ಏಷ್ಯನ್ ಶೂಟಿಂಗ್ ಟೂರ್ನಿ: ಹಿಂದೆ ಸರಿದ ಬಿಂದ್ರಾ

Update: 2015-12-31 13:13 GMT

ಹೊಸದಿಲ್ಲಿ, ಡಿ.30: ಭಾರತದ ಶೂಟರ್ ಅಭಿನವ್ ಬಿಂದ್ರಾ ಜನವರಿ ತಿಂಗಳಾಂತ್ಯದಲ್ಲಿ ನಡೆಯಲಿರುವ ಏಷ್ಯನ್ ಒಲಿಂಪಿಕ್ ಅರ್ಹತಾ ಶೂಟಿಂಗ್ ಸ್ಪರ್ಧೆಯಿಂದ ಹಿಂದೆ ಸರಿದಿದ್ದಾರೆ. ಮುಂಬರುವ ರಿಯೋ ಒಲಿಂಪಿಕ್ಸ್‌ನಲ್ಲಿ ಸಹ ಆಟಗಾರರಿಗೆ ಅರ್ಹತೆ ಗಿಟ್ಟಿಸಿಕೊಳ್ಳಲು ಅವಕಾಶ ಮಾಡಿಕೊಡುವ ಉದ್ದೇಶದಿಂದ ಬಿಂದ್ರಾ ಈ ನಿರ್ಧಾರ ಕೈಗೊಂಡಿದ್ದಾರೆ. ಬಿಂದ್ರಾ ಈಗಾಗಲೇ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದಿದ್ದಾರೆ.

 ಒಲಿಂಪಿಕ್ಸ್‌ಗೆ ಅರ್ಹತಾ ಟೂರ್ನಿಯಾಗಿರುವ ಏಷ್ಯನ್ ಒಲಿಂಪಿಕ್ಸ್ ಅರ್ಹತಾ ಶೂಟಿಂಗ್ ಟೂರ್ನಿಯು ಜ.25 ರಿಂದ ಫೆ.3ರ ತನಕ ನಡೆಯಲಿದೆ. ಚಾಂಪಿಯನ್‌ಶಿಪ್‌ನಲ್ಲಿ ತನ್ನ ಅನುಪಸ್ಥಿತಿಯು ಭಾರತದ ಇತರ ಶೂಟರ್‌ಗಳಿಗೆ ಒಲಿಂಪಿಕ್ಸ್ ಕೂಟದಲ್ಲಿ ಸ್ಥಾನ ಗಿಟ್ಟಿಸಿಕೊಳ್ಳಲು ನೆರವಾಗಲಿದೆ ಎಂದು 2008ರ ಬೀಜಿಂಗ್ ಒಲಿಂಪಿಕ್ಸ್‌ನಲ್ಲಿ ಪುರುಷರ 10 ಮೀ. ಏರ್‌ರೈಫಲ್ ಸ್ಪರ್ಧೆಯಲ್ಲಿ ಚಿನ್ನದ ಪದಕವನ್ನು ಜಯಿಸಿರುವ ಬಿಂದ್ರಾ ಹೇಳಿದ್ದಾರೆ.

 ಶೂಟಿಂಗ್‌ನಲ್ಲಿ ಶಾಟ್‌ಗನ್, ರೈಫಲ್ ಹಾಗೂ ಪಿಸ್ತೂಲ್ ವಿಭಾಗಗಳಲ್ಲಿ 35 ಒಲಿಂಪಿಕ್ಸ್ ಸ್ಥಾನಗಳು ಏಷ್ಯನ್ ದೇಶಗಳಿಗೆ ಕಾಯ್ದಿರಿಸಲಾಗಿದೆ. ಏಷ್ಯನ್ ಶೂಟಿಂಗ್ ಸ್ಪರ್ಧೆಯಿಂದ ಬಿಂದ್ರಾ ಮಾತ್ರವಲ್ಲ ಕೊರಿಯಾದ ಒಲಿಂಪಿಕ್ ಹಾಗೂ ವಿಶ್ವ ಚಾಂಪಿಯನ್ ಜಾಂಗ್ ಒ ಜಿನ್ ಕೂಡ ಸ್ಪರ್ಧಿಸುತ್ತಿಲ್ಲ. ಜೋ ನವೆಂಬರ್‌ನಲ್ಲಿ ಕುವೈಟ್‌ನಲ್ಲಿ ನಡೆದಿದ್ದ ಏಷ್ಯನ್ ಶೂಟಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಭಾಗವಹಿಸಿದ್ದಾರೆ.

ಈ ಬಾರಿಯ ಏಷ್ಯನ್ ಅರ್ಹತಾ ಶೂಟಿಂಗ್ ಸ್ಪರ್ಧೆಯಲ್ಲಿ ಆತಿಥೇಯ ಭಾರತದ ಪರ ಗಗನ್ ನಾರಂಗ್, ಜಿತು ರಾಯ್, ಪ್ರಕಾಶ್ ನಂಜಪ್ಪ, ಚೈನ್ ಸಿಂಗ್, ಗುರುಪ್ರೀತ್ ಸಿಂಗ್, ವಿಜಯ್ ಕುಮಾರ್, ಹೀನಾ ಸಿಧು ಹಾಗೂ ಮಾನವ್‌ಜಿತ್ ಸಂಧು ಸಹಿತ ಒಟ್ಟು 64 ಶೂಟರ್‌ಗಳು ಸ್ಪರ್ಧಿಸಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News