ಜೀವ ಬೆದರಿಕೆ ಹಿನ್ನೆಲೆ: ದಲೈ ಲಾಮಾರಿಗೆ ಝೆಡ್ ದರ್ಜೆಯ ಭದ್ರತೆಗೆ ಕೇಂದ್ರದ ಅನುಮೋದನೆ
PC | PTI
ಹೊಸದಿಲ್ಲಿ: ಟಿಬೆಟ್ ನ ಆಧ್ಯಾತ್ಮಿಕ ನಾಯಕ ದಲೈ ಲಾಮಾರಿಗೆ ಜೀವ ಬೆದರಿಕೆ ಪ್ರಮಾಣ ಹೆಚ್ಚಿದೆ ಎಂಬ ಮಾಹಿತಿಯ ಹಿನ್ನೆಲೆಯಲ್ಲಿ ಕೇಂದ್ರ ಸರಕಾರ ಅವರಿಗೆ ಝೆಡ್ ದರ್ಜೆಯ ಭದ್ರತೆಯನ್ನು ಮಂಜೂರು ಮಾಡಿದೆ. ದಲೈ ಲಾಮಾರ ಭದ್ರತೆಯ ಹೊಣೆಗಾರಿಕೆಯನ್ನು ಕೈಗೆತ್ತಿಕೊಳ್ಳುವಂತೆ ಕೇಂದ್ರ ಗೃಹ ಸಚಿವಾಲಯವು ಕೇಂದ್ರೀಯ ಮೀಸಲು ಪೊಲೀಸ್ ಪಡೆಗೆ ನಿರ್ದೇಶನ ನೀಡಿದೆ ಎಂದು ಗುರುವಾರ ಅಧಿಕೃತ ಮೂಲಗಳು ದೃಢಪಡಿಸಿವೆ.
89 ವರ್ಷದ ಆಧ್ಯಾತ್ಮಿಕ ನಾಯಕರಾದ ದಲೈ ಲಾಮಾರಿಗೆ ಅಂದಾಜು 30 ಮಂದಿ CRPF ಕಮಾಂಡೊಗಳ ತಂಡವು ಪಾಳೆಯಲ್ಲಿ ಭದ್ರತೆ ಒದಗಿಸಲಿದೆ. ಅವರು ಭೇಟಿ ನೀಡುವ ಎಲ್ಲ ಪ್ರದೇಶಗಳಿಗೂ ಈ ಭದ್ರತೆ ವಿಸ್ತರಣೆಯಾಗಲಿದೆ. ಈ ಹಿಂದೆ ಅವರ ಪ್ರವಾಸದ ಸಂದರ್ಭಗಳಲ್ಲಿ ಸ್ಥಳೀಯ ಪಡೆಗಳ ನೆರವಿನೊಂದಿಗೆ ಹಿಮಾಚಲ ಪ್ರದೇಶ ಪೊಲೀಸರು ಅವರ ಭದ್ರತೆಯನ್ನು ನೋಡಿಕೊಳ್ಳುತ್ತಿದ್ದರು. ಆದರೆ, ಕೇಂದ್ರ ಗುಪ್ತಚರ ಸಂಸ್ಥೆಗಳ ಭದ್ರತಾ ಪರಾಮರ್ಶೆಯನ್ನಾಧರಿಸಿ ಅವರಿಗೆ ಹೆಚ್ಚು ಏಕರೂಪ ಹಾಗೂ ಸಮಗ್ರ ಭದ್ರತಾ ವ್ಯವಸ್ಥೆಗಳನ್ನು ಮಾಡಲು ನಿರ್ಧರಿಸಲಾಗಿದೆ.
ಇದೇ ಬಗೆಯ ನಡೆಯೊಂದರಲ್ಲಿ, ಮಣಿಪುರದಲ್ಲಿ ಬಿಜೆಪಿ ನಾಯಕ ಸಂಬಿತ್ ಪಾತ್ರಾರಿಗೂ ಝೆಡ್ ಶ್ರೇಣಿಯ ಭದ್ರತೆಯನ್ನು ವಿಸ್ತರಿಸಲಾಗಿದೆ. ಪುರಿ ಲೋಕಸಭಾ ಕ್ಷೇತ್ರದಿಂದ ಸಂಸದರಾಗಿರುವ ಸಂಬಿತ್ ಪಾತ್ರಾ, ಸುದೀರ್ಘ ಕಾಲದಿಂದ ಜನಾಂಗೀಯ ಹಿಂಸಾಚಾರಕ್ಕೆ ತುತ್ತಾಗಿರುವ ಮಣಿಪುರದಲ್ಲಿನ ಬಿಜೆಪಿಯ ವ್ಯವಹಾರಗಳ ಮೇಲುಸ್ತುವಾರಿ ವಹಿಸಿದ್ದಾರೆ.