×
Ad

ಇಂಡಿಯನ್ ಸೂಪರ್ ಲೀಗ್: ಧೋನಿ ತಂಡ ಚೆನ್ನೈಯನ್ ಚಾಂಪಿಯನ್

Update: 2015-12-21 15:57 IST

ಭಾರತದ ಸೀಮಿತ ಓವರ್‌ಗಳ ಕ್ರಿಕೆಟ್ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ಅವರ ಫುಟ್ಬಾಲ್ ತಂಡ ಎಫ್‌ಸಿ ಚೆನ್ನೈಯಿನ್ ಇಲ್ಲಿ ನಡೆದ ಐಎಎಸ್‌ಎಲ್‌ನ ಫೈನಲ್‌ನಲ್ಲಿ ಟೆಸ್ಟ್ ತಂಡದ ನಾಯಕ ವಿರಾಟ್ ಕೊಹ್ಲಿಯ ಎಫ್‌ಸಿ ಗೋವಾ ಫುಟ್ಬಾಲ್ ತಂಡವನ್ನು ಮಣಿಸಿ ಪ್ರಶಸ್ತಿಯನ್ನು ಬಾಚಿಕೊಂಡಿದೆ.


ಫಟೊರ್ಡಾದ ಜವಾಹರ್‌ಲಾಲ್ ನೆಹರೂ ಸ್ಟೇಡಿಯಂನಲ್ಲಿ ಇಂದು ನಡೆದ ಇಂಡಿಯನ್ ಸೂಪರ್ ಲೀಗ್(ಐಎಸ್‌ಎಲ್) ಫೈನಲ್‌ನಲ್ಲಿ ಚೆನ್ನೈಯಿನ್ ತಂಡ ಗೋವಾ ತಂಡವನ್ನು 3-2 ಅಂತರದಲ್ಲಿ ಮಣಿಸಿ ಚಾಂಪಿಯನ್ ಎನಿಸಿಕೊಂಡಿತು.


ಕುತೂಹಲ ಕೆರಳಿಸಿದ್ದ ಪಂದ್ಯದಲ್ಲಿ ಎಫ್‌ಸಿ ಗೋವಾ ತಂಡ ಚೊಚ್ಚಲ ಪ್ರಶಸ್ತಿ ಗೆಲ್ಲುವ ಅವಕಾಶವನ್ನು ಕಳೆದುಕೊಂಡಿತು.
 ಪ್ರಥಮಾರ್ಧದಲ್ಲಿ ಉಭಯ ತಂಡಗಳಿಂದಲೂ ಗೋಲು ದಾಖಲಾಗಿರಲಿಲ್ಲ. ಆದರೆ ದ್ವಿತೀಯಾರ್ಧ ದಲ್ಲಿ ಬ್ರುನೊ ಪೆಲ್ಲಿಸ್ಸರಿ (54ನೆ ನಿಮಿಷ) ಚೆನ್ನೈನ ಗೋಲು ಖಾತೆೆ ತೆರೆದಿದ್ದರು. ಮತ್ತೆ ನಾಲ್ಕು ನಿಮಿಷ ಕಳೆಯುವಷ್ಟರಲ್ಲಿ ಗೋವಾ ತಂಡದ ಥೊಂಗ್‌ಕೊಸಿಮ್ ಹಾವೊಕಿಪ್ (58ನೆ ನಿಮಿಷ) ಗೋಲು ಜಮೆ ಮಾಡಿ 1-1 ಸಮಬಲ ಸಾಧಿಸಿದ್ದರು.


  ಗೋವಾ ತಂಡದ ಜಾಫ್ರಿ 87ನೆ ನಿಮಿಷದಲ್ಲಿ ಗೋಲು ಸಂಪಾದಿಸಿ ಗೋವಾ ತಂಡ 2-1 ಮುನ್ನಡೆಗೆ ನೆರವಾಗಿದ್ದರು. ಇದು ಗೋವಾ ಪಾಲಿಗೆ ಗೆಲುನಿನ ಗೋಲು ಎಂದು ಭಾವಿಸಲಾಗಿತ್ತು. ಆದರೆ ಮತ್ತೆ ಮೂರು ನಿಮಿಷಗಳಲ್ಲಿ ಗೋವಾದ ಕೈಯಲ್ಲಿದ್ದ ಪಂದ್ಯ ಜಾರಿತು. 90ನೆ ನಿಮಿಷದಲ್ಲಿ ಗೋವಾ ತಂಡದ ಗೋಲು ಕೀಪರ್ ಲಕ್ಷ್ಮೀಕಾಂತ್ ಕಟ್ಟಿಮನಿ ಮಾಡಿದ ಎಡವಟ್ಟಿನಿಂದಾಗಿ ಚೆನ್ನೈ ಖಾತೆಗೆ ಸ್ವಯಂ ಗೋಲು ಉಡುಗೊರೆ ಸಿಕ್ಕಿತು. ಇದರ ಬೆನ್ನಿಗೆ ಮೆಂಡೊನ್ಸಾ ವೆಲೆನ್ಸಿಯಾ ಗೋಲು ಬಾರಿಸುವುದರೊಂದಿಗೆ ಚೆನ್ನೈ ತಂಡ ಎರಡನೆ ಅವೃತ್ತಿಯ ಐಎಎಸ್‌ಎಲ್ ಕಿರೀಟವನ್ನು ತನ್ನದಾಗಿಸಿಕೊಂಡಿತು.
 ಮೆಂಡೊನ್ಸಾ ಗೆಲುವಿನ ಗೋಲು ದಾಖಲಿಸುವು ದರೊಂದಿಗೆ ಚೆನ್ನೈ ಎಫ್‌ಸಿಗೆ ತಾನೊಬ್ಬ ಅರ್ಹ ಆಟಗಾರ ಎನ್ನುವುದನ್ನು ಅವರು ಸಾಬೀತುಪಡಿಸಿದರು. ಚೆನ್ನೈ ತಂಡಕ್ಕೆ ತವರಿನಲ್ಲಿ ಭಾರೀ ಮಳೆ ಮತ್ತು ಪ್ರವಾಹ ದಿಂದಾಗಿ ಆಡಲು ಸಾಧ್ಯವಾಗಲಿಲ್ಲ. ಅಂತಿಮ ಕ್ಷಣದಲ್ಲಿ ದಾಖಲಾದ ಗೋಲುಗಳು ಪಂದ್ಯದ ಫಲಿತಾಂಶವನ್ನು ನಿರ್ಣಯಿಸಿತು.


ಗೋವಾ ತಂಡ ಹಲವು ಏಳುಬೀಳುಗಳ ನಡುವೆ ಫೈನಲ್ ಪ್ರವೇಶಿಸಿತ್ತು. 29 ಗೋಲು ಸಂಪಾದಿಸಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಪಡೆದಿದ್ದ ಗೋವಾ ತಂಡ ಫೈನಲ್‌ನಲ್ಲಿ ಎಡವಿತು.
ಈ ಆವೃತ್ತಿಯ ಐಎಸ್‌ಎಲ್‌ನಲ್ಲಿ ದಾಖಲೆಯ ಗೋಲು ದಾಖಲಾಗಿತ್ತು ಕಳೆದ ವರ್ಷ 121 ಗೋಲು ದಾಖಲಾಗಿತ್ತು. ಈ ಸಾಲಿನಲ್ಲಿ 60 ಪಂದ್ಯಗಳಲ್ಲಿ 186 ಗೋಲು ಜಮೆ ಆಗಿದೆ. ಗೋವಾದಲ್ಲಿ ನಡೆದ ಫೈನಲ್‌ನಲ್ಲಿ 5 ಗೋಲುಗಳು ಬಂದಿವೆ. ಅದರಲ್ಲೂ ಮುಖ್ಯವಾಗಿ ದ್ವಿತೀಯಾರ್ಧದಲ್ಲಿ ಗೋಲುಗಳು ದಾಖಲಾಗಿದೆ.


ವಿಜೇತ ಚೆನ್ನೈ ತಂಡ 8 ಕೋಟಿ ರೂ, ದ್ವಿತೀಯ ಸ್ಥಾನ ಪಡೆದ ಗೋವಾ 4 ಕೋಟಿ ರೂ. ಮೊತ್ತದ ಬಹುಮಾನ ಪಡೆಯಿತು.
 ನೀತಾ ಅಂಬಾನಿ ಬಹುಮಾನ ವಿತರಿಸಿದರು.ಚೆನ್ನೈಯಿನ್ ಎಫ್‌ಸಿಯ ಸ್ಟೀವನ್ ಮೆಂಡೊನ್ಸಾ ‘ಗೋಲ್ಡನ್ ಬೂಟ್’ ಮತ್ತು ‘ಹೀರೊ ಆಫ್ ಲೀಗ್ ಅವಾರ್ಡ್’ ಚೆನ್ನೈ ತಂಡದ ಗೋಲ್ ಕೀಪರ್ ಅಪೋಲಾ ಎಡ್ಮಿಯಾ ಎಡೆಲ್ ಬೇಟೆ ‘ಗೋಲ್ಡನ್ ಗ್ಲೌವ್, ಚೆನ್ನೈನ ಜೀಜೆ ಉದಯೋನ್ಮುಖ ಆಟಗಾರ ಪ್ರಶಸ್ತಿ ಪಡೆದರು.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News