ವಿರಾಟ್ ಕೊಹ್ಲಿಗೆ ಬಿಸಿಸಿಐನ 'ವರ್ಷದ ಕ್ರಿಕೆಟಿಗ ಪ್ರಶಸ್ತಿ'
ಕೆಎಸ್‌ಸಿಎಗೆ ಶ್ರೇಷ್ಠ ಕ್ರಿಕೆಟ್ ಸಂಸ್ಥೆ ಗೌರವ, ಉತ್ತಪ್ಪಗೆ ಮಾಧವ್‌ರಾವ್ ಸಿಂದಿಯಾ ಟ್ರೋಫಿ
ಹೊಸದಿಲ್ಲಿ, ಡಿ.31: ಭಾರತದ ಟೆಸ್ಟ್ ತಂಡದ ನಾಯಕ ವಿರಾಟ್ ಕೊಹ್ಲಿ ಬಿಸಿಸಿಐನ ವರ್ಷದ ಕ್ರಿಕೆಟಿಗ ಹಾಗೂ ಮಿಥಾಲಿ ರಾಜ್ ಅವರು ವರ್ಷದ ಮಹಿಳಾ ಆಟಗಾರ್ತಿ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ಜ.5 ರಂದು ಮುಂಬೈನಲ್ಲಿ ನಡೆಯಲಿರುವ ಬಿಸಿಸಿಐ ವಾರ್ಷಿಕ ಸಮಾರಂಭದಲ್ಲಿ ಪ್ರಶಸ್ತಿಗಳನ್ನು ವಿತರಿಸಲಾಗುತ್ತದೆ. 27ರ ಹರೆಯದ ದಿಲ್ಲಿಯ ದಾಂಡಿಗ ಕೊಹ್ಲಿ ಆಸ್ಟ್ರೇಲಿಯದ ಪ್ರವಾಸದ ವೇಳೆ ಟೆಸ್ಟ್ ತಂಡದ ನಾಯಕನಾಗಿ ಆಯ್ಕೆಯಾಗಿದ್ದರು. ಕೊಹ್ಲಿ ನಾಯಕತ್ವದಲ್ಲಿ ಭಾರತ 22 ವರ್ಷಗಳ ಬಳಿಕ ಶ್ರೀಲಂಕಾ ನೆಲದಲ್ಲಿ ಟೆಸ್ಟ್ ಸರಣಿಯನ್ನು ಜಯಿಸಿತ್ತು. ಸ್ವದೇಶದಲ್ಲಿ ನಡೆದಿದ್ದ ದಕ್ಷಿಣ ಆಫ್ರಿಕ ವಿರುದ್ಧದ ಟೆಸ್ಟ್ ಸರಣಿಯನ್ನು ಗೆದ್ದುಕೊಂಡಿತ್ತು. ಆಫ್ರಿಕ ತಂಡ 9 ವರ್ಷಗಳ ಬಳಿಕ ವಿದೇಶಿ ನೆಲದಲ್ಲಿ ಸರಣಿಯನ್ನು ಕಳೆದುಕೊಂಡಿತ್ತು.
ಬ್ಯಾಟಿಂಗ್‌ನಲ್ಲೂ ಉತ್ತಮ ಪ್ರದರ್ಶನ ನೀಡಿರುವ ಬಲಗೈ ದಾಂಡಿಗ ಕೊಹ್ಲಿ 15 ಟೆಸ್ಟ್ ಇನಿಂಗ್ಸ್‌ಗಳಲ್ಲಿ 640 ರನ್, 20 ಏಕದಿನಗಳಲ್ಲಿ 623 ರನ್ ಗಳಿಸಿದ್ದಾರೆ. ಮತ್ತೊಂದೆಡೆ, ಮಿಥಾಲಿ ರಾಜ್ ಈ ವರ್ಷ ಏಕದಿನ ಕ್ರಿಕೆಟ್‌ನಲ್ಲಿ 5,000 ರನ್ ಪೂರೈಸಿದ ಭಾರತದ ಮೊದಲ ಆಟಗಾರ್ತಿ ಎಂಬ ಕೀರ್ತಿಗೆ ಭಾಜನರಾಗಿದ್ದರು. ಮಿಥಾಲಿ ಶ್ರೇಷ್ಠ ಮಹಿಳಾ ಕ್ರಿಕೆಟರ್‌ಗೆ ನೀಡಲಾಗುವ ಎಂಎ ಚಿದಂಬರಂ ಟ್ರೋಫಿಯನ್ನು ಸ್ವೀಕರಿಸಲಿದ್ದಾರೆ.
ಭಾರತದ ಮಾಜಿ ವಿಕೆಟ್‌ಕೀಪರ್ ಸೈಯದ್ ಕಿರ್ಮಾನಿಗೆ ಕರ್ನಲ್ ಸಿಕೆ ನಾಯ್ಡು ಜೀವಮಾನ ಸಾಧನಾ ಪ್ರಶಸ್ತಿ ನೀಡಲಾಗುತ್ತದೆ.
ಕರ್ನಾಟಕದ ರಾಜ್ಯ ಕ್ರಿಕೆಟ್ ಸಂಸ್ಥೆಯು(ಕೆಎಸ್‌ಸಿಎ) ವರ್ಷದ ರಾಜ್ಯ ಕ್ರಿಕೆಟ್ ಸಂಸ್ಥೆ ಪ್ರಶಸ್ತಿಗೆ ಆಯ್ಕೆಯಾಗಿದೆ. ಕರ್ನಾಟಕ ತಂಡ 2014-15ರ ಋತುವಿನಲ್ಲಿ ರಣಜಿ ಟ್ರೋಫಿ, ಇರಾನಿ ಕಪ್ ಹಾಗೂ ವಿಜಯ್ ಹಝಾರೆ ಟ್ರೋಫಿಯನ್ನು ಜಯಿಸಿತ್ತು.
ರಣಜಿ ಟ್ರೋಫಿಯಲ್ಲಿ ಗರಿಷ್ಠ ಸ್ಕೋರ್ ದಾಖಲಿಸಿರುವ ಕರ್ನಾಟಕದ ಆಲ್‌ರೌಂಡರ್ ರಾಬಿನ್ ಉತ್ತಪ್ಪ ಮಾಧವ್‌ರಾವ್ ಸಿಂಧಿಯಾ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಉತ್ತಪ್ಪ 11 ಪಂದ್ಯಗಳಲ್ಲಿ ಒಟ್ಟು 912 ರನ್ ಗಳಿಸಿದ್ದಾರೆ.
ವರ್ಷದ ಶ್ರೇಷ್ಠ ಬೌಲರ್ ಪ್ರಶಸ್ತಿಯನ್ನು ಕರ್ನಾಟಕದ ಆರ್. ವಿನಯಕುಮಾರ್ ಹಾಗೂ ಮುಂಬೈನ ಶಾರ್ದೂಲ್ ಠಾಕೂರ್ ಹಂಚಿಕೊಂಡಿದ್ದಾರೆ. ಈ ಇಬ್ಬರು ಬೌಲರ್‌ಗಳು ಕಳೆದ ಆವೃತ್ತಿಯ ರಣಜಿಯಲ್ಲಿ ತಲಾ 48 ವಿಕೆಟ್‌ಗಳನ್ನು ಕಬಳಿಸಿದ್ದರು.