ಸೇನಾಪೂರೈಕೆದಾರ ರಾಷ್ಟ್ರಗಳೊಂದಿಗೆ ಸಮಾಲೋಚನೆ ಅಗತ್ಯ: ಭದ್ರತಾ ಮಂಡಳಿ

Update: 2016-01-01 18:35 GMT

ವಿಶ್ವಸಂಸ್ಥೆ, ಜ.1: ಶಾಂತಿಪಾಲನಾ ನಿಯಮಾವಳಿಗೆ ಸಂಬಂಧಿಸಿದಂತೆ ಸೇನಾ ನೆರವು ನೀಡುತ್ತಿರುವ ರಾಷ್ಟ್ರಗಳೊಂದಿಗೆ ಸಮರ್ಪಕವಾಗಿ ಸಮಾಲೋಚನೆ ನಡೆಸಲಾಗುತ್ತಿಲ್ಲವೆಂಬ ಭಾರತದ ಅಭಿಪ್ರಾಯವನ್ನು ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಒಪ್ಪಿಕೊಂಡಿದೆ.
ಶಾಂತಿಪಾಲನಾ ಕಾರ್ಯಾಚರಣೆಯಲ್ಲಿ ಪರಿಣಾಮಕಾರಿ ಸಮಾಲೋಚನೆಯ ಮಹತ್ವ ಹಾಗೂ ಕಾರ್ಯಾಚರಣೆಯ ಸುಧಾರಣೆಗೆ ಸದಸ್ಯ ರಾಷ್ಟ್ರಗಳ ಸಂಪೂರ್ಣ ಸಹಭಾಗಿತ್ವದ ಬಗ್ಗೆಯೂ ಅದು ಇದೇ ಸಂದರ್ಭದಲ್ಲಿ ಒತ್ತು ನೀಡಿದೆ.
 ಶಾಂತಿಪಾಲನಾ ನಿಯಮಾವಳಿ ರೂಪಿಸುವಲ್ಲಿ ಭದ್ರತಾ ಮಂಡಳಿಯ ಉತ್ತರದಾಯಿತ್ವ ಹಾಗೂ ಪಾರದರ್ಶಕತೆಯ ಬಗ್ಗೆ ಭಾರತವು ಟೀಕಿಸುತ್ತಲೇ ಬಂದಿದೆ.


ಮಾತ್ರವಲ್ಲದೆ ಶಾಂತಿಪಾಲನಾ ಪಡೆಗಳ ಕಾರ್ಯಶೈಲಿಯಲ್ಲಿ ಸುಧಾರಣೆಯಾಗದಿದ್ದಲ್ಲಿ ಶಾಂತಿಪಾಲಕ ಯೋಧರು ಹಾಗೂ ನಾಗರಿಕರು ಸಾವಿಗೀಡಾಗುವ ಪ್ರಮಾಣದಲ್ಲಿ ಹೆಚ್ಚಳ ಉಂಟಾಗಬಹುದು ಎಂದು ಭಾರತ ಒತ್ತಿ ಹೇಳಿದೆ.
 ಶಾಂತಿಪಾಲನೆ ಪಡೆಗಳಿಗೆ ಸಂಬಂಧಿಸಿದ ನಿಯಮಾವಳಿ ರೂಪಿಸುವ ಸಂದರ್ಭದಲ್ಲಿ ಸೇನಾ ನೆರವು ನೀಡುವ ರಾಷ್ಟ್ರಗಳ ಜೊತೆಗೆ ಸಮಾಲೋಚನೆ ನಡೆಸುವುದು ಅತ್ಯಗತ್ಯ ಎಂದು ಕಳೆದ ತಿಂಗಳು ಹುದ್ದೆಯಿಂದ ನಿವೃತ್ತಿಗೊಂಡಿರುವ ವಿಶ್ವಸಂಸ್ಥೆಗೆ ಭಾರತದ ಖಾಯಂ ಪ್ರತಿನಿಧಿ ಅಶೋಕ್ ಮುಖರ್ಜಿ ಹಲವು ಸಂದರ್ಭಗಳಲ್ಲಿ ಹೇಳಿಕೆ ನೀಡಿದ್ದರು.


ವಿಶ್ವಸಂಸ್ಥೆಯ ಸನ್ನದಿನ ಕಲಂ 44ರ ಪ್ರಕಾರ ಭದ್ರತಾ ಮಂಡಳಿಯು ಶಾಂತಿಪಾಲನಾ ಪಡೆಗಳಿಗೆ ಯೋಧರನ್ನು ನಿಯೋಜಿಸುವ ನಿರ್ಧಾರ ಕೈಗೊಳ್ಳುವ ವೇಳೆ ಭದ್ರತಾ ಮಂಡಳಿಯ ಸದಸ್ಯತ್ವ ಹೊಂದಿರದ ರಾಷ್ಟ್ರಗಳ ಪ್ರತಿನಿಧಿಗಳಿಗೂ ಆಹ್ವಾನ ನೀಡಬೇಕಾಗುತ್ತದೆ ಎಂದವರು ವಿವರಿಸಿದ್ದರು.


ಪೊಲೀಸ್ ಹಾಗೂ ಸೇನಾ ನೆರವು ನೀಡುತ್ತಿರುವ ರಾಷ್ಟ್ರಗಳು ಯೋಜಿತ ಕಾರ್ಯಾಚರಣೆಗೆ ಅಗತ್ಯವಿರುವ ಯೋಧರ ಪ್ರಮಾಣ ಹಾಗೂ ಕಾರ್ಯವಿಧಾನ ನಿರ್ಣಯಿಸುವ ವಿಚಾರದಲ್ಲಿ ಮಹತ್ವದ ಪಾತ್ರ ವಹಿಸಲು ಸಾಧ್ಯ ಎಂದವರು ಅಭಿಪ್ರಾಯಿಸಿದ್ದರು.
ವಿಶ್ವಸಂಸ್ಥೆಯ ಶಾಂತಿಪಾಲನಾ ಪಡೆಗೆ ಅತಿ ಹೆಚ್ಚಿನ ಸಂಖ್ಯೆಯ ಯೋಧರನ್ನು ಒದಗಿಸುತ್ತಿರುವ ರಾಷ್ಟ್ರಗಳ ಪೈಕಿ ಭಾರತ ಅತಿದೊಡ್ಡ ರಾಷ್ಟ್ರವಾಗಿದ್ದು, ಶಾಂತಿಪಾಲನಾ ಕಾರ್ಯಾಚರಣೆಗೆ ನಿಯೋಜನೆಗೊಂಡಿರುವ 69 ಘಟಕಗಳ ಪೈಕಿ 49ಕ್ಕೆ ಸುಮಾರು 1,85,000ಕ್ಕಿಂತಲೂ ಹೆಚ್ಚಿನ ಸಂಖ್ಯೆಯ ಯೋಧರನ್ನು ಪೂರೈಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News