ಎರಡನೆ ಟೆಸ್ಟ್: ಆಸ್ಟ್ರೇಲಿಯಕ್ಕೆ ಭರ್ಜರಿ ಜಯ, ಸರಣಿ ಕೈ ವಶ

Update: 2015-12-30 11:42 GMT

ಮೆಲ್ಬೋರ್ನ್, ಡಿ.29: ಆಲ್‌ರೌಂಡರ್ ಮಿಚೆಲ್ ಮಾರ್ಷ್ ಅವರ ಅಮೋಘ ಬೌಲಿಂಗ್ ನೆರವಿನಿಂದ ಆಸ್ಟ್ರೇಲಿಯ ತಂಡ ವೆಸ್ಟ್‌ಇಂಡೀಸ್ ವಿರುದ್ಧದ ಎರಡನೆ ಟೆಸ್ಟ್ ಪಂದ್ಯವನ್ನು 177 ರನ್‌ಗಳ ಅಂತರದಿಂದ ಗೆದ್ದುಕೊಂಡಿತು.

ಹೊಬರ್ಟ್‌ನಲ್ಲಿ ನಡೆದಿದ್ದ ಮೊದಲ ಪಂದ್ಯವನ್ನು ಇನಿಂಗ್ಸ್ ಹಾಗೂ 212 ರನ್‌ಗಳ ಅಂತರದಿಂದ ಗೆದ್ದುಕೊಂಡಿದ್ದ ಆಸ್ಟ್ರೇಲಿಯ ಫ್ರಾಂಕ್ ವೋರೆಲ್ ಟ್ರೋಫಿಯನ್ನು ತನ್ನಲ್ಲೇ ಉಳಿಸಿಕೊಂಡಿದೆ.

ನಾಲ್ಕನೆ ದಿನವಾದ ಮಂಗಳವಾರ ಆಸ್ಟ್ರೇಲಿಯ ಎರಡನೆ ಇನಿಂಗ್ಸ್‌ನ್ನು 3 ವಿಕೆಟ್‌ಗೆ 179 ರನ್‌ಗೆ ಡಿಕ್ಲೇರ್ ಮಾಡಿ ವೆಸ್ಟ್‌ಇಂಡೀಸ್ ಗೆಲುವಿಗೆ 460 ರನ್ ಗುರಿ ನೀಡಿತು. ತಾಳ್ಮೆಯಿಂದ ಬ್ಯಾಟಿಂಗ್ ಮಾಡಿದ ವಿಂಡೀಸ್ ಟೀ ವಿರಾಮದ ವೇಳೆಗೆ 4 ವಿಕೆಟ್ ನಷ್ಟಕ್ಕೆ 146 ರನ್ ಗಳಿಸಿತ್ತು. ಪಂದ್ಯವನ್ನು ಐದನೆ ದಿನಕ್ಕೆ ಕೊಂಡೊಯ್ಯುವ ಸೂಚನೆ ನೀಡಿತ್ತು.

 ಆದರೆ, ಆಗ ದಾಳಿಗೆ ಇಳಿದ ಮಾರ್ಷ್(4-61) ವಿಂಡೀಸ್‌ನ ದಿಢೀರ್ ಕುಸಿತಕ್ಕೆ ನಾಂದಿ ಹಾಡಿದರು. ಮೂರು ವಿಕೆಟ್‌ಗಳನ್ನು ಕಬಳಿಸಿದ ಆಫ್-ಸ್ಪಿನ್ನರ್ ನಥಾನ್ ಲಿಯೊನ್(3-85) ವೆಸ್ಟ್‌ಇಂಡೀಸ್‌ನ್ನು 282 ರನ್‌ಗೆ ಆಲೌಟ್ ಮಾಡಲು ನೆರವಾದರು. ನಾಯಕ ಜಾಸನ್ ಹೋಲ್ಡರ್(68ರನ್, 86 ಎಸೆತ) ಹಾಗೂ ವಿಕೆಟ್‌ಕೀಪರ್-ದಾಂಡಿಗ ದಿನೇಶ್ ರಾಮ್ದಿನ್(59 ರನ್, 90 ಎಸೆತ) ಆರನೆ ವಿಕೆಟ್‌ಗೆ ಮಿಂಚಿನ ವೇಗದಲ್ಲಿ ಶತಕದ ಜೊತೆಯಾಟ ನಡೆಸಿದರೂ ತಂಡವನ್ನು ಹೀನಾಯ ಸೋಲಿನಿಂದ ಪಾರು ಮಾಡಲು ಸಾಧ್ಯವಾಗಲಿಲ್ಲ. ಹೋಲ್ಡರ್ ಹಾಗೂ ರಾಮ್ದಿನ್ ಸರಣಿಯಲ್ಲಿ ತಂಡದ ಪರ ಮೊದಲ ಶತಕದ ಜೊತೆಯಾಟ ನಡೆಸಿದರು.

ವಿಂಡೀಸ್ ಮೇ 2012ರ ನಂತರ ಇದೇ ಮೊದಲ ಬಾರಿ ಎರಡೂ ಇನಿಂಗ್ಸ್‌ನಲ್ಲಿ 80ಕ್ಕಿಂತ ಹೆಚ್ಚು ಓವರ್ ಬ್ಯಾಟಿಂಗ್ ಮಾಡಿತು. ವಿಂಡೀಸ್ ಲಾರ್ಡ್ಸ್‌ನಲ್ಲಿ ಇಂಗ್ಲೆಂಡ್ ವಿರುದ್ಧ ಕೊನೆಯ ಬಾರಿ ಈ ಸಾಧನೆ ಮಾಡಿತ್ತು.

ಪಂದ್ಯದಲ್ಲಿ ಒಟ್ಟು ಏಳು ವಿಕೆಟ್‌ಗಳನ್ನು ಕಬಳಿಸಿದ್ದ ಆಸೀಸ್ ಸ್ಪಿನ್ನರ್ ನಥಾನ್ ಲಿಯೊನ್ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.

 ಉಭಯ ತಂಡಗಳ ನಡುವಿನ ಮೂರನೆ ಹಾಗೂ ಅಂತಿಮ ಪಂದ್ಯ ರವಿವಾರ ಸಿಡ್ನಿಯಲ್ಲಿ ಆರಂಭವಾಗಲಿದೆ. ಇದಕ್ಕೆ ಮೊದಲು ಆಸ್ಟ್ರೇಲಿಯ ಸೋಮವಾರದ ಸ್ಕೋರ್ 3 ವಿಕೆಟ್ ನಷ್ಟಕ್ಕೆ 179 ರನ್‌ಗೆ ಇನಿಂಗ್ಸ್ ಡಿಕ್ಲೇರ್ ಮಾಡಿತು. ಎರಡು ದಿನಗಳ ಆಟದಲ್ಲಿ 460 ರನ್ ಗಳಿಸುವ ಕಠಿಣ ಸವಾಲು ನೀಡಿತು.

ಔಟಾಗದೆ 70 ರನ್ ಗಳಿಸಿದ್ದ ಆಸೀಸ್ ನಾಯಕ ಸ್ಮಿತ್ 2015ನೆ ಸಾಲಿನಲ್ಲಿ 73.70ರ ಸರಾಸರಿಯಲ್ಲಿ 1,474 ರನ್ ಗಳಿಸಿದ್ದಾರೆ. ಡರ್ಬನ್‌ನಲ್ಲಿ ದಕ್ಷಿಣ ಆಫ್ರಿಕದ ವಿರುದ್ಧ ಮೊದಲ ಟೆಸ್ಟ್ ಪಂದ್ಯವನ್ನು ಆಡುತ್ತಿರುವ ಇಂಗ್ಲೆಂಡ್‌ನ ದಾಂಡಿಗ ಜೋ ರೂಟ್(1,385) ಎರಡನೆ ಗರಿಷ್ಠ ಸ್ಕೋರ್ ಗಳಿಸಿದ್ದಾರೆ.

 ಸಂಕ್ಷಿಪ್ತ ಸ್ಕೋರ್

ಆಸ್ಟ್ರೇಲಿಯ ಪ್ರಥಮ ಇನಿಂಗ್ಸ್: 551/3 ಡಿಕ್ಲೇರ್

ವೆಸ್ಟ್‌ಇಂಡೀಸ್ ಪ್ರಥಮ ಇನಿಂಗ್ಸ್: 271 ರನ್‌ಗೆ ಆಲೌಟ್

ಆಸ್ಟ್ರೇಲಿಯ ದ್ವಿತೀಯ ಇನಿಂಗ್ಸ್: 179/3 ಡಿಕ್ಲೇರ್

ವೆಸ್ಟ್‌ಇಂಡೀಸ್ ದ್ವಿತೀಯ ಇನಿಂಗ್ಸ್: 88.3 ಓವರ್‌ಗಳಲ್ಲಿ 282 ರನ್‌ಗೆ ಆಲೌಟ್

(ಹೋಲ್ಡರ್ 68, ರಾಮ್ದಿನ್ 59, ಚಂದ್ರಿಕ 37, ಮಾರ್ಷ್ 4-61, ಲಿನ್ 3-85, ಪ್ಯಾಟಿನ್ಸನ್ 2-49)

ಪಂದ್ಯಶ್ರೇಷ್ಠ: ನಥನ್ ಲಿಯೊನ್(ಆಸ್ಟ್ರೇಲಿಯ).

 ನಂಬರ್ಸ್‌ ಗೇಮ್

8: ವೆಸ್ಟ್‌ಇಂಡೀಸ್ ತಂಡ 2015ರಲ್ಲಿ ಆಡಿರುವ 10 ಟೆಸ್ಟ್ ಪಂದ್ಯಗಳ ಪೈಕಿ 8ನೆ ಸೋಲು ಅನುಭವಿಸಿದೆ. ವಿಂಡೀಸ್ 2004 ಹಾಗೂ 2005ರಲ್ಲೂ 8 ಪಂದ್ಯಗಳಲ್ಲಿ ಸೋತಿತ್ತು. 2012: ವಿಂಡೀಸ್ ಲಾರ್ಡ್ಸ್‌ನಲ್ಲಿ ಮೇ 2012ರಲ್ಲಿ ಕೊನೆಯ ಬಾರಿ ಎರಡೂ ಇನಿಂಗ್ಸ್‌ನಲ್ಲಿ 80ಕ್ಕೂ ಅಧಿಕ ಓವರ್ ಬ್ಯಾಟಿಂಗ್ ಮಾಡಿತ್ತು. 48: ಆಸೀಸ್ ಸ್ಪಿನ್ನರ್ ನಥಾನ್ ಲಿಯೊನ್ 2015ರಲ್ಲಿ ಒಟ್ಟು 48 ವಿಕೆಟ್ ಕಬಳಿಸಿದ್ದಾರೆ. ಆರ್. ಅಶ್ವಿನ್(62) ಹಾಗೂ ಯಾಸಿರ್ ಶಾ(49) ನಂತರ ಅತ್ಯಂತ ಹೆಚ್ಚು ವಿಕೆಟ್ ಕಬಳಿಸಿದ ಮೂರನೆ ಸ್ಪಿನ್ನರ್ ಲಿನ್.

2: ಲಿಯೊನ್ ಎರಡನೆ ಬಾರಿ ಪಂದ್ಯಶ್ರೇಷ್ಠ ಗೌರವಕ್ಕೆ ಪಾತ್ರರಾದರು. ಕಳೆದ ವರ್ಷ ಅಡಿಲೇಡ್‌ನಲ್ಲಿ ಭಾರತ ವಿರುದ್ಧ ಈ ಗೌರವ ಪಡೆದಿದ್ದರು.

 12: ಎಂಸಿಜಿಯಲ್ಲಿ ನಡೆದ ಕಳೆದ 13 ಟೆಸ್ಟ್ ಪಂದ್ಯಗಳಲ್ಲಿ 12ನೆ ಬಾರಿ ಸ್ಪಷ್ಟ ಫಲಿತಾಂಶ ಬಂದಿದೆ. ಕಳೆದ ವರ್ಷ ಭಾರತ ವಿರುದ್ಧ ಪಂದ್ಯ ಮಾತ್ರ ಡ್ರಾಗೊಂಡಿತ್ತು. ಉಳಿದ 12 ಪಂದ್ಯಗಳಲ್ಲಿ ತಂಡ ಗರಿಷ್ಠ ಅಂತರದ ಗೆಲುವು ಸಾಧಿಸಿದೆ. 4/61: ಮಿಚೆಲ್ ಮಾರ್ಷ್ ವೆಸ್ಟ್‌ಇಂಡೀಸ್ ವಿರುದ್ಧದ ಎರಡನೆ ಇನಿಂಗ್ಸ್‌ನಲ್ಲಿ ಜೀವನಶ್ರೇಷ್ಠ ಬೌಲಿಂಗ್ ಮಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News