂಜೆ ಏಳು ಗಂಟೆಗೆ ಬೆರ್ಹಾಮಪುರದ ನಿರ್ದಿಷ್ಟ ಸ್ಥಳದಲ್ಲಿ ಕಾಯುವಂತೆ ಮತ್ತು ತನ್ನನ್ನು ಕರೆದೊಯ್ಯಲು ಇಬ್ಬರು ವ್ಯಕ್ತಿಗಳನ್ನು ಕಳುಹಿಸುವುದಾಗಿ ಅವರು ತಿಳಿಸಿದ್ದರು. ಆ ವ್ಯಕ್ತಿಗಳು ಬಂದಾಗ ತಾನು ಅವರ ಕಾರನ್ನು ಹತ್ತಿದ್ದೆ. ತನಗೆ ಬೆದರಿಕೆಯೊಡ್ಡಿದ್ದ ಅವರು ಮತ್ತೆ ಮಹಾರಾಜ್ ರನ್ನು ಸಂಪರ್ಕಿಸದಂತೆ ಎಚ್ಚರಿಕೆ ನೀಡಿದ್ದರು. ತನ್ನನ್ನು ನಿಂದಿಸಿದ್ದ ಅವರು ಕಾರಿನಿಂದ ಹೊರಕ್ಕೆ ತಳ್ಳಿದ್ದರು ಎಂದೂ ಮಹಿಳೆ ಆರೋಪಿಸಿದ್ದಾಳೆ.